ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಹುಡುಗನಿಗೆ ಬೆಳ್ಳಿ ಕಿರೀಟ, ಭಾರತಕ್ಕೆ ಒಲಿದ 5ನೇ ಪದಕ..!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ

Neeraj Chopra Clinch Silver Medal Arshad Nadeem crushes the Olympic Record win gold medal kvn

ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ, ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ 5ನೇ ಒಲಿಂಪಿಕ್ ಪದಕ ತಮ್ಮದಾಗಿಸಿಕೊಂಡಿದೆ. ಇನ್ನು ಇದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಜಯಿಸಿದ ಮೊದಲ ಬೆಳ್ಳಿ ಪದಕ ಎನಿಸಿದೆ.  ನೆರೆಯ ಪಾಕಿಸ್ತಾನದ ಆರ್ಷದ್ ನದೀಮ್(92.97 ಮೀಟರ್) ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. 

26 ವರ್ಷದ ನೀರಜ್ ಚೋಪ್ರಾ, ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಎಸೆಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಫೈನಲ್‌ನಲ್ಲಿ ನೀರಜ್ ಚೋಪ್ರಾ ಮತ್ತೊಮ್ಮೆ ಚಿನ್ನದ ಪದಕ ಜಯಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಮೊದಲ ಪ್ರಯತ್ನವನ್ನು ಪೌಲ್ ಮಾಡಿದ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ ಈ ಸೀಸನ್‌ನ ಬೆಸ್ಟ್‌ ಪ್ರದರ್ಶನ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ಪಾಕಿಸ್ತಾನದ ಆರ್ಷದ್ ನದೀಮ್ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಂಡರು. ಇನ್ನು ಗ್ರೆನೇಡಾದ ಆಂಡರ್ಸನ್ ಪೀಟರ್ಸ್‌ 87.87 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು.

2 ಪದಕ ಗೆದ್ದ ಸ್ವತಂತ್ರ್ಯ ಭಾರತದ ನಾಲ್ಕನೇ ಅಥ್ಲೀಟ್‌: ನೀರಜ್ ಚೋಪ್ರಾ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಸ್ವಾತಂತ್ರ್ಯ ಬಳಿಕ ವೈಯುಕ್ತಿಕ ವಿಭಾಗದಲ್ಲಿ ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ 4ನೇ ಅಥ್ಲೀಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಶೂಟರ್ ಮನು ಭಾಕರ್ ಎರಡು ಒಲಿಂಪಿಕ್ ಪದಕ ಜಯಿಸಿದ್ದಾರೆ.

ಭಾರತಕ್ಕೆ 5ನೇ ಒಲಿಂಪಿಕ್ ಪದಕ: ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವು 5ನೇ ಪದಕ ತಮ್ಮದಾಗಿಸಿಕೊಂಡಿದೆ. ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿ ಪದಕದ ಖಾತೆ ತೆರೆದರು. ಇದಾದ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಕಂಚಿನ ಪದಕ ಜಯಿಸಿದರು. ಇನ್ನು ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್‌ ಕುಶಾಲೆ ಕಂಚಿನ ಪದಕ ಜಯಿಸಿದರು. ಇದಾದ ಬಳಿಕ ಭಾರತ ಪುರುಷರ ಹಾಕಿ ತಂಡವು ಸ್ಪೇನ್ ದೇಶವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಯಿತು. 

Latest Videos
Follow Us:
Download App:
  • android
  • ios