Pro Kabaddi League: ಬೆಂಗಳೂರು ಬುಲ್ಸ್‌ ತಂಡಕ್ಕಿಂದು ಪುಣೇರಿ ಪಲ್ಟನ್‌ ಸವಾಲು

By Suvarna NewsFirst Published Jan 22, 2022, 10:16 AM IST
Highlights

* ಬೆಂಗಳೂರು ಬುಲ್ಸ್‌ ತಂಡಕ್ಕಿಂದು ಪುಣೇರಿ ಪಲ್ಟನ್ ಸವಾಲು

* ಕಳೆದೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಉಭಯ ತಂಡಗಳು

* ಈ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ ಬುಲ್ಸ್

ಬೆಂಗಳೂರು(ಜ.22): ಕಳೆದ ಪಂದ್ಯದಲ್ಲಿ ಬೆಂಗಾಲ್‌ ವಾರಿಯ​ರ್ಸ್ (Bengal Warriors) ವಿರುದ್ಧ ವಿರೋಚಿತ ಸೋಲುಂಡಿದ್ದ ಬೆಂಗಳೂರು ಬುಲ್ಸ್‌(Bengaluru Bulls), 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಶನಿವಾರ ಪುಣೇರಿ ಪಲ್ಟನ್‌ (Puneri Paltan) ವಿರುದ್ಧ ಸೆಣಸಾಡಲಿದೆ. ಪವನ್‌ ಕುಮಾರ್‌ ಶೆರಾವತ್ ನಾಯಕತ್ವದ ಬುಲ್ಸ್‌ ಸತತ 2ನೇ ಸೋಲುಂಡಿದ್ದು, ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿದೆ. ಒಟ್ಟು 12 ಪಂದ್ಯಗಳನ್ನಾಡಿರುವ ತಂಡ 7ರಲ್ಲಿ ಗೆದ್ದಿದ್ದು, 40 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ.

ಇನ್ನು, ಪುಣೇರಿ ಪಲ್ಟನ್‌ ಕೂಡಾ ಕಳೆದೆರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಹ್ಯಾಟ್ರಿಕ್‌ ಸೋಲನ್ನು ತಪ್ಪಿಸುವ ನಿರೀಕ್ಷೆಯಲ್ಲಿದೆ. 11ರಲ್ಲಿ 4 ಪಂದ್ಯ ಗೆದ್ದ ತಂಡ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು: 
ಬೆಂಗಳೂರು-ಪುಣೆ, ಸಂಜೆ 7.30ಕ್ಕೆ, 
ಮುಂಬಾ-ಟೈಟಾನ್ಸ್‌, ರಾತ್ರಿ 8.30ಕ್ಕೆ, 
ಜೈಪುರ-ತಲೈವಾಸ್‌, ರಾತ್ರಿ 9.30ಕ್ಕೆ,
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಯು.ಪಿ. ಯೋಧಾ, ಹರ್ಯಾಣ ಸ್ಟೀಲರ್ಸ್ ಜಯಭೇರಿ

ಬೆಂಗಳೂರು: ತಾರಾ ರೈಡರ್ ನವೀನ್ ಕುಮಾರ್ (Naveen Kumar) ಅನುಪಸ್ಥಿತಿಯಲ್ಲಿ ದಬಾಂಗ್ ಡೆಲ್ಲಿ (Dabang Delhi) 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು ಹರ್ಯಾಣ ಸ್ಟೀಲರ್ಸ್‌ ಎದುರು 33-36 ಅಂಕಗಳಿಂದ ಶರಣಾಯಿತು. ಇದು ಕಳೆದ 5 ಪಂದ್ಯಗಳಲ್ಲಿ ಡೆಲ್ಲಿ ಎದುರಿಸಿದ ಮೂರನೇ ಸೋಲು ಎನಿಸಿದೆ. ಆಲ್ರೌಂಡರ್ ಸಂದೀಪ್ ನರ್ವಾಲ್ 7, ನೀರಜ್‌ 6 ರೈಡ್‌ ಅಂಕಗಳನ್ನು ಗಳಿಸಿದರು. ಹರ್ಯಾಣದ ವಿಕಾಸ್ 13, ವಿನಯ್ 7 ರೈಡ್ ಅಂಕ ಸಂಪಾದಿಸಿದರು. ಈ ಸೋಲಿನ ಹೊರತಾಗಿಯೂ ದಬಾಂಗ್ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಹರ್ಯಾಣ ಸ್ಟೀಲರ್ಸ್ 6ನೇ ಸ್ಥಾನಕ್ಕೇರಿದೆ. 

