ನಗರದ ಕಂಠೀರವ ಸ್ಟೇಡಿಯಂನಲ್ಲಿ ನೂತನ ಸುಸಜ್ಜಿತವಾದ ಕ್ರೀಡಾ ವಿಜ್ಞಾನ ಕೇಂದ್ರವನ್ನು ಉಪಮುಖ್ಯಮಂತ್ರಿ ಡಾ. ಸಿ.ಎಸ್. ಅಶ್ವತ್ಥ್ ನಾರಾಯಣ ಉದ್ಘಾಟಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಬೆಂಗಳೂರು[ಫೆ.01]: ಕಂಠೀರವ ಕ್ರೀಡಾಂಗಣದಲ್ಲಿ ನೂತನವಾಗಿ ಆರಂಭವಾಗಿರುವ ಸುಸಜ್ಜಿತವಾದ ಕ್ರೀಡಾ ವಿಜ್ಞಾನ ಕೇಂದ್ರವನ್ನು ಉಪಮುಖ್ಯಮಂತ್ರಿ ಅಶ್ವತ್‌್ಥ ನಾರಾಯಣ ಶುಕ್ರವಾರ ಉದ್ಘಾಟಿಸಿದರು.
ಸರ್ಕಾರದ ವತಿಯಿಂದ ಕ್ರೀಡಾ ಇಲಾಖೆ ಹಾಗೂ ಪೀಪಲ್ ಟ್ರೀ ಆಸ್ಪತ್ರೆಯ ಸಹಯೋಗದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಕೇಂದ್ರ ಕಾರ‍್ಯರಂಭ ಮಾಡಲಿದೆ. ಇಲಾಖೆಯ 350 ಕ್ರೀಡಾಪಟುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಉಳಿದಂತೆ ಬಡ ಅಥ್ಲೀಟ್‌ಗಳಿಗೆ ಶುಲ್ಕದಲ್ಲಿ ವಿನಾಯಿತಿ ಕಲ್ಪಿಸಲಾಗುತ್ತಿದೆ. ಅಲ್ಲದೇ ವಯೋ ವೃದ್ಧರು ಇಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
ವಿಜ್ಞಾನ ಕೇಂದ್ರದಲ್ಲಿ ಕ್ರೀಡಾ ಔಷಧಿ, ಶಸ್ತ್ರ ಚಿಕಿತ್ಸೆ, ಶ್ವಾಸಕೋಶ ಸಾಮರ್ಥ್ಯದ ಮೌಲ್ಯಮಾಪನ, ಫಿಸಿಯೋಥೆರಪಿ, ಸ್ಪೋರ್ಟ್ಸ್ ಬಯೋಮೆಕಾನಿಕ್ಸ್, ಕಿನೆಸಿಯೋಲಜಿ, 3ಡಿ ಮೂವ್‌ಮೆಂಟ್ ಅನಾಲಿಸಿಸ್, ಪುನಶ್ಚೇತನ ಶಿಬಿರ, ಕ್ರಯೋಥೆರಪಿ, ಹೈಡ್ರೋಥೆರಪಿ, ನೀರಿನಾಳದಲ್ಲಿ ತರಬೇತಿ, ಲೇಸರ್ ಥೆರಪಿ, ಗೆಲಿಲಿಯೋ ಫಿಟ್ನೆಸ್ ಟ್ರೈನಿಂಗ್, ನ್ಯೂಟ್ರಿಶಿಯನ್, ದೇಹದ ಕಂಪೋಸಿಷನ್ ಅನಾಲಿಸಿಸ್, ಸ್ಪೋರ್ಟ್ಸ್ ಸೈಕಾಲಜಿ, ಯೋಗ, ಧ್ಯಾನ ಹಾಗೂ ಗಾಯಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಶೀಘ್ರ ಟ್ರ್ಯಾಕ್ ಅಳವಡಿಕೆ
ಕಂಠೀರವ ಕ್ರೀಡಾಂಗಣದಲ್ಲಿನ ಸಿಂಥೆಟಿಕ್ ಟ್ರ್ಯಾಕ್ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಶೀಘ್ರದಲ್ಲೇ ನಿರ್ಮಾಣ ಕಾರ‍್ಯ ಕೈಗೆತ್ತಿಕೊಳ್ಳಲಾಗುವುದು. ಹಾಗೇ ಕ್ರೀಡಾಂಗಣದಲ್ಲಿನ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತಿಸಲಾಗಿದೆ ಎಂದು ಅಶ್ವತ್‌್ಥ ನಾರಾಯಣ ತಿಳಿಸಿದರು.