ಫ್ರೆಂಚ್ ಓಪನ್ ಒಡೆಯ ರಾಫೆಲ್ ನಡಾಲ್ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ನ.07): ಅಗ್ರ ಶ್ರೇಯಾಂಕಿತ ಸ್ಪೇನ್‌ನ ರಾಫೆಲ್ ನಡಾಲ್, ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಕೊರೋನಾದಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ರಾಫೆಲ್ ನಡಾಲ್, ಶ್ರೇಯಾಂಕ ರಹಿತ ಆಸ್ಪ್ರೇಲಿಯಾದ ಜೋರ್ಡನ್ ಥಾಂಪ್ಸನ್ ವಿರುದ್ಧ 6-1, 7-6(7-3) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಟೆನಿಸ್ ವೃತ್ತಿಜೀವನದಲ್ಲಿ 1000 ಗೆಲುವು ದಾಖಲಿಸಿದ ರಾಫೆಲ್ ನಡಾಲ್
ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ ನಡಾಲ್‌ಗೆ, ಆಸೀಸ್‌ನ ಜೋರ್ಡನ್ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಒಡ್ಡಿದರು. ಟೈ ಬ್ರೇಕರ್‌ನಲ್ಲಿ ಹೆಚ್ಚಿನ ಅಂಕ ಕಲೆಹಾಕಿದ ನಡಾಲ್ ಪಂದ್ಯ ಗೆದ್ದರು. ಕ್ವಾರ್ಟರ್‌ನಲ್ಲಿ ನಡಾಲ್, ತಮ್ಮದೇ ರಾಷ್ಟ್ರದ ಪ್ಯಾಬ್ಲೊ ಕರ್ರೆನೊ ಬುಸ್ಟಾರನ್ನು ಎದುರಿಸಲಿದ್ದಾರೆ.
ಟೆನಿಸ್: ರಾಮ್‌ಕುಮಾರ್ ಸೆಮೀಸ್‌ಗೆ ಲಗ್ಗೆ
ಎಕೆಂಟಲ್(ಜರ್ಮನಿ): ಭಾರತದ ರಾಮ್‌ಕುಮಾರ್ ರಾಮನಾಥನ್, ಎಕೆಂಟಲ್ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಾಮ್‌ಕುಮಾರ್, ರಷ್ಯಾದ ಇವಾಜೆನಿ ಡಾನ್ಸ್‌ಕೊಯ್ ವಿರುದ್ಧ 6-2, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಸೆಮೀಸ್‌ಗೇರುವ ಮೂಲಕ ರಾಮ್‌ಕುಮಾರ್ ಈ ಋುತುವಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರ ಎನಿಸಿದ್ದಾರೆ. ಕೇವಲ 57 ನಿಮಿಷಗಳ ಆಟದಲ್ಲಿ ರಾಮ್‌ಕುಮಾರ್, ರಷ್ಯಾ ಟೆನಿಸಿಗನನ್ನು ಮಣಿಸಿದರು. ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ರಾಮ್‌ಕುಮಾರ್, ಜರ್ಮನಿಯ ಟೆನಿಸ್ ಆಟಗಾರ ಮಾರ್ವಿನ್ ಮೊಲ್ಲೆರ್ ವಿರುದ್ಧ ಸೆಣಸಲಿದ್ದಾರೆ.