ಫೆ.26ಕ್ಕೆ ನವದೆಹಲಿ ಮ್ಯಾರಥಾನ್, ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಭಾರತೀಯ ಚಿತ್ತ!

By Suvarna News  |  First Published Feb 2, 2023, 9:08 PM IST

ಫೆಬ್ರವರಿ 26 ರಂದು ದೆಹಲಿ ಮ್ಯಾರಾಥಾನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಪಡೆಯಲು ಭಾರತೀಯ ಓಟಗಾರರ ಚಿತ್ತ ನೆಟ್ಟಿದ್ದಾರೆ. 
 


ನವದೆಹಲಿ(ಫೆ.02)  ಬಹುನಿರೀಕ್ಷಿತ 7ನೇ ಆವೃತ್ತಿಯ ನವದೆಹಲಿ ಮ್ಯಾರಥಾನ್ ಓಟ ಫೆಬ್ರವರಿ 26ಕ್ಕೆ ನಡೆಯಲಿದೆ. ದೇಶದ ಅಗ್ರ ಓಟಗಾರರು ಇದೇ ವರ್ಷ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೂ ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ. ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಹಾಗೂ ಫಿಟ್ ಇಂಡಿಯಾದ ಮಾನ್ಯತೆ ಅಡಿ ಆಯೋಜನೆಗೊಳ್ಳಲಿರುವ ಓಟವು ರಾಷ್ಟ್ರೀಯ ಮ್ಯಾರಥಾನ್ ಎಂದು ಕರೆಯಲ್ಪಡುತ್ತದೆ. ಈ ಓಟವು ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಆರಂಭಗೊಂಡು, ಅಲ್ಲೇ ಮುಕ್ತಾಯಗೊಳ್ಳಲಿದೆ. ದೆಹಲಿಯ ಚಳಿಗಾಲದಲ್ಲಿ ನಡೆಯಲಿರುವ ಮ್ಯಾರಥಾನ್ ನಗರದ ಐತಿಹಾಸಿಕ ತಾಣಗಳಾದ ಹುಮಾಯುನ್ ಸ್ಮಾರಕ, ಲೋಧಿ ಗಾರ್ಡನ್ ಹಾಗೂ ಖಾನ್ ಮಾರ್ಕೆಟ್ ಮೂಲಕ ಸಾಗಲಿದೆ.

ಈ ಓಟವು ವಿಕಲಚೇತನರ ಪಾಲ್ಗೊಳ್ಳುವಿಕೆಗೂ ಸಾಕ್ಷಿಯಾಗಲಿದ್ದು, ಹಲವು ಹವ್ಯಾಸಿ ಓಟಗಾರರು ಸಹ ಭಾಗವಹಿಸಲಿದ್ದಾರೆ. 
ಎನ್‌ಇಬಿ ಸ್ಪೋರ್ಟ್ಸ್ ಆಯೋಜಿಸುವ ಅಪೋಲೋ ಟೈಯರ್ಸ್‌ ನವದೆಹಲಿ ಮ್ಯಾರಥಾನ್ ಓಟದಲ್ಲಿ 16000ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ದೇಶದ ಅತ್ಯಂತ ಜನಪ್ರಿಯ ಮ್ಯಾರಥಾನ್‌ಗಳಲ್ಲಿ ಒಂದು ಎನಿಸಿದೆ. ಮತ್ತೊಂದು ವಿಶೇಷ ಎಂದರೆ, ವರ್ಚುವಲ್ ಮ್ಯಾರಥಾನ್ ಮೂಲಕ 50000ಕ್ಕೂ ಹೆಚ್ಚು ಮಂದಿ ವಿಶ್ವದ ವಿವಿಧ ಭಾಗಗಳಿಂದ 5 ದಿನಗಳ ವರೆಗೂ ಸ್ಪರ್ಧಿಸಲಿದ್ದಾರೆ. ಈ ಓಟವು ಫೆಬ್ರವರಿ 21ರಂದು ಆರಂಭಗೊಳ್ಳಲಿದೆ.

Tap to resize

Latest Videos

undefined

ಸೀರೆಯುಟ್ಟರೂ ಸಾಧಿಸಿ ತೋರಿಸಿದ ವೃದ್ಧೆ: ಈ ಅಜ್ಜಿ ಉತ್ಸಾಹ ನಮಗ್ಯಾಕಿಲ್ಲ?

ಸ್ಪರ್ಧೆಯು ನಾಲ್ಕು ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಪೂರ್ಣ ಮ್ಯಾರಥಾನ್, ಅರ್ಧ ಮ್ಯಾರಥಾನ್, 10ಕೆ ಓಟ ಹಾಗೂ 5ಕೆ ಓಟ. ಸುಮಾರು 25 ಅಂಧ ಅಥ್ಲೀಟ್‌ಗಳು ತಮ್ಮ ಮಾರ್ಗದರ್ಶಕರ ಜೊತೆ ಓಡಲಿದ್ದಾರೆ. ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್‌ಗಳಾದ ಅಂಕುರ್ ಧಾಮ(ಅರ್ಜುನ ಪ್ರಶಸ್ತಿ ವಿಜೇತ) ಹಾಗೂ ರಮಣ್‌ಜೀ(ಪ್ಯಾರಾಲಿಂಪಿಕ್ ಪದಕ ವಿಜೇತ) 10ಕೆ ಓಟದಲ್ಲಿ ಸ್ಪರ್ಧಿಸಲಿದ್ದಾರೆ. ಅಂಧ ಓಟಗಾರರಿಗೆ ಗೈಡ್ ರನ್ನರ್ಸ್‌ ಇಂಡಿಯಾ ತಂಡವು ಮಾರ್ಗದರ್ಶಕರನ್ನು ಒದಗಿಸಲಿದೆ. ಈ ತಂಡವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿಕಲಚೇತನರಿಗೆ ಫಿಟ್ನೆಸ್ ತರಬೇತಿಯ ಬಗ್ಗೆ ಮಾಹಿತಿಯನ್ನೂ ಒದಗಿಸಲಿದೆ.

