
ಬೆಂಗಳೂರು(ಮೇ.01): 2ನೇ ಆವೃತ್ತಿ ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ (Khelo India University Games) ಶನಿವಾರ ಕಳೆದ ಬಾರಿಯ ಅಥ್ಲೆಟಿಕ್ಸ್ ಚಾಂಪಿಯನ್ ಮಂಗಳೂರು ವಿವಿ ಅಥ್ಲೆಟಿಕ್ಸ್‌ನಲ್ಲಿ 3 ಚಿನ್ನದ ಪದಕಗಳೊಂದಿಗೆ ಶುಭಾರಂಭ ಮಾಡಿದೆ. ವಿವಿ ಒಟ್ಟಾರೆ 4 ಚಿನ್ನ ಸೇರಿದಂತೆ 7 ಪದಕ ಗೆದ್ದಿದ್ದು, 16 ಚಿನ್ನ ಸೇರಿ ಒಟ್ಟು 27 ಪದಕಗಳನ್ನು ಗೆದ್ದಿರುವ ಆತಿಥೇಯ ಜೈನ್ ವಿವಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಲಕ್ಷ್ಮಿ, ರಾಧಾ, ವಿಘ್ನೇಶ್‌ಗೆ ಚಿನ್ನ: ವನಿತೆಯರ 10,000 ಮೀ. ಓಟದಲ್ಲಿ ಮಂಗಳೂರು ವಿವಿಯ ಕೆ.ಎಂ.ಲಕ್ಷ್ಮಿ ಚಿನ್ನ ಗೆದ್ದರು. 35 ನಿಮಿಷ, 49.23 ಸೆಕೆಂಡುಗಳಲ್ಲಿ ಗುರಿ ತಲುಪಿದ ಲಕ್ಷ್ಮಿ ದಿನದ ಮೊದಲ ಸ್ವರ್ಣಕ್ಕೆ ಮುತ್ತಿಕ್ಕಿದರು. ಬಳಿಕ 1500 ಮೀ. ಓಟದಲ್ಲಿ ಮಂಗಳೂರು ವಿವಿಯ ರಾಧಾ ಸಿಂಗ್ 4 ನಿ. 31.43 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬಂಗಾರ ಗೆದ್ದರು. ವಿಘ್ನೇಶ್ ಪುರುಷರ 100 ಮೀ. ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಕೂಟದ ಪ್ರಮುಖ ಆಕರ್ಷಣೆಯಾಗಿದ್ದ 2 ಬಾರಿ ಒಲಿಂಪಿಯನ್, ಕಳಿಂಗ ತಾಂತ್ರಿಕ ವಿವಿಯ ದ್ಯುತಿ ಚಂದ್ 100 ಮೀ. ಓಟದಲ್ಲಿ 11.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.
ಇನ್ನು, ಮಂಗಳೂರು ವಿವಿಯ ಬಸುಕೇಸ್ ಪೂನಿಯಾ ಹಾಗೂ ಅನಿಲ್ ಕುಮಾರ್ ಕ್ರಮವಾಗಿ ಡಿಸ್ಕಸ್ ಎಸೆತ ಹಾಗೂ ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಜೈನ್ ವಿವಿಯ ಸತ್ಯ ಬೆಳ್ಳಿ ಪಡೆದರೆ, ವನಿತೆಯರ ಕರಾಟೆಯಲ್ಲಿ ಮೈಸೂರು ವಿವಿಯ ದಿಯಾ ಅರಸ್ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು.
ಹಾಕಿ ಫೈನಲ್‌ಗೆ ಬೆಂಗಳೂರು, ಮೈಸೂರು: ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿವಿ ವಿರುದ್ಧ ಶೂಟೌಟನ್‌ಲ್ಲಿ 5-3 ಗೋಲುಗಳಿಂದ ಗೆದ್ದ ಬೆಂಗಳೂರು ಸಿಟಿ ವಿವಿ ಫೈನಲ್ ಪ್ರವೇಶಿಸಿತು. ವನಿತೆಯರ ಫೈನಲ್‌ನಲ್ಲಿ ಪಂಜಾಬ್ ವಿವಿಯನ್ನು ಶೂಟೌಟ್‌ನಲ್ಲಿ 2-0 ಗೋಲುಗಳಿಂದ ಸೋಲಿಸಿ ಮೈಸೂರ್ ವಿವಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಏಷ್ಯಾಡ್‌ನಲ್ಲಿ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರವಿಲ್ಲ: ಸಚಿವ ಅನುರಾಗ್ ಠಾಕೂರ್
ನವದೆಹಲಿ: ಚೀನಾದಲ್ಲಿ ಕೋವಿಡ್ ಮತ್ತೆ ಹೆಚ್ಚಳವಾಗಿರುವ ಕಾರಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪಾಲ್ಗೊಳ್ಳುವ ಬಗ್ಗೆ ಚೀನಾದಿಂದ ಮಾಹಿತಿ ಪಡೆದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಗೇಮ್ಸ್ ಹಾಂಗ್ಝೂನಲ್ಲಿ ಸೆ.10ರಿಂದ 25ರ ವರೆಗೆ ನಡೆಯಬೇಕಿದೆ. ‘ಚೀನಾದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸುತ್ತಿದ್ದೇವೆ. ಇತರೆ ದೇಶಗಳು ಕೂಡಾ ಈ ಬಗ್ಗೆ ಚರ್ಚೆ ನಡೆಸುತ್ತಿವೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರೇ ಖಚಿತವಾಗಿ ಹೇಳಬೇಕು. ಬಳಿಕ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದಿದ್ದಾರೆ.
ಏಷ್ಯಾ ಬ್ಯಾಡ್ಮಿಂಟನ್ ಕೂಟ: ಕಂಚಿಗೆ ತೃಪ್ತಿಪಟ್ಟ ಸಿಂಧು
ಮನಿಲಾ(ಫಿಲಿಪ್ಪೀನ್ಸ್): ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಸಿಂಧುಗೆ ಇದು ಎರಡನೇ ಪದಕವಾಗಿದ್ದು, 2014ರ ಆವೃತ್ತಿಯಲ್ಲೂ ಅವರು ಕಂಚು ಗೆದ್ದಿದ್ದರು.
Boris Becker jailed ದಿಗ್ಗಜ ಟೆನಿಸಿಗ ಬೆಕೆರ್‌ಗೆ ಎರಡೂವರೆ ವರ್ಷ ಜೈಲು!
ಶನಿವಾರ ವಿಶ್ವ ನಂ.2, ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 1 ಗಂಟೆ 6 ನಿಮಿಷಗಳ ಕಾಲ ನಡೆದ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಸಿಂಧು 21-13, 19-21, 16-21 ಗೇಮ್‌ಗಳಲ್ಲಿ ಪರಾಭವಗೊಂಡರು. ಈ ಸೋಲಿನ ಹೊರತಾಗಿಯೂ ಸಿಂಧು, ಯಮಗುಚಿ ವಿರುದ್ಧ 13-9 ಗೆಲುವಿನ ದಾಖಲೆ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.