ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿ ನಿರೀಕ್ಷೆಗಳನ್ನು ಬುಡಮೇಲು ಮಾಡಿದೆ. ಕ್ರೀಡಾ ಕ್ಷೇತ್ರದ ಸಾಧನೆಗೆ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿ ಗೆದ್ದಿದ್ದ ಕುಸ್ತಿ ಪಟು ಯೋಗೇಶ್ವರ್ ದತ್ ಚುನಾವಣಾ ಅಗ್ನಿಪರೀಕ್ಷೆಯಲ್ಲಿ ಸೋಲು ಕಂಡಿದ್ದಾರೆ.
ಹರ್ಯಾಣ(ಅ.25): ಲಂಡನ್ ಒಲಿಂಪಿಕ್ಸ್ ಕೂಟದಲ್ಲಿ ಕಂಚಿನ ಪದಕ ಗೆದ್ದ ಕುಸ್ತಿ ಪಟು ಯೋಗೇಶ್ವರ್ ದತ್ ಇತಿಹಾಸ ನಿರ್ಮಿಸಿದ್ದರು. ಭಾರತದ ಪ್ರಮುಖ ಕುಸ್ತಿಪಟುವಾಗಿ ಪದಕ ಸಾಧನೆ ಮಾಡಿದ ಯೋಗೇಶ್ವರ್‌ಗೆ ಚುನಾವಣಾ ಅಖಾಡದಲ್ಲಿ ಯಶಸ್ಸು ಸಿಕ್ಕಿಲ್ಲ. ಹರ್ಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ ಸೇರಿದ ಯೋಗೇಶ್ವರ್ ಬರೋಡಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
ಇದನ್ನೂ ಓದಿ: ಪಕ್ಷಾಂತರಿಗಳಿಂದ ಬಿಜೆಪಿಗೆ ಸೋಲು; ಮುಳುವಾದ ಬಂಡಾಯ ಅಭ್ಯರ್ಥಿಗಳು!
ಕಾಂಗ್ರೆಸ್‌ನ ಶ್ರೀ ಕೃಷ್ಣ ಹೂಡಾಗೆ ತೀವ್ರ ಪೈಪೋಟಿ ನೀಡಿದ ಯೋಗೇಶ್ವರ್ ದತ್ 4,840 ಮತಗಳಿಂದ ಸೋಲು ಅನುಭವಿಸಿದ್ದಾರೆ. ಹಾಲಿ MLA ಕಾಂಗ್ರೆಸ್‌ನ ಶ್ರೀ ಕೃಷ್ಣ ಹೂಡಾ 42,566 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಯೋಗೇಶ್ವರ್ ದತ್ 37,726 ಮತಗಳನ್ನು ಪಡೆದರು.
ಇದನ್ನೂ ಓದಿ: ಹರ್ಯಾಣ ಫಲಿತಾಂಶ ನಿರೀಕ್ಷೆ ಬೇಸ್ತು ಬಿದ್ದಿದ್ದೆಲ್ಲಿ?
ಕುಸ್ತಿ ಅಖಾಡಕ್ಕಿಳಿದಾಗ ಜನರು ನನಗೆ ಪ್ರೀತಿಯನ್ನು ತೋರಿದ್ದಾರೆ. ಇದೀಗ ನಾನು ಜನರ ಸೇವೆ ಮಾಡಬೇಕಿದೆ. ಇದಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದೇನೆ ಎಂದು ಯೋಗೇಶ್ವರ್ ದತ್ ಹೇಳಿದ್ದರು. ಬಳಿಕ ಹರ್ಯಾಣ ಪೊಲೀಸ್ ಇಲಾಖೆಯಲ್ಲಿನ ಹುದ್ದೆಗೆ ರಾಜೀನಾಮೆ ನೀಡಿದ್ದರು.
2012ರ ಲಂಡನ್ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ, 2010, 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2012ರಲ್ಲಿ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವ ಖೇಲ್ ರತ್ನ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕುಸ್ತಿ ಕಣದಲ್ಲಿ ಯಶಸ್ಸು ಸಾಧಿಸಿರುವ ಯೋಗೇಶ್ವರ್ ದತ್ ಚುನಾವಣಾ ಕಣದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.
ಹರ್ಯಾಣದಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 40, ಕಾಂಗ್ರೆಸ್ 31, ಇತರ 18 ಸ್ಥಾನಗಳನ್ನು ಗೆಲ್ಲೋ ಮೂಲಕ ಹರ್ಯಾಣದಲ್ಲಿ ಹೊಸ ರಾಜಕೀಯ ಚಟುವಟಿಕೆ ಆರಂಭಗೊಂಡಿದೆ.