Pro Kabaddi League: ಬೆಂಗಳೂರು ಬುಲ್ಸ್‌ಗೆ ಮುಳುವಾದ ನಿಯಮ, 1 ಅಂಕದ ರೋಚಕ ಸೋಲು..!

ಇನ್ನು ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ ವಿರುದ್ದ ಯು.ಪಿ. ಯೋಧಾ 40-36 ಅಂಕಗಳಿಂದ ಜಯಗಳಿಸಿತು. ಮಣೀಂದರ್ ಸಿಂಗ್ 19 ರೈಡ್‌ ಅಂಕಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಯೋಧಾದ ಪ್ರದೀಪ್ ನರ್ವಾಲ್‌, ಸುದೀಂದ್ರ ಹಾಗೂ ಗಿಲ್‌ ತಲಾ 9 ರೈಡ್ ಅಂಕ ಗಳಿಸಿದರು. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಯೋಧಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ಬೆಂಗಾಲ್ ವಾರಿಯರ್ಸ್‌ 5ನೇ ಸ್ಥಾನಕ್ಕೆ ಕುಸಿಯಿತು.

Superhit Pange mein action-packed dhamake ke baad points table par ek jhalak ho jaye? 🧐

Check out the updated points table after Match 69 of 📈

Who do you think will jump to the 🔝 next? pic.twitter.com/Fl24CZEOgy

— ProKabaddi (@ProKabaddi)

ಏಷ್ಯಾ ಮಹಿಳಾ ಹಾಕಿ: ಭಾರತಕ್ಕೆ 9-0 ಜಯ

ಮಸ್ಕಟ್‌: ಏಷ್ಯನ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ಶುಭಾರಂಭ ಮಾಡಿದೆ. ಮಲೇಷ್ಯಾ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 9-0 ಗೋಲುಗಳ ಗೆಲುವು ಸಾಧಿಸಿತು. ಮೊದಲಾರ್ಧದಲ್ಲಿ 4 ಗೋಲು ಬಾರಿಸಿದ್ದ ಭಾರತ, ದ್ವಿತೀಯಾರ್ಧದಲ್ಲಿ 5 ಗೋಲು ದಾಖಲಿಸಿತು. ಭಾನುವಾರ ಭಾರತಕ್ಕೆ ಜಪಾನ್‌ ಎದುರಾಗಲಿದೆ.

ಸಾಯ್‌ ಕೇಂದ್ರದಲ್ಲಿದ್ದ 33 ಮಂದಿಗೆ ಸೋಂಕು

ಬೆಂಗಳೂರು: ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದಲ್ಲಿದ್ದ ಪುರುಷರ ಹಾಕಿ ತಂಡದ 16 ಆಟಗಾರರು ಸೇರಿದಂತೆ ಒಟ್ಟು 33 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

‘ಒಟ್ಟು 128 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ಪ್ರೊ ಲೀಗ್‌ ಹಾಕಿ ಟೂರ್ನಿಗೆ ಅಭ್ಯಾಸ ನಿರತರಾಗಿದ್ದ ಹಿರಿಯರ ಹಾಕಿ ತಂಡದ 16 ಅಥ್ಲೀಟ್‌ಗಳು, ಓರ್ವ ಕೋಚ್‌ಗೆ ಸೋಂಕು ದೃಢಪಟ್ಟಿದೆ. ಸದ್ಯ ಎಲ್ಲರನ್ನೂ ಐಸೋಲೇಸನ್‌ಗೆ ಒಳಪಡಿಸಲಾಗಿದೆ’ ಎಂದು ಎಂದು ಸಾಯ್‌ ಶುಕ್ರವಾರ ಮಾಹಿತಿ ನೀಡಿದೆ. ಜೂನಿಯರ್‌ ಮಹಿಳಾ ಹಾಕಿ ತಂಡದ 15 ಮಂದಿಗೂ ಸೋಂಕು ಖಚಿತವಾಗಿದೆ.
 

click me!