Australian Open ಜೋಕೋವಿಚ್‌ ಮುಡಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ; ಬಿಕ್ಕಿ ಬಿಕ್ಕಿ ಅತ್ತ ಟೆನಿಸ್ ದಿಗ್ಗಜ

Published : Jan 30, 2023, 08:02 AM IST
Australian Open ಜೋಕೋವಿಚ್‌ ಮುಡಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ; ಬಿಕ್ಕಿ ಬಿಕ್ಕಿ ಅತ್ತ ಟೆನಿಸ್ ದಿಗ್ಗಜ

ಸಾರಾಂಶ

10ನೇ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸಿದ ನೋವಾಕ್ ಜೋಕೋವಿಚ್ ವೃತ್ತಿಬದುಕಿನಲ್ಲಿ 22ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿ, ರಾಫಾ ದಾಖಲೆ ಸರಿಗಟ್ಟಿದ ಜೋಕೋ ಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ದ ಜೋಕೋ ಜಯಭೇರಿ

ಮೆಲ್ಬರ್ನ್‌(ಜ.30): ನೋವಾಕ್‌ ಜೋಕೋವಿಚ್‌ 10ನೇ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ವೃತ್ತಿಬದುಕಿನಲ್ಲಿ 22ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸುವ ಮೂಲಕ ಸ್ಪೇನ್‌ನ ರಾಫೆಲ್‌ ನಡಾಲ್‌ರ ದಾಖಲೆ ಸರಿಗಟ್ಟಿದ್ದಾರೆ.

35 ವರ್ಷದ ಸರ್ಬಿಯಾ ಟೆನಿಸಿಗ ಭಾನುವಾರ ನಡೆದ ಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ 6-3, 7-6(4), 7-6(5) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಸತತ 28ನೇ ಜಯ ದಾಖಲಿಸಿದ್ದಾರೆ. ಜೋಕೋವಿಚ್‌ 10 ಆಸ್ಪ್ರೇಲಿಯನ್‌ ಓಪನ್‌ ಜೊತೆ 7 ವಿಂಬಲ್ಡನ್‌, 3 ಯುಎಸ್‌ ಓಪನ್‌ ಹಾಗೂ 2 ಫ್ರೆಂಚ್‌ ಓಪನ್‌ ಪ್ರಶಸ್ತಿಗಳನ್ನೂ ಜಯಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ಸುಲಭ ಜಯ ದಾಖಲಿಸಿದ ನೋವಾಕ್ ಜೋಕೋವಿಚ್‌ಗೆ 5ನೇ ಶ್ರೇಯಾಂಕಿತ ಸಿಟ್ಸಿಪಾಸ್‌ರಿಂದ 2 ಹಾಗೂ 3ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಎರಡೂ ಸೆಟ್‌ಗಳಲ್ಲಿ ಉಭಯ ಆಟಗಾರರ 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿದ ಕಾರಣ ಸೆಟ್‌ಗಳು ಟೈ ಬ್ರೇಕರ್‌ನಲ್ಲಿ ನಿರ್ಧಾರವಾದವು.

Australian Open: ಸಬಲೆಂಕಾಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ!

ಜೋಕೋವಿಚ್‌ 10 ಬಾರಿ ಆಸ್ಪ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಆಡಿದ್ದು, 10 ಬಾರಿಯೂ ಚಾಂಪಿಯನ್‌ ಪಟ್ಟಕ್ಕೇರಿರುವುದು ವಿಶೇಷ. ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಸಿಟ್ಸಿಪಾಸ್‌ ಕನಸು ಈ ಸಲವೂ ಈಡೇರಲಿಲ್ಲ. 2021ರ ಫ್ರೆಂಚ್‌ ಓಪನ್‌ ಫೈನಲ್‌ಗೇರಿದ್ದ ಗ್ರೀಸ್‌ ಆಟಗಾರ ಜೋಕೋವಿಚ್‌ ವಿರುದ್ಧವೇ ಸೋತಿದ್ದರು.

ಕಳೆದ ವರ್ಷ ಗಡಿಪಾರು, ಈ ವರ್ಷ ಚಾಂಪಿಯನ್‌!

