• ಹ್ಯಾಮಿಲ್ಟನ್ ಅಥವಾ ವೆಸ್ಟಾರ್ಪೆನ್: ಯಾರಾಗ್ತಾರೆ ಚಾಂಪಿಯನ್
• ಭಾನುವಾರ ಅಬುಧಾಬಿಯಲ್ಲಿ ನಡೆಯಲಿದೆ ವರ್ಷದ ಕೊನೆಯ ರೇಸ್
• ವರ್ಷದ ಕೊನೆಯ ರೇಸ್ ಅಲ್ಲಿ ನಿರ್ಧಾರವಾಗಲಿದ್ದಾರೆ ವಿಶ್ವ ಚಾಂಪಿಯನ್
ಬೆಂಗಳೂರು (ಡಿ.07): ಇತ್ತೀಚಿನ ವರ್ಷದ ಫಾರ್ಮುಲಾ ಒನ್ ರೇಸ್ (Formula 1 ) ಇತಿಹಾಸದಲ್ಲಿ ಇಂಥದ್ದೊಂದು ನಿಕಟ ವಿಶ್ವ ಚಾಂಪಿಯನ್ ಷಿಪ್ ಫೈಟ್ ನಡೆದಿದ್ದೇ ಇಲ್ಲ. ಮಾರ್ಚ್ 28 ರಂದು ನಡೆದ ಬಹರೇನ್ ಗ್ರ್ಯಾನ್ ಪ್ರೀಯಿಂದ (Bahrain Grand Prix) ಕಳೆದ ವಾರ ನಡೆದ ಸೌದಿ ಅರೇಬಿಯನ್ ಗ್ರ್ಯಾನ್ ಪ್ರಿಕ್ಸ್ (Saudi Arabian Grand Prix) ವರೆಗಿನ 21 ರೇಸ್ ಗಳ ಮುಕ್ತಾಯದ ವೇಳೆ ವಿಶ್ವ ಚಾಂಪಿಯನ್ ಷಿಪ್ ಪಟ್ಟಕ್ಕಾಗಿ ಇಬ್ಬರು ಡ್ರೈವರ್ಸ್ ಹೋರಾಟದಲ್ಲಿದ್ದಾರೆ. ಮರ್ಸೀಡೀಸ್ ತಂಡದ ಲೆವಿಸ್ ಹ್ಯಾಮಿಲ್ಟನ್ (Lewis Hamilton) ಹಾಗೂ ರೆಡ್ ಬುಲ್ ರೇಸಿಂಗ್ ಹೊಂಡಾ (Red Bull Racing Honda) ತಂಡದ ಮ್ಯಾಕ್ಸ್ ವೆಸ್ಟಾರ್ಪೆನ್ (Max Verstappen). ಇನ್ನೂ ವಿಶೇಷವಾದ ಅಂಶವೇನೆಂದರೆ, ಇಬ್ಬರೂ ಡ್ರೈವರ್ ಗಳ ಅಂಕ 369.5!
ಮುಂದಿನ ಭಾನುವಾರ (ಡಿ.12) ಅಬುಧಾಬಿಯಲ್ಲಿ (Abu Dhabi Grand Prix) ನಡೆಯಲಿರುವ ವರ್ಷದ ಕಟ್ಟಕಡೆಯ ರೇಸ್ ಅಲ್ಲಿ ವಿಶ್ವ ಚಾಂಪಿಯನ್ ಯಾರು ಅನ್ನೋದು ನಿರ್ಧಾರವಾಗುತ್ತೆ. ಇಬ್ಬರಲ್ಲಿ ಯಾವುದೇ ಡ್ರೈವರ್ ಮಾಡಲಿರುವ ಅತೀ ಸಣ್ಣ ತಪ್ಪು ಕೂಡ ವಿಶ್ವ ಚಾಂಪಿಯನ್ ಷಿಪ್ ಪಟ್ಟ ತಪ್ಪಿಹೋಗುವಂತೆ ಮಾಡಲಿದೆ.
