ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಜಾರಿಯಲ್ಲಿದೆ. ಭಾರತ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.07): ಭಾರತದ ದಿಗ್ಗಜ ಟೆನಿಸಿಗ ಲಿಯಾಂಡರ್ ಪೇಸ್ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದಕ್ಕೆ ಹಾಕುವ ಸಾಧ್ಯತೆ ಇದೆ. ಪೇಸ್ ಈ ವರ್ಷ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು.
ಲಿಯಾಂಡರ್ ಪೇಸ್ 2020ರಲ್ಲಿ ಕೆಲ ಆಯ್ದ ಟೂರ್ನಿಗಳನ್ನು ಆಡಿ, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದರು. ಆದರೆ ಕೊರೋನಾ ಸೋಂಕಿನಿಂದಾಗಿ ಟೆನಿಸ್ ಚಟುವಟಿಕೆ ಸ್ಥಗಿತಗೊಂಡಿದ್ದು, ಈ ವರ್ಷ ಬಹುತೇಕ ಟೂರ್ನಿಗಳು ರದ್ದಾಗಲಿವೆ. ಹೀಗಾಗಿ, 2021ರ ಒಲಿಂಪಿಕ್ಸ್ ವರೆಗೂ ಪೇಸ್ ನಿವೃತ್ತಿ ಮುಂದೂಡಬಹುದು ಎನ್ನಲಾಗಿದೆ. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪೇಸ್ ಪಾಲ್ಗೊಂಡರೆ ಅದು ಅವರ 8ನೇ ಒಲಿಂಪಿಕ್ಸ್ ಆಗಲಿದೆ.
ಕಳೆದ ಡಿಸೆಂಬರ್‌ನಲ್ಲಿ ಲಿಯಾಂಡರ್ ಪೇಸ್ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ, ಆದರೆ ಆಯ್ದ ಟೂರ್ನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದರು. ಇನ್ನು ಬೆಂಗಳೂರು ಓಪನ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಇದು ಭಾರತದಲ್ಲಿ ಪೇಸ್ ಆಡಿದ ಕೊನೆಯ ಪಂದ್ಯಾವಳಿ ಎನಿಸಿತ್ತು. ಈ ಟೂರ್ನಿಯಲ್ಲಿ ಪೇಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆ ಬಳಿಕ ಡೇವಿಸ್ ಕಪ್ ಟೂರ್ನಿಯಲ್ಲೂ ಪೇಸ್ ಪಾಲ್ಗೊಂಡಿದ್ದರು.
ಲಿಯಾಂಡರ್ ಎನ್ನುವ ವಂಡರ್ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!
ಲಿಯಾಂಡರ್ ಪೇಸ್ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು 1996ರಲ್ಲಿ ನಡೆದ ಅಟ್ಲಾಂಟ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲಿಸಿಕೊಟ್ಟಿದ್ದರು. ಡಬಲ್ಸ್ ವಿಭಾಗದಲ್ಲಿ ಡೇವಿಸ್ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಲಿಯಾಂಡರ್ ಪೇಸ್ ಹೆಸರಿನಲ್ಲಿದೆ. ಲಿಯಾಂಡರ್ ಪುರುಷರ ಡಬಲ್ಸ್‌ನಲ್ಲಿ 8 ಹಾಗೂ ಮಿಶ್ರ ಡಬಲ್ಸ್‌ನಲ್ಲಿ 10 ಬಾರಿ ಗ್ರ್ಯಾಂಡ್‌ಸ್ಲಾಂ ಟ್ರೋಫಿಗೆ ಮುತ್ತಿಕ್ಕಿದ್ದಾರೆ.