
ಲಖನೌ (ಜು.02) ರಾಷ್ಟ್ರೀಯ ಕಬಡ್ಡಿ ಪಟು ಬ್ರಿಜೇಶ್ ಸೋಲಂಕಿಯ ಅಂತಿಮ ದಿನಗಳ ವಿಡಿಯೋ ಎಂತವರನ್ನು ಕಣ್ಣೀರಾಗುತ್ತದೆ.ದೇಶದ ಕಬಡ್ಡಿ ತಂಡದಲ್ಲಿ ಮಿಂಚಬೇಕಿದ್ದ ಕಬಡ್ಡಿ ಪಟು ತಾನೇ ರಕ್ಷಿಸಿ ತಂದ ನಾಯಿ ಮರಿಯಿಂದ ಮೃತಪಟ್ಟ ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ಮೋರಿಯಿಂದ ರಕ್ಷಿಸಿದ್ದ ನಾಯಿ ಮರಿ ಲಘುವಾಗಿ ಕಬಡ್ಡಿ ಪಟು ಬ್ರಿಜೇಶ್ ಸೋಲಂಕಿಯನ್ನು ಕಚ್ಚಿದೆ. ಗಾಯ ಅತೀ ಸಣ್ಣವಾಗಿತ್ತು. ಜೊತೆಗೆ ನಾಯಿ ಮರಿ ಅನ್ನೋ ಕಾರಣಕ್ಕೆ ಸೋಲಂಕಿ ಲಸಿಕೆ ಪಡೆಯಲಿಲ್ಲ. ಪರಿಣಾಮ ರೇಬಿಸ್ ತೀವ್ರಗೊಂಡಿದೆ. ನರಳಾಡಿ ನರಳಾಡಿ ಬ್ರಿಜೇಶ್ ಪ್ರಾಣ ಬಿಟ್ಟಿದ್ದಾರೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಿರ್ಲಕ್ಷ್ಯದಿಂದ ಸಾವು ಕಂಡ ಕಬಡ್ಡಿ ಪಟು
ಉತ್ತರ ಪ್ರದೇಶದ ಬುಲಂದರ್‌ಶೇರ್ ಜಿಲ್ಲೆಯ ಬ್ರಿಜೇಶ್ ಸೋಲಂಕಿ ವಯಸ್ಸು ಕೇವಲ 22. ರಾಜ್ಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನಜ ಪದಕ ಗೆದ್ದ ಸಾಧಕ. ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಟೂರ್ನಿ ಮೇಲೆ ಕಣ್ಣಿಟ್ಟಿದ್ದ ಸೋಲಂಕಿ ಇದೀಗ ದಾರುಣವಾಗಿ ಅಂತ್ಯಕಂಡಿದ್ದಾರೆ. ದೊಡ್ಡ ಸಹಾಯ ಮಾಡಲು ಹೋದ ಸೋಲಂಕಿ, ಸಣ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ರೇಬಿಸ್ ತೀವ್ರಗೊಂಡು ನರಳಾಡಿ ಸಾವು ಕಂಡಿದ್ದಾರೆ.
ಅಭ್ಯಾಸದ ವೇಳೆ ಅಸ್ವಸ್ಥಗೊಂಡ ಸೋಲಂಕಿ
ಜೂನ್ 28 ರಂದು ಅಭ್ಯಾಸ ಮಾಡುತ್ತಿದ್ದ ಸೋಲಂಕಿ ಅಸ್ವಸ್ಥಗೊಂಡಿದ್ದ. ಹೀಗಾಗಿ ತಕ್ಷಣವೇ ಇತರ ಕಬಡ್ಡಿ ಪಟು, ಕೋಚ್ ಸೋಲಂಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರೊಳಗೆ ರೇಬಿಸ್ ತೀವ್ರಗೊಂಡಿತ್ತು. ಹೀಗಾಗಿ ನೋಯ್ಡಾದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ನೀಡಿದರೂ ಸೋಲಂಕಿ ಬದುಕಿ ಉಳಿಯಲಿಲ್ಲ.
