* ಅಥ್ಲೀಟ್ ದಂತಕಥೆ ಮಿಲ್ಖಾ ಸಿಂಗ್‌ಗೆ ಕೋವಿಡ್ 19 ಪಾಸಿಟಿವ್
* ಮುನ್ನೆಚ್ಚರಿಕಾ ಕ್ರಮವಾಗಿ ಮಿಲ್ಖಾ ಸಿಂಗ್ ಆಸ್ಪತ್ರೆಗೆ ದಾಖಲು
* 91 ವರ್ಷದ ಮಿಲ್ಖಾ ಸಿಂಗ್‌ಗೆ ಕಳೆದ ವಾರವಷ್ಟೇ ಕೋವಿಡ್ ದೃಢ ಪಟ್ಟಿತ್ತು.
ಚಂಡೀಗಢ(ಮೇ.25): ಕೊರೋನಾ ವೈರಸ್ ತಗುಲಿ ಗೃಹ ಆರೈಕೆಯಲ್ಲಿದ್ದ ದೇಶದ ದಿಗ್ಗಜ ಅಥ್ಲೆಟಿಕ್ಸ್ ದಂತಕಥೆ ಮಿಲ್ಖಾ ಸಿಂಗ್ ಅವರನ್ನು ಮೊಹಾಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. 91 ವರ್ಷದ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಪುತ್ರ, ಖ್ಯಾತ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೀವ್ ಮಿಲ್ಖಾ ತಿಳಿಸಿದ್ದಾರೆ.
ನಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ವಲ್ಪ ಆಯಾಸಗೊಂಡಿದ್ದರು, ನಿನ್ನೆಯಿಂದ ಏನನ್ನೂ ಊಟ ಮಾಡಿಲ್ಲ. ಹೀಗಾಗಿ ನಾವು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಅವರ ಆರೋಗ್ಯ ಸ್ಥಿರವಾಗಿದ್ದರೂ ಸಹಾ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಹಿರಿಯ ವೈದ್ಯರು ತಂದೆಯ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಜೀವ್ ಮಿಲ್ಖಾ ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್‌ಗೆ ಕೊರೋನಾ ಪಾಸಿಟಿವ್
ವೈದ್ಯರು ನಮ್ಮ ತಂದೆಯ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಗಟ್ಟಿ ಮನುಷ್ಯ. ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸುವ ಅವರು ಆದಷ್ಟು ಬೇಗ ಗುಣಮುಖರಾಗುವ ವಿಶ್ವಾಸವಿದೆ ಎಂದು ಜೀವ್ ಮಿಲ್ಖಾ ತಿಳಿಸಿದ್ದಾರೆ.
ದುಬೈನಲ್ಲಿ ವಾಸವಾಗಿರುವ ಜೀವ್ ಮಿಲ್ಖಾ ತಮ್ಮ ತಂದೆಗೆ ಕೋವಿಡ್ ದೃಢಪಡುತ್ತಿದ್ದಂತೆಯೇ ಕಳೆದ ಶನಿವಾರ(ಮೇ.22)ದಂದು ಮೊಹಾಲಿಗೆ ಬಂದಿಳಿದಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona