ಕೊರೋನಾ ಹೆಮ್ಮಾರಿಯ ಅಟ್ಟಹಾಸದ ಬಳಿಕ ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳು ಅಬ್ಬರಿಸಲು ರೆಡಿಯಾಗಿದ್ದಾರೆ. ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಒಂದೇ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.22): 2021ರ ಜನವರಿಯಲ್ಲಿ ನಡೆಯಲಿರುವ ಬಿಡಬ್ಲ್ಯೂಎಫ್ ವಿಶ್ವ ಟೂರ್ ಫೈನಲ್ಸ್ ಸೇರಿದಂತೆ 3 ಬ್ಯಾಡ್ಮಿಂಟನ್ ಟೂರ್ನಿಗಳಿಗೆ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಸೇರಿದಂತೆ 8 ಶಟ್ಲರ್‌ಗಳು ಭಾರತ ತಂಡದಲ್ಲಿ ಆಡಲಿದ್ದಾರೆ.
ಕೊರೋನಾ ಬಳಿಕ ಸಿಂಧು ಹಾಗೂ ಸೈನಾ ಮೊದಲ ಬಾರಿಗೆ ಒಟ್ಟಿಗೆ ಭಾರತ ತಂಡದ ಸ್ಪರ್ಧಾ ಕಣದಲ್ಲಿದ್ದಾರೆ. ಬ್ಯಾಂಕಾಕ್‌ನಲ್ಲಿ ಈ 3 ಟೂರ್ನಿಗಳು ನಡೆಯಲಿವೆ. ಜನವರಿ 12 ರಿಂದ 17 ರವರೆಗೆ ಯೋನೆಕ್ಸ್ ಥಾಯ್ಲೆಂಡ್ ಓಪನ್, ಜನವರಿ 19 ರಿಂದ 24 ರವರೆಗೆ ಟೋಯೋಟಾ ಥಾಯ್ಲೆಂಡ್ ಓಪನ್ ಮತ್ತು ಜನವರಿ 27 ರಿಂದ 31 ರವರೆಗೆ ಬಿಡಬ್ಲ್ಯೂಎಫ್ ವಿಶ್ವ ಟೂರ್ ಫೈನಲ್ಸ್ ಟೂರ್ನಿಗಳು ನಡೆಯಲಿವೆ.
ಭಾರತ ಪರ ಸಿಂಧು, ಸೈನಾ, ಸಾಯಿ ಪ್ರಣೀತ್, ಕೆ. ಶ್ರೀಕಾಂತ್, ಸಾತ್ವಿಕ್‌ಸಾಯಿರಾಜ್, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಸ್ಪರ್ಧಾ ಕಣದಲ್ಲಿದ್ದಾರೆ.
ಪಿ ವಿ ಸಿಂಧು ಜತೆ ತೆರಳಲು ಫಿಟ್ನೆಸ್ ಕೋಚ್‌ಗೆ ಅಸ್ತು...!
ಕೊರೋನಾ ವೈರಸ್ ಹೆಮ್ಮಾರಿಯ ಅಟ್ಟಹಾಸದ ಬಳಿಕ ಇದೇ ಮೊದಲ ಬಾರಿಗೆ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಸ್ಫರ್ಧಾತ್ಮಕ ಕ್ರೀಡೆಗೆ ಮರಳಲು ಸಜ್ಜಾಗುತ್ತಿದ್ದಾರೆ. ಇನ್ನು ಮಾಜಿ ನಂ.1 ಶ್ರೇಯಾಂಕಿತ ಆಟಗಾರ ಕಿದಂಬಿ ಶ್ರೀಕಾಂತ್ ಕಳೆದ ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇದೀಗ ಹೊಸ ವರ್ಷವನ್ನು ಭರ್ಜರಿಯಾಗಿಯೇ ಆರಂಭಿಸಲು ಭಾರತೀಯ ಬ್ಯಾಡ್ಮಿಂಟನ್ ಪಟುಗಳು ಎದುರು ನೋಡುತ್ತಿದ್ದಾರೆ.