ದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು 1000 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲು ಭಾರತ ಸರ್ಕಾರ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.09): ನಿವೃತ್ತ ಕ್ರೀಡಾಪಟುಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ದೇಶದಲ್ಲಿ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ಆರಂಭಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಂಗಳವಾರ ಘೋಷಿಸಿದ್ದಾರೆ.
‘ನಿವೃತ್ತ ಕ್ರೀಡಾಪಟುಗಳು ಕೋಚ್ ಇಲ್ಲವೇ ಇತರ ಹುದ್ದೆಗಳನ್ನು ನಿರ್ವಹಿಸುವ ಮೂಲಕ ದೇಶದಲ್ಲಿ ಕ್ರೀಡಾ ಸಂಸ್ಕೃತಿ ರೂಪುಗೊಳ್ಳಲು ನೆರವು ನೀಡಲು ಈ ಯೋಜನೆ ಅನುಕೂಲವಾಗಲಿದೆ. ಕ್ರೀಡಾಪಟುಗಳು ಸಂಕಷ್ಟದಲ್ಲಿರುವುದನ್ನು ಕಂಡು ಯುವ ಪೀಳಿಗೆ ಕ್ರೀಡೆಯತ್ತ ಆಸಕ್ತಿ ತೋರುವುದಿಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಘೋಷಣೆಯಾಗುವ ಆರ್ಥಿಕ ನೆರವು ನೇರವಾಗಿ ಅವರಿಗೇ ತಲುಪುವಂತೆ ಮಾಡಲು ಸಚಿವಾಲಯ ಶ್ರಮಿಸುತ್ತಿದೆ’ ಎಂದು ರಿಜಿಜು ಹೇಳಿದ್ದಾರೆ.
ಒಂದೇ ಕಿಡ್ನಿ ಇದ್ರೂ ಸಾಧನೆಗೆ ಅಡ್ಡಿಯಾಗಲಿಲ್ಲ: ಅಂಜು ಬಾಬಿ ಜಾರ್ಜ್
ಇದೇ ವೇಳೆ ಕ್ರೀಡಾ ಸಚಿವ ಕಿರಣ್ ರಿಜಿಜು ಉಧ್ಯಮಿಗಳು, ಕಾರ್ಪೊರೇಟ್ ಮಂದಿ ಸರ್ಕಾರದ ಜತೆಗೆ ಕೈಜೋಡಿಸುವ ಮೂಲಕ ದೇಶದಲ್ಲಿ ಕ್ರೀಡಾ ವಾತಾವರಣವನ್ನು ಮತ್ತಷ್ಟು ಉತ್ತೇಜಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕ್ರೀಡೆಯ ಅಭಿವೃದ್ದಿಗೆ ಸರ್ಕಾರದ ವತಿಯಿಂದ ಯಾವುದೇ ಕೊರತೆಯಾಗುತ್ತಿಲ್ಲ. ಆದರೆ ಕೇವಲ ಸರ್ಕಾರದ ಪ್ರಯತ್ನ ಮಾತ್ರ ಸಾಕಾಗುವುದಿಲ್ಲ. ಜನರ ಪ್ರಯತ್ನ ಹಾಗೂ ಪಾಲ್ಗೊಳ್ಳುವಿಕೆಯಿಂದ ದೇಶದಲ್ಲಿ ಕ್ರೀಡೆ ಯಶಸ್ವಿಯಾಗಲು ಸಾಧ್ಯ ಎಂದು ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಜನಸಂಖ್ಯೆಯ ಕೇವಲ 2% ಮಂದಿ ಒಂದು ಕ್ರೀಡೆಯನ್ನು ಮೈದಾನದಲ್ಲಿ ಇಲ್ಲವೇ ಟಿವಿಯಲ್ಲಿ ವೀಕ್ಷಿಸಿದರೆ ಸಾಕು, ಅದು ಮತ್ತಷ್ಟು ಜನಪ್ರಿಯವಾಗಲಿದೆ. ಇದರ ಜತೆಗೆ ಹಣ ಹರಿದುಬರಲಿದ್ದು, ಆ ಕ್ರೀಡೆಯ ಅಭಿವೃದ್ದಿಗೆ ನೆರವಾಗಲಿದೆ. ನಾವೆಲ್ಲಾ ಒಟ್ಟಾಗಿ ಭಾರತವನ್ನು ಕ್ರೀಡಾ ಉದ್ಯಮವನ್ನಾಗಿ ಬೆಳೆಸಬೇಕಿದೆ. ಇದರಿಂದ ದೇಶದ ಆರ್ಥಿಕಾಭಿವೃದ್ದಿಗೂ ನೆರವಾಗಲಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.