ಘಟನೆ ಕುರಿತು ಕೋಚ್ ಪ್ರವೀಣ್ ಕುಮಾರ್ ಮಾತನಾಡಿದ್ದಾರೆ. ಸೋಲಂಕಿ ಅದ್ಭುತ ಕಬಡ್ಡಿ ಪಟು. ಆತ ಖಂಡಿತವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಿದ್ದ. ಗೋಲ್ಡ್ ಮೆಡಲಿಸ್ಟ್ ಆಗಿದ್ದ ಸೋಲಂಕಿ ಕಬಡ್ಡಿಯಲ್ಲಿ ಆತನ ಆಟಕ್ಕೆ ಮನಸೋಲದವರಿಲ್ಲ. ಆತನಿಗೆ ನಾಯಿ ಎಂದರೆ ಪಂಚ ಪ್ರಾಣ. ನಾಯಿಗಳಿಗೆ ತಿಂಡಿ ಹಾಕುತ್ತಿದ್ದ. ಹೀಗೆ ಮೋರಿಯಲ್ಲಿ ಅನಾಥವಾಗಿ ಬಿದ್ದ ನಾಯಿ ಮರಿಯನ್ನು ಈತ ರಕ್ಷಿಸಿದ್ದ. ಬಳಿಕ ಮನೆಗೆ ತಂದು ಆರೈಕೆ ಮಾಡಿದ್ದ. ವಿಶ್ರಾಂತಿ ಸಮಯದಲ್ಲಿ ನಾಯಿ ಮರಿ ಜೊತೆ ಆಟವಾಡುತ್ತಾ ಕಳೆಯುತ್ತಿದ್ದ. ಆಟವಾಡುವ ವೇಳೆ ನಾಯಿ ಮರಿ ಕಚ್ಚಿದೆ. ಅದರ ಹಲ್ಲುಗಳು ಸಣ್ಣದಾಗಿ ಸೋಲಂಕಿ ಚರ್ಮ ತಾಗಿದೆ. ಇದು ಅಷ್ಟು ದೊಡ್ಡ ಗಾಯವಲ್ಲ. ಹೀಗಾಗಿ ಸೋಲಂಕಿ ಕಬಡ್ಡಿ ಆಟದ ವೇಳೆ ಆಗವು ಗಾಯದ ರೀತಿ ಮಾಯವಾಗಲಿದೆ ಎಂದಕೊಂಡು ನಿರ್ಲಕ್ಷ ಮಾಡಿದ್ದ. ನಾಯಿಯ ಹಲ್ಲು, ಉಗುರು ತಾಗಿದರೂ ಲಸಿಕೆ ಪಡೆಯಬೇಕು. ಆದರೆ ಸೋಲಂಕಿ ನಿರ್ಲಕ್ಷ್ಯ ಮಾಡಿದ್ದ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.
ಸೋಲಂಕಿ ಸಾವಿಗೆ ಮರುಗಿದ ಜನ
ಸೋಲಂಕಿ ಸಾವಿಗೆ ಜನರು ಮರುಗಿದ್ದಾರೆ. ಸೋಲಂಕಿ ಅಂತಿಮ ಕ್ಷಣಗಳು ಅತ್ಯಂತ ನೋವಿನಿಂದ ಕೂಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಕಬಡ್ಡಿ ಪಟ್ಟು ಈ ರೀತಿ ನರಳಾಡುವುದು ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಬೀದಿ ನಾಯಿ ಆಗಿರಲಿ, ಸಾಕು ನಾಯಿ ಆಗಿರಲಿ, ನಾಯಿ ಹಲ್ಲು ಅಥವಾ ಉಗುರು ಕಚ್ಚಿದರೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾ ಸಿಎಂಒ ಸುನಿಲ್ ಕುಮಾರ್ ದೊಹ್ರೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಸೋಂಲಕಿ ಗ್ರಾಮದಲ್ಲಿ ರೇಬಿಸ್ ಲಸಿಕೆ ಹಾಗೂ ನಾಯಿ ಕಡಿತದ ಕುರಿತು ಜಾಗೃತಿ ಮೂಡಸಲಾಗಿದೆ. ಇದೇ ವೇಳೆ ಗ್ರಾಮದ ಹಲವರಿಗೆ ಲಸಿಕೆ ಹಾಕಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.