ಆಸ್ಪ್ರೇಲಿಯನ್‌ ಓಪನ್‌ನ ಅತ್ಯಂತ ಯಶಸ್ವಿ ಆಟಗಾರ ನೋವಾಕ್ ಜೋಕೋವಿಚ್‌ ಕೋವಿಡ್‌ ಲಸಿಕೆ ಪಡೆಯದ ಕಾರಣ ಕಳೆದ ವರ್ಷ ಆಸ್ಪ್ರೇಲಿಯಾದಿಂದ ಗಡಿಪಾರು ಮಾಡಲಾಗಿತ್ತು. ಜೋಕೋ ಈ ವರೆಗೂ ಲಸಿಕೆ ಪಡೆದಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಬಾರಿ ಕೋವಿಡ್‌ ನಿಯಮಗಳು ಸಡಿಲಗೊಂಡ ಕಾರಣ ಜೋಕೋಗೆ ಈ ವರ್ಷ ಸ್ಪರ್ಧಿಸಲು ಆಸ್ಪ್ರೇಲಿಯಾ ಸರ್ಕಾರ ಅನುಮತಿ ನೀಡಿತು. ಕಣಕ್ಕಿಳಿದ ಜೋಕೋವಿಚ್‌ ಆರಂಭಿಕ ಸುತ್ತಿನಲ್ಲೇ ಸ್ನಾಯು ಸೆಳೆತಕ್ಕೆ ಒಳಗಾಗಿ ಹೊರಬೀಳುವ ಆತಂಕದಲ್ಲಿದ್ದರು. ಆದರೆ ಚೇತರಿಸಿಕೊಂಡ ಜೋಕೋರನ್ನು ಪ್ರಶಸ್ತಿ ಗೆಲುವಿನಿಂದ ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ.

ನೋವಾಕ್ ಜೋಕೋವಿಚ್‌ 2008ರಲ್ಲಿ ಮೊದಲ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಜಯಿಸಿದ್ದರು. 2011, 2012, 2013, 2015, 2016, 2019, 2020, 2021ರಲ್ಲೂ ಚಾಂಪಿಯನ್‌ ಆಗಿದ್ದರು.

ಪ್ರಶಸ್ತಿ ವಿಜೇತರ ಬಹುಮಾನ ಮೊತ್ತ:

17.34 ಕೋಟಿ ರು.: ಚಾಂಪಿಯನ್‌ ಜೋಕೋವಿಚ್‌ಗೆ ದೊರೆತ ಬಹುಮಾನ ಮೊತ್ತ.

9.47 ಕೋಟಿ ರು.: ರನ್ನರ್‌-ಅಪ್‌ ಸಿಟ್ಸಿಪಾಸ್‌ಗೆ ದೊರೆತ ಬಹುಮಾನ ಮೊತ್ತ.

ಜೋಕೋ ಮತ್ತೆ ನಂ.1

ಕಳೆದ ವರ್ಷ ಆಸ್ಪ್ರೇಲಿಯನ್‌ ಓಪನ್‌ಗೆ ಗೈರಾಗಿದ್ದ ಜೋಕೋವಿಚ್‌ ವಿಶ್ವ ನಂ.1 ಸ್ಥಾನವನ್ನೂ ಕಳೆದುಕೊಂಡಿದ್ದರು. ವಿಂಬಲ್ಡನ್‌ನಲ್ಲಿ ಚಾಂಪಿಯನ್‌ ಆದರೂ ಟೂರ್ನಿಯಲ್ಲಿ ಯಾವುದೇ ರೇಟಿಂಗ್‌ ಅಂಕ ನೀಡಿರಲಿಲ್ಲ. ಇದೀಗ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿರುವ ಜೋಕೋವಿಚ್‌ ವಿಶ್ವ ರ‍್ಯಾಂಕಿಂಗ್‌‌ನಲ್ಲಿ ಮತ್ತೊಮ್ಮೆ ನಂ.1 ಸ್ಥಾನಕ್ಕೇರಲಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ಜೋಕೋ!

ಪಂದ್ಯ ಗೆಲ್ಲುತ್ತಲೇ ಸ್ಟ್ಯಾಂಡ್‌್ಸನಲ್ಲಿದ್ದ ತಮ್ಮ ಪೋಷಕರು, ಕೋಚ್‌ನತ್ತ ತೆರಳಿದ ಜೋಕೋವಿಚ್‌ ಎಲ್ಲರನ್ನೂ ತಬ್ಬಿಕೊಂಡು ಸಂಭ್ರಮಿಸಿದರು. ಕಳೆದ ವರ್ಷ ಅನುಭವಿಸಿದ ಅವಮಾನ, ಅದರಿಂದ ಹೊರಬಂದು ಮತ್ತೆ ಆಸ್ಪ್ರೇಲಿಯನ್‌ ಓಪನ್‌ ಗೆದ್ದ ಕ್ಷಣ ಜೋಕೋವಿಚ್‌ರನ್ನು ಭಾವುಕಗೊಳಿಸಿತು. ಬಿಕ್ಕಿ ಬಿಕ್ಕಿ ಅತ್ತು ಚಾಂಪಿಯನ್‌ ಆದ ಕ್ಷಣವನ್ನು ಅನುಭವಿಸಿದ ಜೋಕೋವಿಚ್‌, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಕಣ್ಣಲೂ ನೀರು ತರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!