
ಬಾಗಲಕೋಟೆ, (ಮೇ.30): ರಾಜ್ಯದಲ್ಲಿ ಸೈಕ್ಲಿಸ್ಟ್ ಕ್ರೀಡಾಪಟುಗಳು ಅಂದ್ರೆ ಸಾಕು ಪ್ರತಿಯೊಬ್ಬರು ಕಣ್ಣು ಬೀಳೋದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮೇಲೆ. ಯಾಕಂದರೆ ಇಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರೋ ಅದೆಷ್ಟೋ ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದು, ಇವುಗಳ ಮಧ್ಯೆ ಇನ್ನೂ ಕೂಡಾ ನಿತ್ಯ ಸೈಕ್ಲಿಸ್ಟ್ಗಳು ಸಾಧನೆಯಲ್ಲಿ ತೊಡಗಿದ್ದಾರೆ.
ಆದರೆ ಅವರಿಗಾಗಿ ಒಂದು ವೆಲ್ಡ್ರೋಮ್ ವ್ಯವಸ್ಥೆ ಇಲ್ಲ. ಅಚ್ಚರಿ ಅಂದರೆ ರಾಜ್ಯದಲ್ಲಿಯೇ ಸರ್ಕಾರದಿಂದ ಅನುಕೂಲವಾಗುವ ಒಂದೇ ಒಂದು ವೆಲ್ಡ್ರೋಮ್ ಇಲ್ಲ, ಹೀಗಾಗಿ ಇದೀಗ ಬಡತನದ ಮಧ್ಯೆಯೂ ಸಾಧನೆ ಮಾಡಬೇಕೆಂಬ ಹಂಬಲ ಹೊತ್ತ ಬಡ ಸೈಕ್ಲಿಸ್ಟ್ಗಳಿಗೆ ಸಂಕಷ್ಟ ಎದುರಿಸುವಂತಾಗಿದೆ.
ಸಾಮಾನ್ಯವಾಗಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಅಂದರೆ ಸಾಕು ರಾಜ್ಯದಲ್ಲಿ ಸೈಕ್ಲಿಂಗ್ಗೆ ಫೇಮಸ್ ಅನ್ನೋ ಮಾತಿದೆ. ಈ ಜಿಲ್ಲೆಯ ಬಹುತೇಕರು ಇಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂದರೆ ಏಷಿಯನ್ ಚಾಂಪಿಯನ್ ಸೇರಿದಂತೆ ವಿವಿಧ ಚಾಂಪಿಯನದಲ್ಲಿಯೂ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಈ ಎಲ್ಲ ಕ್ರೀಡಾಪಟುಗಳಿಗೆ ಅಗತ್ಯವಾದ ವೆಲ್ಡ್ರೂಮ್ ಮಾತ್ರ ಇಲ್ಲಿಲ್ಲ.
ಹೌದು. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬೀಳಗಿ, ತುಳಸಿಗೇರಿ ಸೇರಿದಂತೆ ಹಲವು ಊರುಗಳಲ್ಲಿ ಇಂದಿಗೂ ಸಾಕಷ್ಟು ಜನ ಸೈಕ್ಲಿಸ್ಟ್ ಕ್ರೀಡಾಪಟುಗಳಿದ್ದಾರೆ. ಆದರೆ ಇಂತಹ ಜಿಲ್ಲೆಯಲ್ಲಿರೋ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತ್ರ ಅಗತ್ಯ ವ್ಯವಸ್ಥೆ ಕಾಣುತ್ತಿಲ್ಲ. ಮುಖ್ಯವಾಗಿ ಇಲ್ಲಿ ವೆಲ್ಡ್ರೂಮ್ ವ್ಯವಸ್ಥೆ ಆಗಬೇಕಿದೆ. ಯಾಕೆಂದರೆ ಈಗಿರುವ ಕ್ರೀಡಾಂಗಣದ ವ್ಯವಸ್ಥೆಯಲ್ಲಿ ಪ್ರ್ಯಾಕ್ಟಿಸ್ ಸಾಧ್ಯವಿಲ್ಲ. ಹೀಗಾಗಿ ಬೇರೆ ಬೇರೆ ಊರುಗಳಿಗೆ ರಸ್ತೆಯಲ್ಲೇ ಪ್ರ್ಯಾಕ್ಟಿಸ್ ಮಾಡುವ ಮೂಲಕ ಸೈಕ್ಲಿಸ್ಟ್ಗಳು ಸಾಧನೆ ಮಾಡುತ್ತಿದ್ದಾರೆ. ಒಂದೊಮ್ಮೆ ಬೃಹತ್ ಆಗಿರೋ ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ವೆಲ್ ಡ್ರೂಮ್ ವ್ಯವಸ್ಥೆ ಕಲ್ಪಿಸಿದಲ್ಲಿ ಜಿಲ್ಲೆಯ ಸೈಕ್ಲಿಸ್ಟ್ಗಳಿಗೆ ಇನ್ನಷ್ಟು ಸಾಧನೆ ಮಾಡಲು ಅತ್ಯಂತ ಅನುಕೂಲವಾಗಲಿದೆ ಅಂತಾರೆ ಸಾಧಕ ಕ್ರೀಡಾಪಟು ದಾನಮ್ಮ.
