
ನವದೆಹಲಿ: ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು ಸೋಲಿಸಿದ ಭಾರತದ ಚೆಸ್ ಪಟು ಡಿ.ಗುಕೇಶ್‌ಗೆ
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, 'ಗುಕೇಶ್ ಅಸಾಧಾರಣ ಸಾಧನೆ ಮಾಡಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿದ ಅವರಿಗೆ ಅಭಿನಂದನೆಗಳು. 2025ರ ನಾರ್ವೆ ಚೆಸ್‌ನ 6ನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ರನ್ನು ಸೋಲಿಸಿ, ಅವರ ವಿರುದ್ಧ ಮೊದಲ ಗೆಲುವು ದಾಖಲಿಸಿದ್ದಾರೆ. ಇದು ಅವರ ಪ್ರತಿಭೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ' ಎಂದಿದ್ದಾರೆ.
ವಿಶ್ವ ನಂ.1 ಕಾರ್ಲ್‌ನ್ ವಿರುದ್ಧ ಗೆದ್ದ ವಿಶ್ವ ಚಾಂಪಿಯನ್ ಗುಕೇಶ್
ವಂಜರ್ (ನಾರ್ವೆ): ವಿಶ್ವನಂ.1 ಚೆಸ್ ಪಟು ಮಾಗ್ನಸ್ ಕಾರ್ಲ್‌ಸನ್ ವಿರುದ್ಧ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಸೇಡು ತೀರಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ನಾರ್ವೆ ಚೆಸ್ ಟೂರ್ನಿಯ 6ನೇ ಸುತ್ತಿನ ಮುಖಾಮುಖಿಯಲ್ಲಿ ಗುಕೇಶ್ ಗೆಲುವು ಸಾಧಿಸಿದರು. ಕ್ಲಾಸಿಕಲ್ ಚೆಸ್‌ನಲ್ಲಿ ಗುಕೇಶ್‌ಗೆ ಇದು ಕಾರ್ಲ್ ಸನ್ ವಿರುದ್ಧ ಮೊದಲ ಗೆಲುವು.
4 ಗಂಟೆಗಳ ಕಾಲ ನಡೆದ ಪಂದ್ಯದ ಬಹುತೇಕ ಸಮಯ ನಾರ್ವೆಯ ಕಾರ್ಲ್‌ನ್ ಮುನ್ನಡೆಯಲ್ಲಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಮಾಡಿದ ಎಡವಟ್ಟು ಕಾರ್ಲ್‌ಸನ್‌ನ್ನು ಸೋಲಿಸಿತು. ಸದ್ಯ ಗುಕೇಶ್ 8.5 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದ್ದಾರೆ. ಕಾರ್ಲ್‌ಸನ್ ಹಾಗೂ ಫ್ಯಾಬಿಯಾನೊ ಕರುನಾ ತಲಾ 9.5 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಹಿಕರು ನಕಮುರಾ ವಿರುದ್ಧ ಟೈ ಸಾಧಿಸಿದ ಅರ್ಜುನ್ ಎರಿಗೈಸಿ, 7.5 ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ವೈಶಾಲಿಗೆ ಜಯ: ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಭಾರತದವರೇ ಆದ ಆರ್. ವೈಶಾಲಿ ವಿರುದ್ಧ ಸೋಲನುಭವಿಸಿತು. ಸದ್ಯ ಕೊನೆರು 9.5 ಅಂಕದೊಂದಿಗೆ 2ನೇ ಸ್ಥಾನ, ವೈಶಾಲಿ(8 ಅಂಕ) 4ನೇ ಸ್ಥಾನದಲ್ಲಿದ್ದಾರೆ.
ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಇಂದಿನಿಂದ
ಜಕಾರ್ತ: ಇಂಡೋನೇಷ್ಯಾ ಓಪನ್ ಸೂಪರ್1000 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭವಾಗಲಿದೆ. ಮಾಜಿ ಚಾಂಪಿಯನ್, ಡಬಲ್ಸ್ ಜೋಡಿ ಸಾತ್ವಿಕ್ - ಚಿರಾಗ್ ಶೆಟ್ಟಿ ಟ್ರೋಫಿ ಗೆಲ್ಲುವ ತವಕದಲ್ಲಿದ್ದಾರೆ. ಟೂರ್ನಿಯಲ್ಲಿ ಪಿ.ವಿ.ಸಿಂಧು, ಲಕ್ಷ ಸೇನ್, ಪ್ರಣಯ್ ಸೇರಿದಂತೆ ತಾರಾ ಶಟ್ಲರ್‌ಗಳು ಕಣದಲ್ಲಿದ್ದಾರೆ.
2023ರಲ್ಲಿ ಇಂಡೋನೇಷ್ಯಾ ಟೂರ್ನಿ ಗೆದ್ದಿದ್ದ ಸಾತ್ವಿಕ್-ಚಿರಾಗ್, ಕಳೆದ ವಾರ ಸಿಂಗಾಪುರ ಓಪನ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದರು. ಸುಧಾರಿತ ಪ್ರದರ್ಶನ ನೀಡಿ ಈ ಬಾರಿ ಪ್ರಶಸ್ತಿ ಗೆಲ್ಲುವ ಕಾತರದಲ್ಲಿರುವ ವಿಶ್ವದ ಮಾಜಿ ನಂ.1 ಜೋಡಿ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೋ ಮತ್ತು ಬಾಗಸ್ ಮೌಲಾನಾ ವಿರುದ್ಧ ಸೆಣಸಾಡಲಿದೆ. ಈ ವರ್ಷ ಕಳಪೆ ಪ್ರದರ್ಶನ ನೀಡುತ್ತಿರುವ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಅನುಪಮಾ, ಡಬಲ್ಸ್‌ನಲ್ಲಿ ತ್ರೀಸಾ ಜಾಲಿ ಮತ್ತು ಗಾಯತ್ರಿ ಕಣದಲ್ಲಿದ್ದಾರೆ.
ಫ್ರೆಂಚ್ ಓಪನ್: ಜೋಕೋ ಕ್ವಾರ್ಟರ್‌ಗೆ, ಆಲ್ಕರಜ್‌ಗೂ ಗೆಲುವು
ಪ್ಯಾರಿಸ್: 3 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಸೋಮವಾರ ನಡೆದ ಪುರುಷರ ಸಿಂಗಲ್ 4ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಜೋಕೋ, ಬ್ರಿಟನ್‌ನ ಕ್ಯಾಮರೂನ್ ನೂರಿ ವಿರುದ್ಧ 6-2, 6-3, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಹಾಲಿ ಚಾಂಪಿಯನ್ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಅವರು ಅಮೆರಿಕದ ಬೆನ್ ಶೆಲ್ಟನ್‌ರನ್ನು 7-6(10-8), 6-3, 4-6, 6-4 ಸೆಟ್‌ಗಳಲ್ಲಿ ಸೋಲಿಸಿದರು. 3ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಕೂಡಾ ಕ್ವಾರ್ಟರ್ ಫೈನಲ್‌ಗೇರಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ 2ನೇ ಶ್ರೇಯಾಂಕಿತ ಕೊಕೊ ಗಾಫ್, 6ನೇ ಶ್ರೇಯಾಂಕಿತ ಮಿರ್ರಾ ಆ್ಯಂಡ್ರಿವಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 3ನೇ ಶ್ರೇಯಾಂಕಿತ ಜೆಸ್ಸಿಕಾ ಪೆಗುಲಾ ಸೋತು ಹೊರಬಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.