ದಿ ಚಾಲೆಂಜಿಂಗ್ ಓನ್ಸ್ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಮತ್ತೊಂದು ವಿಕಲಚೇತನರ ತಂಡ. ಈ ತಂಡವನ್ನು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ ಹಾಗೂ ಅಂಗವಿಚ್ಛೇದಿತ ಕ್ರೀಡಾಪಟು ಮೇಜರ್ ಡಿ.ಪಿ.ಸಿಂಗ್ ಮುನ್ನಡೆಸಲಿದ್ದಾರೆ.

‘ರಾಷ್ಟ್ರೀಯ ಮ್ಯಾರಥಾನ್‌ಗೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ನಮ್ಮ ಅಥ್ಲೀಟ್‌ಗಳು ದೇಶದ ಕೀರ್ತಿ ಹೆಚ್ಚಿಸುತ್ತ ಇರಲಿದ್ದಾರೆ ಎನ್ನುವ ವಿಶ್ವಾಸವಿದೆ. ವರ್ಚುವಲ್ ಸ್ಪರ್ಧೆಗೂ ಈ ಪ್ರಮಾಣದಲ್ಲಿ ಪ್ರತಿಕ್ರಿಯೆ ದೊರೆಯುತ್ತಿರುವುದನ್ನು ನೋಡಿ ಬೆರಗಾಗಿದ್ದೇವೆ’ ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ನ ಅಧ್ಯಕ್ಷ ಅಡಿಲೆ ಸುಮರಿವಾಲಾ ಹೇಳಿದ್ದಾರೆ.

ಕವಿತಾ ರೆಡ್ಡಿ, ಛಗನ್‌ಗೆ ಮುಂಬೈ ಹಾಫ್ ಮ್ಯಾರಥಾನ್ ಕಿರೀಟ!

ಅಪೋಲೋ ಟೈಯರ್ಸ್‌ ನವದೆಹಲಿ ಮ್ಯಾರಥಾನ್‌ಗೆ ಓಟಗಾರರ ಸಮುದಾಯದಿಂದ ಇಷ್ಟೊಳ್ಳೆ ಪ್ರತಿಕ್ರಿಯೆ ನೋಡಿ ಸಂತಸವಾಗಿದೆ. ಕೊರೋನಾ ಮಹಾಮಾರಿಯಿಂದಾಗಿ ಕಳೆದೊಂದೆರಡು ವರ್ಷ ಕ್ರೀಡಾಕೂಟಗಳನ್ನು ಆಯೋಜಿಸುವುದೇ ಸವಾಲಾಗಿತ್ತು. ಈಗ ಆಯೋಜಿಸಲು ಉತ್ಸುಕರಾಗಿದ್ದು, ಓಟಗಾರರಿಂದಲೂ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ದೆಹಲಿ ಮಾತ್ರವಲ್ಲ ದೇಶಾದ್ಯಂತ ಬೆಂಬಲ ಹರಿದುಬರುತ್ತಿದೆ. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಲೈವ್ ಹಾಗೂ ವರ್ಚುವಲ್ ಸ್ಪರ್ಧೆಗಳಿಗೆ ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದಿದ್ದಾರೆ’ ಎಂದು ಅಪೋಲೋ ಟೈಯರ್ಸ್‌ ಲಿಮಿಟೆಡ್‌ನ ಏಷ್ಯಾ ಪೆಸಿಫಿಕ್, ಮಿಡ್ಲ್ ಈಸ್ಟ್ ಹಾಗೂ ಆಫ್ರಿಕಾ(ಎಪಿಎಂಇಎ) ಅಧ್ಯಕ್ಷ ಸತೀಶ್ ಶರ್ಮಾ ಹೇಳಿದ್ದಾರೆ.

‘ಅಪೋಲೋ ಟೈಯರ್ಸ್‌ನಂತಹ ಪ್ರತಿಷ್ಠಿತ ಬ್ರ್ಯಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ. ಅವರ ಬೆಂಬಲದೊಂದಿಗೆ ನಮ್ಮೆಲ್ಲಾ ಸ್ಪರ್ಧಿಗಳಿಗೆ ವಿಶ್ವ ದರ್ಜೆಯ ಅನುಭವ ಸಿಗಲಿದೆ ಎನ್ನುವ ನಂಬಿಕೆ ಇದೆ’ ಎಂದು ರೇಸ್ ನಿರ್ದೇಶಕ ನಾಗರಾಜ್ ಅಡಿಗ ಭರವಸೆ ವ್ಯಕ್ತಪಡಿಸಿದ್ದಾರೆ.

50ಕ್ಕೂ ಹೆಚ್ಚು ಕಾರ್ಪೋರೇಟ್ ತಂಡಗಳು ಹಾಗೂ 200 ಓಟದ ಗುಂಪುಗಳು ಈ ಸ್ಪರ್ಧೆಗೆ ನೋಂದಾಣಿ ಮಾಡಿಕೊಂಡಿವೆ. ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳು ಫಿಟ್ನೆಸ್‌ನತ್ತ ಗಮನ ಹರಿಸಲು ಉತ್ತೇಜಿಸುತ್ತಿರುವುದು ಖುಷಿಯ ವಿಚಾರ ಎಂದು ಆಯೋಜಕರು ಹೇಳಿದ್ದಾರೆ.

click me!