Pro Kabaddi League: ಬೆಂಗಳೂರು ಬುಲ್ಸ್‌ಗೆ ಒಲಿದ ಪ್ಲೇ-ಆಫ್‌ ಅದೃಷ್ಟ

By Kannadaprabha News  |  First Published Feb 20, 2022, 9:21 AM IST

* ಬೆಂಗಳೂರು ಬುಲ್ಸ್ ತಂಡಕ್ಕೆ ಜಾಕ್‌ಪಾಟ್, ಪ್ಲೇ ಆಫ್‌ಗೇರಿದ ಪವನ್ ಶೆರಾವತ್ ಪಡೆ

* ಲೀಗ್ ಹಂತದ ಪಂದ್ಯದಲ್ಲಿ ಜೈಪುರ ಎದುರು ಪುಣೇರಿ ಪಲ್ಟನ್‌ ಜಯಿಸುತ್ತಿದ್ದಂತೆ ಬುಲ್ಸ್ ಹಾದಿ ಸುಗಮ

* ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ ಬುಲ್ಸ್‌ಗೆ ಗುಜರಾತ್ ಸವಾಲು


ಬೆಂಗಳೂರು(ಫೆ.20): ಪ್ರೊ ಕಬಡ್ಡಿ 8ನೇ ಆವೃತ್ತಿಯ (Pro Kabaddi League) ಪ್ಲೇ-ಆಫ್‌ಗೆ ಬೆಂಗಳೂರು ಬುಲ್ಸ್‌ (Bengaluru Bulls) ಪ್ರವೇಶಿಸಿದೆ. ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಹರ್ಯಾಣ ಸ್ಟೀಲ​ರ್ಸ್‌ (Haryana Steelers) ವಿರುದ್ಧ ದಾಖಲಿಸಿದ 22 ಅಂಕಗಳ ಗೆಲುವು ಬುಲ್ಸ್‌ ಪ್ಲೇ-ಆಫ್‌ಗೇರುವ ಅದೃಷ್ಟ ತಂದುಕೊಟ್ಟಿದೆ. ಶನಿವಾರ ರೌಂಡ್‌ ರಾಬಿನ್‌ ಹಂತ ಮುಕ್ತಾಯಗೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನ ಗಳಿಸಿದ ತಂಡಗಳು ಪ್ಲೇ-ಆಫ್‌ ಪ್ರವೇಶಿಸಿವೆ. ಕ್ರಮವಾಗಿ ಪಾಟ್ನಾ ಪೈರೇಟ್ಸ್‌, ದಬಾಂಗ್ ಡೆಲ್ಲಿ, ಯು.ಪಿ. ಯೋಧಾ, ಗುಜರಾತ್ ಟೈಟಾನ್ಸ್, ಬೆಂಗಳೂರು ಬುಲ್ಸ್‌ ಹಾಗೂ ಪುಣೇರಿ ಪಲ್ಟನ್ ತಂಡಗಳು ಪ್ಲೇ ಆಫ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿವೆ.

ಪುಣೆ, ಗುಜರಾತ್‌ಗೆ ಜಯ: ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್‌(Puneri Paltan) ತಂಡವು ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ (Jaipur Pink Panthers) ವಿರುದ್ಧ 37-30 ಅಂಕ ಕಲೆಹಾಕಿತು. ತಂಡ 22 ಪಂದ್ಯಗಳಲ್ಲಿ 12 ಗೆಲುವು, 9 ಸೋಲು, 1 ಟೈನೊಂದಿಗೆ ಒಟ್ಟು 66 ಅಂಕ ಗಳಿಸಿದರೂ, ಬುಲ್ಸ್‌ಗಿಂತ ಕೆಳಗಿನ ಸ್ಥಾನಕ್ಕೆ ತೃಪ್ತಿಪಟ್ಟಿತು. ಬೆಂಗಳೂರು ಬುಲ್ಸ್‌ ತಂಡ 53 ಅಂಕಗಳ ವ್ಯತ್ಯಾಸ (ಗಳಿಸಿದ ಒಟ್ಟು ಅಂಕ ಮೈನಸ್‌ ಬಿಟ್ಟುಕೊಟ್ಟ ಒಟ್ಟು ಅಂಕ) ಹೊಂದಿದ್ದರೆ, ಪುಣೆ 33 ಅಂಕಗಳ ವ್ಯತ್ಯಾಸ ಹೊಂದಿದೆ. ಹೀಗಾಗಿ, ಬುಲ್ಸ್‌ 5ನೇ ಹಾಗೂ ಪುಣೆ 6ನೇ ಸ್ಥಾನ ಪಡೆದವು.

Tap to resize

Latest Videos

ಇನ್ನು 2ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಯು ಮುಂಬಾ (U Mumba) ವಿರುದ್ಧ 2 ಬಾರಿ ರನ್ನರ್‌-ಅಪ್‌ ಗುಜರಾತ್‌ ಜೈಂಟ್ಸ್‌ (Gujarat Giants) 36-33ರಲ್ಲಿ ಗೆಲುವು ಸಾಧಿಸಿ ಪ್ಲೇ-ಆಫ್‌ಗೇರಿತು. ಗುಜರಾತ್‌ಗಿದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ರೈಡರ್‌ಗಳಾದ ರಾಕೇಶ್‌ ಹಾಗೂ ಮಹೇಂದ್ರ ರಜಪೂತ್‌ರ ಆಕರ್ಷಕ ಆಟದ ನೆರವಿನಿಂದ ರೋಚಕ ಗೆಲುವು ಸಾಧಿಸಿತು. ಲೀಗ್‌ ಆರಂಭದಲ್ಲಿ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಮುಂಬಾ, ಸತತ 4ನೇ ಸೋಲಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಿತು.