ಭಾರತ ವೈರಸ್ ಮುಕ್ತವಾಗಲಿ; ಹ್ಯಾಮಿಲ್ಟನ್ ಹಾರೈಕೆ
ಇನ್ನೊಂದು ಗಮನಾರ್ಹ ಅಂಶವೇನೆಂದರೆ, 71 ವರ್ಷಗಳ ಫಾರ್ಮುಲಾ ಒನ್ ಇತಿಹಾಸದಲ್ಲಿ ಇಂಥದ್ದೊಂದು ಸಂದರ್ಭ ಎದುರಾಗಿದ್ದು ಒಮ್ಮೆ ಮಾತ್ರ. 1974ರ ವಿಶ್ವ ಚಾಂಪಿಯನ್ ಷಿಪ್ ಹೋರಾಟದಲ್ಲಿ ಬ್ರೆಜಿಲ್ ನ ಎಮರ್ಸನ್ ಫಿಟಿಫಾಲ್ಡಿ (Emerson Fittipaldi) ಹಾಗೂ ಸ್ವಿಜರ್ಲೆಂಡ್ ನ ಕ್ಲೇ ರೆಗ್ಗಜೋನಿ (Clay Regazzoni) ನಡುವೆ ಇಂಥದ್ದೊಂದು ಪೈಪೋಟಿ ನಡೆದಿತ್ತು. ಅಂದು ಫಿಟಿಫಾಲ್ಡಿ 55 ಅಂಕದೊಂದಿಗೆ ಚಾಂಪಿಯನ್ ಅಗಿದ್ದರೆ, 52 ಅಂಕ ಸಂಪಾದಿಸಿದ ರೆಗ್ಗಜೋನಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಆದರೆ, ಅಧುನಿಕ ಯುಗದ ಎಫ್ 1 ರೇಸ್ ನಲ್ಲಿ ಅಂತಿಮ ರೇಸ್ ವೇಳೆಗೆ ಅಗ್ರ ಇಬ್ಬರು ಚಾಲಕರ ಚಾಂಪಿಯನ್ ಷಿಪ್ ಅಂಕ ಟೈ ಆದ ಉದಾಹರಣೆ ಇಲ್ಲವೇ ಇಲ್ಲ. 2003, 2006, 2007, 2008, 2010, 2012, 2014 ಹಾಗೂ 2016ರಲ್ಲಿ ವಿಶ್ವ ಚಾಂಪಿಯನ್ ನಿರ್ಧಾರ ವರ್ಷದ ಅಂತಿಮ ರೇಸ್ ನಲ್ಲಿಯೇ ಆಗಿತ್ತಾದರೂ, ಈ ಎಲ್ಲಾ ಸಂದರ್ಭಗಳಲ್ಲಿ ಒಬ್ಬ ಡ್ರೈವರ್ ಆದರೂ ಅಂಕದಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದರು.
ಅಬುಧಾಬಿಯಲ್ಲಿ ಹ್ಯಾಮಿಲ್ಟನ್ ಅದ್ಭುತ ದಾಖಲೆ ಹೊಂದಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿ ನಡೆದ ರೇಸ್ ನಲ್ಲಿ ಐದು ಬಾರಿ ಹ್ಯಾಮಿಲ್ಟನ್ ಚಾಂಪಿಯನ್ ಆಗಿದ್ದರೆ, ಬೇರೆ ಯಾವ ಡ್ರೈವರ್ ಕೂಡ ಈ ದಾಖಲೆ ಮಾಡಿಲ್ಲ. ಇನ್ನೊಂದೆಡೆ ಮ್ಯಾಕ್ಸ್ ವೆಸ್ಟಾರ್ಪೆನ್ ಇತ್ತೀಚಿನ ರೇಸ್ ಗಳಲ್ಲಿ ಅದ್ಭುತ ವೇಗದ ಪ್ರದರ್ಶನ ನೀಡಿದ್ದಾರೆ, ಅದರೊಂದಿಗೆ ಕಠಿಣ ಸಮಯದಲ್ಲಿ ಚಾಣಾಕ್ಷ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ.
ಪ್ಯಾರಿಸ್ನಲ್ಲಿ ಪ್ರಜ್ಞೆಗೆ ಮರಳಿದ ಶುಮಾಕರ್!
ಬೆಲ್ಜಿಯಂನ (Belgium) ಮ್ಯಾಕ್ಸ್ ವೆಸ್ಟಾರ್ಪೆನ್ ತಮ್ಮ ಮೊಟ್ಟಮೊದಲ ವಿಶ್ವ ಚಾಂಪಿಯನ್ ಷಿಪ್ ಗೆಲ್ಲುವ ಗುರಿಯಲ್ಲಿದ್ದರೆ, ಇಂಗ್ಲೆಂಡ್ ನ (England) ಲೆವಿಸ್ ಹ್ಯಾಮಿಲ್ಟನ್ 8ನೇ ವಿಶ್ವ ಚಾಂಪಿಯನ್ ಷಿಪ್ ಗೆಲ್ಲುವ ಆಸೆಯಲ್ಲಿದ್ದಾರೆ. ಹಾಗೇನಾದರೂ ಹ್ಯಾಮಿಲ್ಟನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾದರೆ, ಎಫ್1 ಇತಿಹಾಸದ ಸರ್ವಶ್ರೇಷ್ಠ ಡ್ರೈವರ್ ಎನಿಸಿಕೊಳ್ಳಲಿದ್ದಾರೆ. ಎಫ್ 1 ಇತಿಹಾಸದ ಅತ್ಯಂತ ಯಶಸ್ವಿ ಡ್ರೈವರ್ ಗಳ ಪಟ್ಟಿಯಲ್ಲಿ ಜರ್ಮನಿಯ (Germany) ದಿಗ್ಗಜ ಚಾಲಕ ಮೈಕೆಲ್ ಶುಮಾಕರ್ (Michael Schumacher) ಜೊತೆ ಹ್ಯಾಮಿಲ್ಟನ್ ತಮ್ಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.