Novak Djokovic Australian Visa : ವಿಶ್ವ ನಂ.1 ಟೆನಿಸ್ ಆಟಗಾರ ಆಸೀಸ್ ನಿಂದ ಗಡಿಪಾರು!

By Suvarna NewsFirst Published Jan 16, 2022, 5:22 PM IST
Highlights

ಆಸ್ಟ್ರೇಲಿಯನ್ ಓಪನ್ ಆಡುವ ಅವಕಾಶ ಕಳೆದುಕೊಂಡ ಜೋಕೋವಿಕ್
11 ದಿನಗಳ ಕಾನೂನು ಹೋರಾಟಕ್ಕೆ ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ನಿಂದ ಅಂತಿಮ ತೀರ್ಪು
ಆಸ್ಟ್ರೇಲಿಯಾದಿಂದ ಗಡಿಪಾರಾಗಲಿರುವ ಸೆರ್ಬಿಯಾದ ಟೆನಿಸ್ ತಾರೆ
 

ಮೆಲ್ಬೋರ್ನ್ (ಜ.16): ಕಳೆದ 11 ದಿನಗಳಿಂದ ಆಸ್ಟ್ರೇಲಿಯಾದ ವೀಸಾ ನಿಯಮದ ಅನುಸಾರ ಗಡಿಪಾರು ಸಂಕಷ್ಟ ಎದುರಿಸುತ್ತಿದ್ದ ವಿಶ್ವ ನಂ.1 ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್ ಕಾನೂನು ಹೋರಾಟದಲ್ಲಿ ಸೋಲು ಕಂಡಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದಿಂದ ಅವರು ಗಡಿಪಾರು ಆಗುವುದು ನಿಶ್ಚಿತವಾಗಿದ್ದು, ಆಸ್ಟ್ರೇಲಿಯಾದ ಕೋರ್ಟ್ ನ ನಿರ್ಧಾರದಿಂದ ಅತೀವ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ನಿಯಮಗಳಿಗೆ ನಾನು ಬದ್ಧನಾಗಿದ್ದು ದೇಶವನ್ನು ತೊರೆಯಲಿದ್ದೇನೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ 21ನೇ ಗ್ರ್ಯಾಂಡ್ ಸ್ಲಾಂ ಟ್ರೋಫಿ ಗೆಲ್ಲುವ ಅವರ ಆಸೆಯೂ ಭಗ್ನಗೊಂಡಿದೆ.

ಕೋವಿಡ್-19 ಲಸಿಕೆಯ ಕುರಿತಾಗಿ ಆಸ್ಟ್ರೇಲಿಯಾ ಹಾಗೂ ನೊವಾಕ್ ಜೋಕೊವಿಕ್ ನಡುವೆ ಕಳೆದ 11 ದಿನಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಭಾನುವಾರ ಆಸ್ಟ್ರೇಲಿಯಾದ ಫೆಡರಲ್ ಕೋರ್ಟ್ ಅಂತಿಮ ಮಿದ್ರೆ ಒತ್ತಿದೆ. ಮುಖ್ಯ ನ್ಯಾಯಮೂರ್ತಿ ಜೇಮ್ಸ್ ಅಲ್ಸಾಪ್ ಅವರು, ಜೋಕೊವಿಕ್ ಅವರ ರದ್ದುಗೊಂಡಿರುವ ವೀಸಾವನ್ನು ಮರುಸ್ಥಾಪಿಸುವ ಪ್ರಯತ್ನವನ್ನು ತಿರಸ್ಕರಿಸಿದರು. ಸಂಪೂರ್ಣ ಲಸಿಕೆ ಹಾಕಿಸಿಕೊಳ್ಳದ ನೋವಾಕ್ ಜೋಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ರದ್ದು ಮಾಡಿತ್ತು. ಇದರ ಕುರಿತಾಗಿ ಜೋಕೊವಿಕ್ ಕೋರ್ಟ್ ಮೆಟ್ಟಿಲೇರಿದ್ದರು.

ಭಾನುವಾರ ಸಂಜೆ ಆಸ್ಟ್ರೇಲಿಯನ್ ಓಪನ್ ನಲ್ಲಿ ತಮ್ಮ ಮೊದಲ ಪಂದ್ಯ ಆಡಲು ಸಿದ್ಧವಾಗುತ್ತಿದ್ದ ಹೊತ್ತಿನಲ್ಲಿಯೇ ಫೆಡರಲ್ ಕೋರ್ಟ್ ನಿಂದ ನಿರ್ಧಾರ ಪ್ರಕಟವಾಗಿದೆ. "ತದ್ದುಪಡಿ ಮಾಡಿದ ಅರ್ಜಿಯನ್ನು ವೆಚ್ಚದೊಂದಿಗೆ ವಜಾಗೊಳಿಸಬೇಕು ಎನ್ನುವುದು ನ್ಯಾಯಲಯದ ಆದೇಶ' ಎನ್ನುವ ಮೂಲಕ ಕೋರ್ಟ್ ನ ಸರ್ವಾನುಮತದ ನಿರ್ಧಾರವನ್ನು ತಿಳಿಸಿದರು. ಆಸ್ಟ್ರೇಲಿಯಾದ ಕಾಲಮಾನ ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ ಸಂಜೆ 5) ಎಮಿರೇಟ್ಸ್ ವಿಮಾನದಲ್ಲಿ ಜೋಕೋವಿಕ್ ಗಡಿಪಾರುಗೊಂಡಿದ್ದಾರೆ.

