ಸೆಮೀಸ್‌ನಲ್ಲಿ ಸೋತ ಕುಸ್ತಿಪಟು ಅಮನ್‌: ಇಂದು ಕಂಚಿನ ಪದಕಕ್ಕೆ ಫೈಟ್‌

By Naveen KodaseFirst Published Aug 9, 2024, 10:50 AM IST
Highlights

ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಅಮನ್‌ ಶೆರಾವತ್‌ ಸೆಮಿಫೈನಲ್‌ನಲ್ಲಿ ಸೋತಿದ್ದು, ಇಂದು ಕಂಚಿನ ಪದಕಕ್ಕಾಗಿ ಕಾದಾಟ ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್‌: ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಅಮನ್‌ ಶೆರಾವತ್‌ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ. ಇದರೊಂದಿಗೆ ಚಿನ್ನ ಗೆಲ್ಲುವ ಅವರ ಕನಸು ಭಗ್ನಗೊಂಡಿದ್ದು, ಶುಕ್ರವಾರ ಕಂಚಿನ ಪದಕಕ್ಕಾಗಿ ಆಡಬೇಕಿದೆ.

2022ರ ಏಷ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಅಮನ್‌, ಗುರುವಾರ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ 2016 ಒಲಿಂಪಿಕ್ಸ್‌ನ ಬೆಳ್ಳಿ ವಿಜೇತ ಜಪಾನ್‌ನ ರೇ ಹಿಗುಚಿ ವಿರುದ್ಧ ಕೇವಲ 2 ನಿಮಿಷ 14 ಸೆಕೆಂಡ್‌ಗಳಲ್ಲಿ 0-10 ಅಂತರದಲ್ಲಿ ಪರಾಭವಗೊಂಡರು.

Latest Videos

ಇದಕ್ಕೂ ಮುನ್ನ ಅಮನ್‌ ಮೊದಲ ಸುತ್ತಿನಲ್ಲಿ 2022ರ ಯುರೋಪಿಯನ್‌ ಚಾಂಪಿಯನ್‌, ಉತ್ತರ ಮೆಸೆಡೋನಿಯಾದ ಎಗೊರೊವ್‌ ವ್ಲಾಡಿಮಿರ್‌ ವಿರುದ್ಧ 10-0 ಅಂತರದಲ್ಲಿ ಗೆಲುವು ಸಾಧಿಸಿದರು. ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ 2022ರ ವಿಶ್ವ ಚಾಂಪಿಯನ್‌, ಅಲ್ಬೇನಿಯಾದ ಅಬಕರೊವ್‌ರನ್ನು 12-0 ಅಂಕಗಳಲ್ಲಿ ಮಣಿಸಿ ಸೆಮೀಸ್‌ಗೇರಿದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಹುಡುಗನಿಗೆ ಬೆಳ್ಳಿ ಕಿರೀಟ, ಭಾರತಕ್ಕೆ ಒಲಿದ 5ನೇ ಪದಕ..!

ಇದೇ ವೇಳೆ, ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಕಣದಲ್ಲಿರುವ ಭಾರತದ ಮತ್ತೋರ್ವ ಕುಸ್ತಿಪಟು, ರೀತಿಕಾ ಹೂಡಾ ಶನಿವಾರ ಸ್ಪರ್ಧಿಸಲಿದ್ದಾರೆ.

ಡೇರಿಯನ್‌ ವಿರುದ್ಧ ಕಂಚಿಗಾಗಿ ಸೆಣಸು

ಶುಕ್ರವಾರ ಕಂಚಿನ ಪದಕಕ್ಕಾಗಿ ಅಮನ್‌ ಅವರು ಪ್ಯುರೆಟೊ ರಿಕೊದ ಡೇರಿಯನ್‌ ಕ್ರಜ್‌ ಟೊಯಿ ವಿರುದ್ಧ ಸೆಣಸಾಡಲಿದ್ದಾರೆ. ಡೇರಿಯನ್‌ ಕ್ವಾರ್ಟರ್‌ನಲ್ಲಿ ಜಪಾನ್‌ನ ಹಿಗುಚಿ ವಿರುದ್ಧ ಸೋತಿದ್ದರು. ಹಿಗುಚಿ ಫೈನಲ್‌ಗೇರಿದ ಕಾರಣ ಡೇರಿಯನ್‌ಗೆ ಕಂಚಿನ ಪದಕ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿದೆ.

ಬೆಳ್ಳಿ ಪದಕವಾದರೂ ಕೊಡಿ: ಜಾಗತಿಕ ಕ್ರೀಡಾ ಕೋರ್ಟ್‌ ಕದ ತಟ್ಟಿದ ರೆಸ್ಲರ್‌ ವಿನೇಶ್‌!

ಪ್ಯಾರಿಸ್‌: ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್‌ ಫೋಗಟ್‌ ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ(ಸಿಎಎಸ್‌)ದ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಅವರು ಬುಧವಾರ ಸಂಜೆ ಸಿಎಎಸ್‌ಗೆ ಮೇಲ್‌ ಸಂದೇಶ ಕಳುಹಿಸಿದ್ದಾರೆ. ‘50 ಕೆ.ಜಿ. ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು, ಬೆಳ್ಳಿ ಪದಕವಾದರೂ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಿಎಎಸ್‌ ಪ್ರತಿಕ್ರಿಯೆ ನೀಡಿದ್ದು, ಗುರುವಾರ ಬೆಳಗ್ಗೆ ಈ ಬಗ್ಗೆ ತೀರ್ಪು ನೀಡುವುದಾಗಿ ತಿಳಿಸಿದೆ.
 

click me!