ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಂ ಬಗ್ಗೆ ನೀರಜ್ ಚೋಪ್ರಾ ತಾಯಿ ಮುತ್ತಿನಂತ ಮಾತನಾಡಿ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ/ಕರಾಚಿ: ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆಲ್ಲುತ್ತಾ ರೆಂಬ ನಿರೀಕ್ಷೆಯಿತ್ತಾದರೂ, ಅದನ್ನು ಪಾಕಿಸ್ತಾನದ ಅರ್ಶದ್ ನದೀಂ ಕೊರಳಿಗೇರಿಸಿಕೊಂಡಿದ್ದಾರೆ. ಚೋಪ್ರಾ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಅತ್ತ ಪ್ಯಾರಿಸ್‌ನಲ್ಲಿ ನೀರಜ್ ಹಾಗೂ ನದೀಂ ಅರ್ಶದ್ ಪದಕ ಗೆದ್ದಿದ್ದರೆ, ಇತ್ತ ಅವರಿಬ್ಬರ ತಾಯಂದಿರು ತಮ್ಮ ಹೇಳಿಕೆಗಳ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.
ಗುರುವಾರ ರಾತ್ರಿ ಪಂದ್ಯದ ಬಳಿಕ ಹರ್ಯಾಣದ ಪಾಣಿಪತ್‌ನಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿರುವ ನೀರಜ್ ತಾಯಿ ಸರೋಜ್ ದೇವಿ 'ನೀರಜ್ ಬೆಳ್ಳಿ ಗೆದ್ದಿದ್ದಕ್ಕೆ ಸಂತೋಷವಿದೆ. ಚಿನ್ನ ಗೆದ್ದ ಹುಡುಗ ಕೂಡಾ ನನಗೆ ಮಗನಿದ್ದಂತೆ. ನಾವು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದೇವೆ. ಇಬ್ಬರೂ ನಮಗೆ ಸಮಾನರು. ಅವರು ಇಬ್ಬರೂ ಕ್ರೀಡಾಪಟುಗಳು. ಈ ಸಾಧನೆಗಾಗಿ ಕಠಿಣ ಪರಿಶ್ರಮ ಪಟ್ಟಿದ್ದಾರೆ' ಎಂದಿದ್ದಾರೆ.
ಮತ್ತೊಂದೆಡೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೆವಾಲ್‌ನ ತಮ್ಮ ಮನೆಯಲ್ಲಿ ಮಾತನಾಡಿರುವ ನದೀಂ ತಾಯಿ ರಝಿಯಾ ಪರ್ವೀನ್, ನದೀಂ ಚಿನ್ನ ಗೆದ್ದಿದ್ದಕ್ಕೆ ಖುಷಿಯಿದೆ. ಆದರೆ ನೀರಜ್ ಕೂಡಾ ನನಗೆ ಮಗ ಇದ್ದಂತೆ. ಅವರು ಪದಕ ಗೆಲ್ಲಲು ನಾನು ಪ್ರಾರ್ಥಿಸಿದ್ದೆ. ನೀರಜ್ ಹಾಗೂ ನದೀಂ ಇಬ್ಬರೂ ಒಳ್ಳೆಯ ಸ್ನೇಹಿತರು. ಅವರ ಇನ್ನುಷ್ಟು ಸಾಧನೆ ಮಾಡಬೇಕು' ಎಂದಿದ್ದಾರೆ. ಸದ್ಯ ಇವರಿಬ್ಬರ ಹೇಳಿಕೆಗಳೂ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಭಾರತದ ನೀರಜ್ ಚೋಪ್ರಾನಿಂದ ಚಿನ್ನದ ಪದಕ ಕಿತ್ತುಕೊಂಡ ನದೀಂ 'ಪಂಜಾಬ್' ಹುಡುಗ..! ಈತ ಬೆಂಕಿಯಲ್ಲಿ ಅರಳಿದ ಹೂ
ಇನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ನೀರಜ್ ಚೋಪ್ರಾ ತಾಯಿ ಸರೋಜ ಅವರ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಚಿನ್ನ ಯಾರು ಗೆದ್ದಿದ್ದಾನೋ ಅವನೂ ನನ್ನ ಮಗನೇ" ಈ ಮಾತು ಒಬ್ಬ ಒಳ್ಳೆಯ ತಾಯಿ ಮಾತ್ರ ಹೇಳಬಲ್ಲರು. ಅದ್ಭುತ ಎಂದು ಅಖ್ತರ್ ಹೇಳಿದ್ದಾರೆ.
"Gold jis ka hai, wo bhi hamara he larka hai".
Yeh baat sirf aik maa he keh sakti hai. Amazing.
ಇನ್ನು ಕೆಲವು ನೆಟ್ಟಿಗರು ತಾಯೆಂದಿರೇ ಆಡಳಿತದ ಚುಕ್ಕಾಣಿ ಹಿಡಿದರೇ ಯಾವುದೇ ವಿವಾದವೇ ಇರುವುದಿಲ್ಲ ಎಂದು ಗಡಿ ಮೀರಿದ ಪ್ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಮನ್ ಶೆರಾವತ್ ಬದುಕಿನ ಕಥೆಯೇ ರೋಚಕ..! ಅನಾಥ ಹುಡುಗನಿಗೆ ಆಸರೆಯಾಗಿದ್ದು ಅಜ್ಜನ ಗರಡಿ..!
ಇತ್ತೀಚೆಗಷ್ಟೇ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಂ, ಒಲಿಂಪಿಕ್ ದಾಖಲೆಯೊಂದಿಗೆ ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿದರು. ಇನ್ನು ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.