
ಬೆಂಗಳೂರು(ಡಿ.13): ಒಲಿಂಪಿಕ್ಸ್ ಸೇರಿದಂತೆ ಹಲವು ಮಹತ್ವದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು, ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ವಿಶೇಷ ಗೌರವ ಸಲ್ಲಿಸಿದೆ. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿರುವ ಒಲಿಂಪಿಕ್ ಭವನದಲ್ಲಿ ‘ಹಾಲ್ ಆಫ್ ಫೇಮ್’ ಸ್ಥಾಪಿಸಿ ಗೌರವಿಸಿದೆ.
ಅರ್ಜುನ, ದ್ರೋಣಾಚಾರ್ಯ ಸೇರಿದಂತೆ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಪಾತ್ರರಾದ ಕ್ರೀಡಾಪಟುಗಳ ಸಾಧನೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ಒಲಿಂಪಿಕ್ ಭವನದಲ್ಲಿ ಫೋಟೋಗಳನ್ನು ಅಳವಡಿಸಲಾಗಿದೆ. ಜೊತೆಗೆ ಭಾರತೀಯ ಕ್ರೀಡಾ ಇತಿಹಾಸದ ಅಮೂಲ್ಯ ಕ್ಷಣಗಳ ಚಿತ್ರಗಳನ್ನು ಸಹ ಪ್ರದರ್ಶಿಸಲಾಗಿದೆ.
ಶನಿವಾರ ನಡೆದ ಕಾರ್ಯಕ್ರಮವನ್ನು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ ಅವರು, ‘ಭಾರತದ ದೊಡ್ಡ ದೇಶವಾದರೂ, ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ಸ್ವಲ್ಪ ಕಡಿಮೆ. ಕರ್ನಾಟಕದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲಬೇಕು. ಕ್ರೀಡೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಲು ಸಿದ್ಧವಿದೆ. ಯಾವುದೇ ಆರ್ಥಿಕ ಕೊರತೆ ಇಲ್ಲ’ ಎಂದರು. ಸಾಧಕರಿಗೆ ತಮ್ಮ ಬಗ್ಗೆ ಕಿರು ವಿವರಗಳಿರುವ ಸ್ಮರಣಿಕೆಯೊಂದನ್ನು ವಿತರಿಸಲಾಯಿತು.
ದೇಶದಲ್ಲಿ 1000 ಖೇಲೋ ಇಂಡಿಯಾ ಸ್ಥಾಪನೆ: ರಿಜಿಜು
ಕಾರ್ಯಕ್ರಮದ ವೇಳೆ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ‘ಅರಣ್ಯ, ಪೊಲೀಸ್ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ಕ್ರೀಡಾಪಟುಗಳನ್ನು ನೇಮಕ ಮಾಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಕ್ರೀಡಾಪಟುಗಳಿಗೆ ವಿವಿಧ ಇಲಾಖೆಯ ಹುದ್ದೆಗಳಿಗೆ ನೇಮಕ ಮಾಡುವ ಬಗ್ಗೆ ಕ್ಯಾಬಿನೇಟ್‌ನಲ್ಲಿ ಚರ್ಚೆ ಆಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಅಶ್ವತ್ಥ್ ನಾರಾಯಣ, ಮಾಜಿ ಕ್ರೀಡಾಪಟುಗಳಾದ ಬಿ.ಸಿ.ರಮೇಶ್, ಅಶ್ವಿನಿ ನಾಚ್ಚಪ್ಪ, ರೀತ್ ಅಬ್ರಹಾಂ, ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್, ಹಾಕಿ ತಾರೆಗಳಾದ ಎಸ್.ವಿ.ಸುನಿಲ್, ವಿ.ಆರ್.ರಘುನಾಥ್ ಸೇರಿ ಇನ್ನೂ ಅನೇಕರು ಪಾಲ್ಗೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.