ಜೋಕೋವಿಕ್ ಅವರು ಈಗಾಗಲೇ ತಾವು ಕೋವಿಡ್ ಲಸಿಕೆಯ ವಿರೋಧಿ ಎಂದು ಮುಕ್ತವಾಗಿ ಹೇಳಿದ್ದಾರೆ. ಅವರ ಈ ನಿಲುವು ದೇಶದಲ್ಲಿ ಲಸಿಕೆಯ ವಿರೋಧಿ ಭಾವನೆ ಹೊಂದಿರುವವರಿಗೆ ಪ್ರೇರೇಪಣೆ ನೀಡಿದಂತಾಗುತ್ತದೆ. ಇದರಿಂದಾಗಿ ಕೆಲವು ಜನರು ಲಸಿಕೆ ಇಲ್ಲದೆ ಸಾಂಕ್ರಾಮಿ ರೋಗವನ್ನು ಎದುರಿಸಲು ಸಜ್ಜಾಗುವ ಅಪಾಯವಿದೆ. ಅದಲ್ಲದೆ, ಲಸಿಕೆ ವಿರೋಧಿ ಸಮಾವೇಶಗಳಲ್ಲೂ ಅವರು ತೊಡಗಿಕೊಳ್ಳಬಹುದು ಎಂದು ಆಸ್ಟ್ರೇಲಿಯಾದ ಇಮಿಗ್ರೇಷನ್ ಸಚಿವ ಅಲೆಕ್ಸ್ ಹಾಕ್ ಆತಂಕ ವ್ಯಕ್ತಪಡಿಸಿದ್ದರು.

ಎಟಿಪಿ ವಿಷಾದ: ಪುರುಷರ ವೃತ್ತಿಪರ ಟೆನಿಸ್ ಅಸೋಸಿಯೇಷನ್ (ಎಟಿಪಿ), ಜೋಕೋವಿಕ್ ಅವರ ವೀಸಾ ರದ್ದತಿಯನ್ನು ಎತ್ತಿಹಿಡಿದ ಫೆಡರಲ್ ಕೋರ್ಟ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದೆ. "ಬಹುವಾಗಿ ಕಾಡುತ್ತಿದ್ದ ವಿಷಾದನೀಯ ಘಟನೆಗಳ ಅಂತ್ಯ" ಇದಾಗಿ ಕಾಣುತ್ತಿದೆ. ಜೋಕೋವಿಕ್ ಅವರ ಅನುಪಸ್ಥಿತಿ ಆಸ್ಟ್ರೇಲಿಯನ್ ಓಪನ್ ಗೆ ಆಗುವ ನಷ್ಟ ಎಂದು ಹೇಳಿದೆ. "ಇದೊಂದು ವಿಚಾರ ಈ ಹಂತಕ್ಕೆ ಹೇಗೆ ತಲುಪಿತು ಅನ್ನುವುದು ತಿಳಿದಿಲ್ಲ. ಆದರೆ, ಕ್ರೀಡೆಯ ಶ್ರೇಷ್ಠ ಚಾಂಪಿಯನ್ ಗಳಲ್ಲಿ ಅವರು ಒಬ್ಬರು. ಆಸ್ಟ್ರೇಲಿಯನ್ ಓಪನ್ ನಲ್ಲಿ ಅವರ ಅನುಪಸ್ಥಿತಿ ಟೂರ್ನಿಗೆ ನಷ್ಟವಾಗಲಿದೆ' ಎಂದು ಹೇಳಿದೆ. ಇದೇನೇ ಇದ್ದರೂ, ಎಟಿಪಿಯು ಎಲ್ಲಾ ಆಟಗಾರರು ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಳ್ಳಲೇಬೇಕು ಎನ್ನುವುದನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದೆ.

ನಿರ್ಧಾರವನ್ನು ಗೌರವಿಸುತ್ತೇವೆ ಎಂದ ಟೆನಿಸ್ ಆಸ್ಟ್ರೇಲಿಯಾ: ಈ ನಡುವೆ ಆಸ್ಟ್ರೇಲಿಯನ್ ಓಪನ್ ಆಯೋಜಕರು ಹಾಗೂ ಆಸ್ಟ್ರೇಲಿಯಾದ ಟೆನಿಸ್ ಆಡಳಿತ ಮಂಡಳಿಯಾಗಿರುವ ಟೆನಿಸ್ ಆಸ್ಟ್ರೇಲಿಯಾ, ಫೆಡರಲ್ ಕೋರ್ಟ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದೆ. ಗ್ರ್ಯಾಂಡ್ ಸ್ಲಾಂ ನಿಯಮದ ಅನುಸಾರ, ಪ್ರಧಾನ ಸುತ್ತಿನಲ್ಲಿ ಜೋಕೋವಿಕ್ ಅವರ ಸ್ಥಾನವನ್ನು ಲಕ್ಕಿ ಲೂಸರ ಆಗಿರುವ ಸಾಲ್ವಟೋರ್ ಕರುಸೊ ತುಂಬಲಿದ್ದಾರೆ. ಇಟಲಿಯ ಆಟಗಾರ ಮೊದಲ ಪಂದ್ಯದಲ್ಲಿ ಸೆರ್ಬಿಯಾದ ಮಿಯೋಮಿರ್ ಕೆಕ್ಮನೋವಿಕ್ ಅವರನ್ನು ಎದುರಿಸಲಿದ್ದಾರೆ. 

click me!