ಇನ್ನು ಅಚ್ಚರಿಯ ಸಂಗತಿ ಅಂದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಬದಲಾಗಿ ರಾಜ್ಯದಲ್ಲಿಯೇ ಸರ್ಕಾರದ ಯಾವುದೇ ಒಂದು ವೆಲ್ಡ್ರೋಮ್ ವ್ಯವಸ್ಥೆ ಇಲ್ಲ. ಹೀಗಾಗಿ ಬಡತನದಲ್ಲಿರೋ ಅದೆಷ್ಟೋ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಯಾವುದೇ ಅನುಕೂಲತೆ ಸಿಗುತ್ತಿಲ್ಲ. ಹಣ ಇದ್ದ ಶ್ರೀಮಂತರ ಮಕ್ಕಳಾಗಿರುವ ಸೈಕ್ಲಿಸ್ಟ್ಗಳು ಮಾತ್ರ ದೂರದ ದೆಹಲಿ, ಹೈದ್ರಾಬಾದ್ನಂತಹ ಊರುಗಳಿಗೆ ತೆರಳಿ ವರ್ಷವಿಡಿ ಅಲ್ಲಿಯೇ ಇದ್ದು ಪ್ರ್ಯಾಕ್ಟಿಸ್ ಮಾಡಲು ಮುಂದಾಗುತ್ತಾರೆ.
ಆದರೆ ಗ್ರಾಮೀಣ ಭಾಗದಲ್ಲಿರೋ ಅದೆಷ್ಟೋ ಸೈಕ್ಲಿಸ್ಟ್ಗಳಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕ್ರೀಡಾಂಗಣದಲ್ಲಿ ಮತ್ತು ರಸ್ತೆಗಳಲ್ಲಿಯೇ ಸೈಕ್ಲಿಂಗ್ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಸಾಧನೆಯನ್ನೂ ಸಹ ಜಿಲ್ಲೆಯಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳ ಮಾಡಿದ್ದಾರೆ. ಹೀಗಾಗಿ ಸಕಾ೯ರ ಇತ್ತ ಮನಸ್ಸು ಮಾಡಿ ವೆಲ್ ಡ್ರೋಮ್ ವ್ಯವಸ್ಥೆ ಕಲ್ಪಿಸಬೇಕಿದೆ.
ಇನ್ನು ಕ್ರೀಡಾ ವಿಭಾಗದಲ್ಲಿ ಇಂತಹ ಸಾಧನೆ ಮಾಡೋದ್ರಿಂದ ಅದೆಷ್ಟೋ ಬಡತನದ ಮಕ್ಕಳು ಕ್ರೀಡಾ ಕೋಟಾದಡಿ ರಾಜ್ಯ ಸಕಾ೯ರ ಮತ್ತು ಕೇಂದ್ರ ಸರ್ಕಾರದ ನೌಕರಿಯನ್ನ ಪಡೆಯಲು ಅತ್ಯಂತ ಸಹಕಾರಿ ಆಗಿದೆ. ಹೀಗಾಗಿ ಅದೆಷ್ಟೋ ಜಮ ಬಡ ಕುಟುಂಬದಿಂದ ಬಂದ ಸೈಕ್ಲಿಸ್ಟ್ ಗಳು ಶತಾಯಗತಾಯ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಹಠತೊಟ್ಟು ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ರಸ್ತೆಯಲ್ಲಿ ಜೀವದ ಹಂಗು ತೊರೆದು ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಇದರಿಂದ ಅದೆಷ್ಟೋ ಅಪಘಾತಗಳು ಸಹ ಸಂಭವಿಸಿವೆ. ಹೀಗಾಗಿ ಕೂಡಲೇ ಸರ್ಕಾರ ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ವೆಲ್ಡ್ರೋಮ್ ವ್ಯವಸ್ಥೆಯನ್ನ ಮಾಡಿದ್ದಲ್ಲಿ ಸೈಕ್ಲಿಸ್ಟ್ಗಳಿಗೆ ಇನ್ನಷ್ಟು ಅನುಕೂಲವಾಗಲಿದೆ ಅಂತಾರೆ ಸೈಕ್ಲಿಸ್ಟ್ ಸೌಮ್ಯ.
ಒಟ್ಟಿನಲ್ಲಿ ರಾಜ್ಯ, ಅಂತಾರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಅನ್ನೋ ನಿಟ್ಟಿನಲ್ಲಿ ವೆಲ್ ಡ್ರೂಮ್ ವ್ಯವಸ್ಥೆಗೆ ಆಗ್ರಹಿಸಿದ್ದು, ಇದಕ್ಕೆ ಸಂಭಂದಪಟ್ಟಂತೆ ಸಕಾ೯ರ ಜಿಲ್ಲಾಡಳಿತ ಮೂಲಕ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತೇ ಅಂತ ಕಾದು ನೋಡಬೇಕಿದೆ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.