ಕಳೆದ ವರ್ಷ ಶೂಟಿಂಗ್‌ನಿಂದ ದೂರವಾಗಲು ನಿರ್ಧರಿಸಿದ್ದ ಮನು ಭಾಕರ್‌ಗೆ ಈಗ ಒಲಿಂಪಿಕ್ಸ್‌ ಪದಕ! ಇಂಟ್ರೆಸ್ಟಿಂಗ್ ಡೀಟೈಲ್ಸ್

Published : Jul 29, 2024, 12:00 PM ISTUpdated : Jul 29, 2024, 04:25 PM IST
ಕಳೆದ ವರ್ಷ ಶೂಟಿಂಗ್‌ನಿಂದ ದೂರವಾಗಲು ನಿರ್ಧರಿಸಿದ್ದ ಮನು ಭಾಕರ್‌ಗೆ ಈಗ ಒಲಿಂಪಿಕ್ಸ್‌ ಪದಕ! ಇಂಟ್ರೆಸ್ಟಿಂಗ್ ಡೀಟೈಲ್ಸ್

ಸಾರಾಂಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚೊಚ್ಚಲದ ಪದಕ ಖಾತೆ ತೆರೆದ ಮನು ಭಾಕರ್ ಕಳೆದ ವರ್ಷ ಶೂಟಿಂಗ್‌ಗೆ ಗುಡ್‌ಬೈ ಹೇಳಲು ಮುಂದಾಗಿದ್ದರು ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್‌: 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆ ತೆರೆದಿದೆ. ಮಹಿಳೆಯರ ಶೂಟಿಂಗ್‌ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನು ಭಾಕರ್‌ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್‌ ಎನ್ನುವ ಹಿರಿಮೆಗೆ ಮನು ಪಾತ್ರರಾಗಿದ್ದಾರೆ. ಈ ಮೂಲಕ, ಒಲಿಂಪಿಕ್‌ ಶೂಟಿಂಗ್‌ ಪದಕಕ್ಕೆ ಭಾರತದ 12 ವರ್ಷದ ಕಾಯುವಿಕೆಗೆ ತೆರೆ ಬಿದ್ದಿದೆ.

ಹರ್ಯಾಣದ ಝಾಝರ್‌ನಲ್ಲಿ 2002ರಲ್ಲಿ ಜನಿಸಿದ ಮನು, ಶಾಲಾ ದಿನಗಳಿಂದಲೂ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಟೆನಿಸ್‌, ಮಾರ್ಷಲ್‌ ಆರ್ಟ್ಸ್‌, ಬಾಕ್ಸಿಂಗ್‌ ಹೀಗೆ ಹಲವು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಕ್ಸಿಂಗ್‌ನಲ್ಲಿ ರಾಜ್ಯ ತಂಡವನ್ನು ಕಿರಿಯರ ವಿಭಾಗದಲ್ಲಿ ಸ್ಪರ್ಧಿಸುವ ಹಂತದಲ್ಲಿದ್ದಾಗ ಮನುಗೆ ಬಾಕ್ಸಿಂಗ್‌ ಬೋರ್‌ ಆಯಿತು. ತಮ್ಮ 14ನೇ ವಯಸ್ಸಿನಲ್ಲಿ ಶೂಟಿಂಗ್‌ನತ್ತ ಮುಖ ಮಾಡಿದರು.

ಮನು ಅವರ ತಂದೆ 1.5 ಲಕ್ಷ ಖರ್ಚು ಮಾಡಿ ಪಿಸ್ತೂಲ್‌ ತೆಗೆದುಕೊಟ್ಟರು. ಆ ಬಳಿಕ ತಮ್ಮ 16ನೇ ವಯಸ್ಸಿನಲ್ಲೇ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಮನು, 2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. 17ನೇ ವಯಸ್ಸಿನಲ್ಲೇ ಒಲಿಂಪಿಕ್ಸ್‌ ಕೋಟಾ ಪಡೆದು 19ನೇ ವಯಸ್ಸಿನಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮನು, ಈ ವರೆಗೂ ವಿಶ್ವಕಪ್‌ಗಳಲ್ಲಿ 9 ಚಿನ್ನ ಸೇರಿ ಒಟ್ಟು 11 ಪದಕ ಗೆದ್ದಿದ್ದಾರೆ. 2022ರ ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದರು.

ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!

ಇಷ್ಟೆಲ್ಲಾ ಸಾಧನೆ ಮಾಡಿದರೂ, ಒಂದು ವರ್ಷದ ಹಿಂದೆ ಮನುಗೆ ಶೂಟಿಂಗ್‌ ಸಾಕು ಎನಿಸಿತ್ತಂತೆ. ಉತ್ತಮ ಲಯದಲ್ಲೇ ಇದ್ದರೂ, ಶೂಟಿಂಗ್‌ ಒಂದು ರೀತಿ ಕೆಲಸದಂತೆ ಆಗಿತ್ತು ಎನ್ನುವ ಕಾರಣಕ್ಕೆ ಕ್ರೀಡೆಯಿಂದ ದೂರ ಉಳಿದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಬಗ್ಗೆಯೂ ಚಿಂತಿಸಿದ್ದರಂತೆ. ಆದರೆ ಅವರ ಹಣೆಯಲ್ಲಿ ಒಲಿಂಪಿಕ್ಸ್‌ ಪದಕ ಗೆಲ್ಲಬೇಕು ಎಂದು ಬರೆದಿತ್ತು.

ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 8ನೇ ಮಹಿಳೆ

ಮನು ಭಾಕರ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 8ನೇ ಮಹಿಳಾ ಅಥ್ಲೀಟ್‌. 2000ದ ಸಿಡ್ನಿ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತದ ಪರ ಮೊದಲ ಪದಕ (ಕಂಚು) ಗೆದ್ದಿದ್ದರು. 2012ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್‌ (ಕಂಚು), ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ (ಕಂಚು), 2016ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು (ಬೆಳ್ಳಿ), ಕುಸ್ತಿಯಲ್ಲಿ ಸಾಕ್ಷಿ ಮಲಿಕ್‌ (ಕಂಚು), 2020ರಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (ಬೆಳ್ಳಿ), ಬ್ಯಾಡ್ಮಿಂಟನ್‌ನಲ್ಲಿ ಸಿಂಧು (ಕಂಚು), ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್‌ (ಕಂಚು) ಪದಕ ಗೆದ್ದಿದ್ದರು. ಸಿಂಧು ಮಾತ್ರ 2 ಒಲಿಂಪಿಕ್ಸ್‌ ಪದಕ ಜಯಿಸಿದ್ದಾರೆ.

Paris Olympics 2024 ರೋಯಿಂಗ್‌ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಪ್ರವೇಶಿಸಿದ ಬಾಲ್‌ರಾಜ್‌ ಪನ್ವಾರ್‌

ವೆಲ್‌ಡನ್‌ ಮನು ಭಾಕರ್‌: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಒಲಿಂಪಿಕ್ಸ್‌ ಪದಕ ಗೆದ್ದ ಶೂಟರ್‌ ಮನು ಭಾಕರ್‌ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ‘ಐತಿಹಾಸಿಕ ಪದಕ. ವೆಲ್‌ಡನ್‌ ಮನು ಭಾಕರ್‌. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ನಿಮಗೆ ಅಭಿನಂದನೆಗಳು. ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ಇನ್ನೂ ವಿಶೇಷ. ಇದು ಅದ್ಭುತ ಸಾಧನೆ’ ಎಂದಿದ್ದಾರೆ. ಇದೇ ವೇಳೆ ಮುರ್ಮು ಅವರು, ‘ಮನು ಸಾಧನೆ ದೇಶದ ಕ್ರೀಡಾಪಟುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿ. ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ’ ಎಂದು ಹಾರೈಸಿದ್ದಾರೆ.

ಇನ್ನು, ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ, ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, 2008ರ ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯೆ ನೀತಾ ಅಂಬಾನಿ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಗೌತಮ್‌ ಗಂಭೀರ್‌ ಸೇರಿದಂತೆ ಹಲವರು ಮನು ಸಾಧನೆಯನ್ನು ಶ್ಲಾಘಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!