ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಅಮನ್ ಪಂದ್ಯಕ್ಕೂ ಮುನ್ನ 4.6 ಕೆಜಿ ತೂಕ ಇಳಿಸಿಕೊಂಡಿದ್ದರು. ಕೇವಲ 10 ಗಂಟೆಗೂ ಮುನ್ನ ಅಮನ್ ಇಷ್ಟು ತೂಕ ಕಳೆದುಕೊಂಡಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ತಾರಾ ಕುಸ್ತಿಪಟು ಅಮನ್ ಶೆರಾವತ್, ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ ಬರೋಬ್ಬರಿ 4.6 ಕೆ.ಜಿ. ತೂಕ ಇಳಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
21 ವರ್ಷದ ಅಮನ್ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. ಗುರುವಾರ ಬೆಳಗ್ಗೆ ಅಮನ್ ತೂಕ 57 ಕೆ.ಜಿ.ಗಿಂತ ಕಡಿಮೆ ಇದ್ದರು, ಆದರೆ ಅದೇ ದಿನ ರಾತ್ರಿ ಸೆಮಿಫೈನಲ್ ಪಂದ್ಯದ ಬಳಿಕ ತೂಕ 61.5 ಕೆ.ಜಿ.ಗೆ ಹೆಚ್ಚಳವಾಗಿದೆ. ಹೀಗಾಗಿ ಶುಕ್ರವಾರದ ಮತ್ತೊಂದು ಸುತ್ತಿನ ತೂಕ ಪರೀಕ್ಷೆಗೂ ಮುನ್ನ ಅಮನ್ 4.5 ಕೆ.ಜಿ. ತೂಕ ಇಳಿಸಬೇಕಾಗಿತ್ತು. ಹೀಗಾಗಿ ಇಡೀ ದಿನ ರಾತ್ರಿ ಶ್ರಮಪಟ್ಟಿದ್ದಾರೆ.
undefined
ಒಂದೂವರೆ ಗಂಟೆಗಳ ಕಾಲ ಮ್ಯಾಟ್‌ನಲ್ಲಿ ಅಭ್ಯಾಸ ನಡೆಸಿದ ಅಮನ್, ಬಳಿಕ ಒಂದು ಗಂಟೆ ಕಾಲ ಹಬೆಯ ಚೇಂಬರ್‌ನಲ್ಲಿ ಕೂತು ಬೆವೆತಿದ್ದಾರೆ. ಬಳಿಕ ಒಂದು ಗಂಟೆ ನಿರಂತರವಾಗಿ ಟ್ರೇಡ್ ಮಿಲ್‌ನಲ್ಲಿ ಓಡಿದ ಅವರು, ಮತ್ತೆ ಹಬೆಯ ಕೋಣೆಯಲ್ಲಿ ಕೂತಿದ್ದಾರೆ. ಇಷ್ಟಾದರೂ ತೂಕ ಇಳಿಯದಿದ್ದಾಗ ಹಲವು ಗಂಟೆಗಳ ಕಾಲ ಜಾಗಿಂಗ್, ಸ್ಕಿಪ್ಪಿಂಗ್ ಮೂಲಕ ಮತ್ತಷ್ಟು ತೂಕ ಕಡಿತಗೊಳಿಸಿದ್ದಾರೆ. ಬೆಳಗ್ಗೆ 4.30ಕ್ಕೆ ಪರಿಶೀಲಿಸಿದಾಗ ಅಮನ್ ತೂಕ 56.9 ಕೆ.ಜಿ.ಗೆ ಇಳಿಕೆಯಾಗಿದೆ. ರಾತ್ರಿ ಯಿಡೀ ಮಲಗದೆ ತೂಕ ಇಳಿಸಲು ಪ್ರಯತ್ನಿಸಿದ್ದ ಅಮನ್, ಕೇವಲ ನಿಂಬೆ ಜ್ಯೂಸ್, ನೀರು ಹಾಗೂ ಜೇನು ತುಪ್ಪ ಸೇವಿಸಿದ್ದರು ಎಂದು ತಿಳಿದುಬಂದಿದೆ.
ವಿನೇಶ್‌ಗೆ ಮುಳುವಾದ 100 ಗ್ರಾಂ ಅಮನ್‌ಗೆ ವರವಾಯ್ತು:
ಇತ್ತೀಚೆಗಷ್ಟೇ ವಿನೇಶ್ ಫೋಗಟ್ ತಮ್ಮ ತೂಕ 50 ಕೆ.ಜಿ.ಗಿಂತ ಜಾಸ್ತಿ ಇದ್ದಿದ್ದಕ್ಕೆ ಫೈನಲ್ ಪಂದ್ಯಕ್ಕೂಮುನ್ನ ಅನರ್ಹಗೊಂಡಿದ್ದರು. ಇಡೀ ರಾತ್ರಿ ನಿದ್ದೆ ಬಿಟ್ಟು ಕಠಿಣ ಪರಿಶ್ರಮ ಪಟ್ಟರೂ, ತೂಕ ಪರಿಶೀಲನೆ ವೇಳೆ 100 ಗ್ರಾಂ ಜಾಸ್ತಿ ಇದ್ದಿದ್ದು ವಿನೇಶ್‌ಗೆ ಮುಳುವಾಗಿತ್ತು. ಆದರೆ ಅಮನ್ ಇಡೀ ರಾತ್ರಿ ಪರಿಶ್ರಮದಿಂದಾಗಿ ತಮ್ಮ ತೂಕವನ್ನು ನಿಗದಿಗಿಂತ ಕಡಿಮೆ ಅಂದರೆ 57 ಕೆ.ಜಿ.ಗಿಂತಲೂ 100 ಗ್ರಾಂ ಕಡಿಮೆ ಮಾಡಿದ್ದು, ಪದಕವನ್ನು ತಂದುಕೊಟ್ಟಿದೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 8ನೇ ರೆಸ್ಲರ್‌ಗಳು
ಅಮನ್ ಗೆದ್ದ ಕಂಚಿನ ಪದಕ ಒಲಿಂಪಿಕ್ಸ್‌ನಲ್ಲಿ ಈ ವರೆಗೂ ಭಾರತಕ್ಕೆ ಲಭಿಸಿದ 8ನೇ ಪದಕ. 1952ರಲ್ಲಿ ಕೆ.ಡಿ.ಜಾಧವ್ ಮೊದಲ ಪದಕ(ಕಂಚು) ಗೆದ್ದಿದ್ದರು. ಆ ಬಳಿಕ 2008ರಲ್ಲಿ ಸುಶೀಲ್ ಕುಮಾರ್ ಕಂಚು, 2012ರಲ್ಲಿ ಸುಶೀಲ್ ಬೆಳ್ಳಿ ಮತ್ತು ಯೋಗೇಶ್ವರ್ ದತ್ ಕಂಚು, 2016ರಲ್ಲಿ ಸಾಕ್ಷಿ ಮಲಿಕ್ ಕಂಚು, 2020ರಲ್ಲಿ ರವಿ ಕುಮಾರ್ ಬೆಳ್ಳಿ ಹಾಗೂ ಬಜರಂಗ್ ಪೂನಿಯಾ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.