𝔸ℕ𝔻 𝕋ℍ𝔼ℕ 𝕋ℍ𝔼ℝ𝔼 𝕎𝔼ℝ𝔼 𝕊𝕀𝕏 🌟🌟🌟🌟🌟🌟

Say hello to the 6⃣ who have made it to the Season 8 Playoffs!

Who will take the 🏆 home? pic.twitter.com/VJ553BugB2

— ProKabaddi (@ProKabaddi)

Pro Kabaddi League: ಬೆಂಗಳೂರು ಬುಲ್ಸ್‌ ಪ್ಲೇ ಆಫ್ಸ್‌ ಭವಿಷ್ಯ ಇಂದು ನಿರ್ಧಾರ..!

ಹರ್ಯಾಣಗೆ ನಿರಾಸೆ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ 27-30 ಅಂಕಗಳಲ್ಲಿ ಸೋತ ಹರ್ಯಾಣ ಸ್ಟೀಲರ್ಸ್‌, ಪ್ಲೇ-ಆಫ್‌ ರೇಸ್‌ನಿಂದ ಹೊರಬಿತ್ತು. 20 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಹರ್ಯಾಣ, ಸತತ 2 ಸೋಲುಗಳಿಂದಾಗಿ ಟೂರ್ನಿಯಿಂದಲೇ ಹೊರನಡೆಯಬೇಕಾಯಿತು. ಪಾಟ್ನಾ ಪೈರೇಟ್ಸ್‌ 22 ಪಂದ್ಯಗಳಲ್ಲಿ 16 ಗೆಲುವು ದಾಖಲಿಸಿ, ಆತ್ಮವಿಶ್ವಾಸದೊಂದಿಗೆ ಪ್ಲೇ-ಆಫ್‌ಗೆ ಕಾಲಿಟ್ಟಿತು.

Locked and loaded - the top 6️⃣ are ready for the Playoffs ⚔

Who will take home the ultimate prize? 🏆 pic.twitter.com/Zc5KfehXbb

— ProKabaddi (@ProKabaddi)

ಪ್ಲೇ-ಆಫ್‌ ವೇಳಾಪಟ್ಟಿ

ಪಂದ್ಯ ದಿನಾಂಕ ಮುಖಾಮುಖಿ

ಎಲಿಮಿನೇಟರ್‌ 1 ಫೆ.21 ಯು.ಪಿ.ಯೋಧಾ-ಪುಣೇರಿ ಪಲ್ಟನ್‌

ಎಲಿಮಿನೇಟರ್‌ 2 ಫೆ.21 ಬೆಂಗಳೂರು ಬುಲ್ಸ್‌-ಗುಜರಾತ್‌ ಜೈಂಟ್ಸ್‌

ಸೆಮಿಫೈನಲ್‌ 1 ಫೆ.23 ಪಾಟ್ನಾ-ಎಲಿಮಿನೇಟರ್‌ 1ರಲ್ಲಿ ಗೆಲ್ಲುವ ತಂಡ

ಸೆಮಿಫೈನಲ್‌ 2 ಫೆ.23 ಡೆಲ್ಲಿ-ಎಲಿಮಿನೇಟರ್‌ 2ರಲ್ಲಿ ಗೆಲ್ಲುವ ತಂಡ

ಫೈನಲ್‌ ಫೆ.25 -

ಬೆಂಗಳೂರು ಓಪನ್‌ ಟೆನಿಸ್‌: ಖಾಡೆ-ಅಲೆಕ್ಸಾಂಡರ್‌ಗೆ ಪ್ರಶಸ್ತಿ

ಬೆಂಗಳೂರು: ಎಟಿಪಿ ಬೆಂಗಳೂರು ಓಪನ್‌-2 ಟೂರ್ನಿ ಡಬಲ್ಸ್‌ನಲ್ಲಿ ಭಾರತದ ಅರ್ಜುನ್‌ ಖಾಡೆ ಹಾಗೂ ಆಸ್ಟ್ರಿಯಾದ ಅಲೆಕ್ಸಾಂಡರ್‌ ಎರ್ಲೆರ್‌ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಇಂಡೋ-ಆಸ್ಟ್ರಿಯನ್‌ ಜೋಡಿ ಭಾರತದ ಸಾಕೇತ್‌ ಮೈನೇನಿ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ವಿರುದ್ಧ 6-3, 6-7(4), 10-7 ಸೆಟ್‌ಗಳಲ್ಲಿ ಜಯಗಳಿಸಿತು.

ಕಳೆದ ವಾರ ನಡೆದಿದ್ದ ಬೆಂಗಳೂರು ಓಪನ್‌-1 ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಸಾಕೇತ್‌ ಹಾಗೂ ರಾಮ್‌, ಸತತ 2ನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು. ಇನ್ನು ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾದ ಅಲೆಕ್ಸಾಂಡರ್‌ ವುಕಿಚ್‌ ಹಾಗೂ ಬಲ್ಗೇರಿಯಾದ ಡಿಮಿಟರ್‌ ಕುಜ್ಮನೊವ್‌ ಫೈನಲ್‌ಗೇರಿದ್ದಾರೆ. ವುಕಿಚ್‌, ಕ್ರೊವೇಷಿಯಾದ ಬೊರ್ನಾ ಗೊಜೊ ವಿರುದ್ಧ ಗೆದ್ದರೆ, ಫ್ರಾನ್ಸ್‌ನ ಎನ್ಜೊ ವಿರುದ್ಧ ಡಿಮಿಟರ್‌ ಜಯಗಳಿಸಿದರು. ಸಿಂಗಲ್ಸ್‌ ವಿಭಾಗದ ಫೈನಲ್‌ ಭಾನುವಾರ ನಡೆಯಲಿದೆ.

click me!