* 10ನೇ ಬಾರಿಗೆ ಫಿಬಾ ಏಷ್ಯಾಕಪ್‌ಗೆ ಅರ್ಹತೆ ಪಡೆದ ಭಾರತ ಬಾಸ್ಕೆಟ್ ಬಾಲ್ ತಂಡ
* 10 ಲಕ್ಷ ರುಪಾಯಿ ಬಹುಮಾನ ಘೋಷಿಸಿ ಬಿಎಫ್‌ಐ ಅಧ್ಯಕ್ಷ
* ಭಾರತ ಸೇರಿ 16 ತಂಡಗಳು ಟ್ರೋಫಿಗಾಗಿ ಸೆಣಸಾಟ
ಜೆಡ್ಡಾ(ಆ.24): 2022ರ ಫಿಬಾ ಏಷ್ಯಾಕಪ್‌ಗೆ ಭಾರತ ಪುರುಷರ ತಂಡ ಸತತ 10ನೇ ಬಾರಿಗೆ ಅರ್ಹತೆ ಪಡೆದಿದೆ. ಇಲ್ಲಿ ನಡೆದ ಅರ್ಹತಾ ಸುತ್ತಿನ ‘ಎಚ್’ ಗುಂಪಿನಲ್ಲಿ ಭಾರತ 2ನೇ ಸ್ಥಾನ ಪಡೆದು ಅರ್ಹತೆ ಗಳಿಸಿತು. ಟೂರ್ನಿಯು ಮುಂದಿನ ವರ್ಷ ಜುಲೈನಲ್ಲಿ ಇಂಡೋನೇಷ್ಯಾದಲ್ಲಿ ನಡೆಯಲಿದ್ದು, ಭಾರತ ಸೇರಿ 16 ತಂಡಗಳು ಟ್ರೋಫಿಗಾಗಿ ಸೆಣಸಲಿವೆ.
ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲು ಅನುಭವಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಪ್ಯಾಲೆಸ್ತೇನ್ ವಿರುದ್ಧ ಜಯಗಳಿಸಿತ್ತು. ಗುಂಪಿನ ಅಂತಿಮ ಪಂದ್ಯದಲ್ಲಿ ಸೌದಿ ಅರೇಬಿಯಾ ಜಯಗಳಿಸಿದ ಕಾರಣ, ಭಾರತಕ್ಕೆ ಅರ್ಹತೆ ಪಡೆಯಲು ಅನುಕೂಲವಾಯಿತು.
ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ
ಭಾರತ ಈ ವರೆಗೂ 25 ಬಾರಿ ಏಷ್ಯಾಕಪ್‌ನಲ್ಲಿ ಸ್ಪರ್ಧಿಸಿದ್ದು, 1975ರಲ್ಲಿ 4ನೇ ಸ್ಥಾನ ಪಡೆದಿದ್ದು ತಂಡದ ಶ್ರೇಷ್ಠ ಪ್ರದರ್ಶನವೆನಿಸಿದೆ. 2017ರ ಆವೃತ್ತಿಯಲ್ಲಿ ಭಾರತ ಒಂದೂ ಗೆಲುವು ಕಾಣದೆ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಇದೇ ವೇಳೆ, 2023ರ ಫಿಬಾ ವಿಶ್ವಕಪ್ ಏಷ್ಯನ್ ಅರ್ಹತಾ ಟೂರ್ನಿಗೂ ಭಾರತ ಅರ್ಹತೆ ಪಡೆದಿದೆ. ವಿಶ್ವಕಪ್ ಏಷ್ಯನ್ ಅರ್ಹತಾ ಟೂರ್ನಿಯ ಡ್ರಾ ಆಗಸ್ಟ್ 31ರಂದು ನಡೆಯಲಿದೆ.
10 ಲಕ್ಷ ರುಪಾಯಿ ಬಹುಮಾನ
ಏಷ್ಯಾಕಪ್ ಹಾಗೂ ವಿಶ್ವಕಪ್ ಏಷ್ಯನ್ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದ ಭಾರತ ತಂಡವನ್ನು ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ) ಅಧ್ಯಕ್ಷ ಕೆ.ಗೋವಿಂದರಾಜು ಅಭಿನಂದಿಸಿದ್ದು, 10 ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದಾರೆ.
ತಂಡದ ಶ್ರೇಷ್ಠ ಪ್ರದರ್ಶನವಿದು
ಭಾರತ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವುದು ಬಹಳ ಖುಷಿ ನೀಡಿದೆ. ಕಳೆದ 10 ವರ್ಷಗಳಲ್ಲಿ ಭಾರತ ಪುರುಷರ ತಂಡದ ಶ್ರೇಷ್ಠ ಪ್ರದರ್ಶನವಿದು. ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. - ಕೆ.ಗೋವಿಂದರಾಜು, ಬಿಎಫ್‌ಐ ಅಧ್ಯಕ್ಷ