* ಬೆಂಗಳೂರು ಬುಲ್ಸ್ ತಂಡಕ್ಕಿಂದು ತಮಿಳ್ ತಲೈವಾಸ್ ಸವಾಲು
* ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಲು ಹವಣಿಸುತ್ತಿದೆ ಬುಲ್ಸ್
* ಯು ಮುಂಬಾ ವಿರುದ್ದ ಆಘಾತಕಾರಿ ಸೋಲು ಕಂಡಿರುವ ಪವನ್ ಶೆರಾವತ್ ಪಡೆ
ಬೆಂಗಳೂರು(ಡಿ.24): ಪ್ರೊ ಕಬಡ್ಡಿ 8ನೇ ಆವೃತ್ತಿಯ (Pro Kabaddi League) ಉದ್ಘಾಟನಾ ಪಂದ್ಯದಲ್ಲೇ ದೊಡ್ಡ ಅಂತರದ ಸೋಲಿಗೆ ಶರಣಾಗಿದ್ದ ಬೆಂಗಳೂರು ಬುಲ್ಸ್ (Bengaluru Bulls), ಟೂರ್ನಿಯ ಆರಂಭಿಕ ಹಂತದಲ್ಲೇ ಒತ್ತಡಕ್ಕೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ. ತಂಡ ಅಂಕಪಟ್ಟಿಯಲ್ಲಿ ಬಹಳ ಹಿಂದೆ ಬೀಳುವುದರಿಂದ ಪಾರಾಗಬೇಕಿದ್ದರೆ ಶುಕ್ರವಾರ ನಡೆಯಲಿರುವ ತಮಿಳ್ ತಲೈವಾಸ್ (Tamil Thalaivas) ವಿರುದ್ಧದ ಪಂದ್ಯದಲ್ಲಿ ಗೆದ್ದು ಅಂಕಗಳ ಖಾತೆ ತೆರೆಯಬೇಕಿದೆ.
ಬುಲ್ಸ್ ದೌರ್ಬಲ್ಯವೇನು ಎನ್ನುವುದು ಮೊದಲ ಪಂದ್ಯದಲ್ಲೇ ಪ್ರದರ್ಶನಗೊಂಡಿತ್ತು. ಬಲಿಷ್ಠ ಯು ಮುಂಬಾದ ಎದುರು ಬುಲ್ಸ್ ಲೆಕ್ಕಾಚಾರ ತಲೆಕೆಳಗಾಯಿತು. ರೈಡ್ ಮಷಿನ್ ಪವನ್ ಶೆರಾವತ್ (Pawan Sehrawat) ಮೇಲೆ ತಂಡ ಈ ವರ್ಷವೂ ಅತಿಯಾಗಿ ಅವಲಂಬಿತಗೊಂಡಿದೆ ಎನ್ನುವುದು ಮೊದಲ ಪಂದ್ಯದಲ್ಲೇ ಸಾಬೀತಾಯಿತು. ಚಂದ್ರನ್ ರಂಜಿತ್ ದ್ವಿತೀಯ ರೈಡರ್ ಆಗಿ ತಮ್ಮ ಕಾರ‍್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆದರೆ ತಂಡಕ್ಕೆ 3ನೇ ರೈಡರ್ ಹಾಗೂ ಆಲ್ರೌಂಡರ್‌ನ ಕೊರತೆ ಇದೆ. ಜೊತೆಗೆ ತಂಡದ ಡಿಫೆನ್ಸ್ ಬಹಳ ದುರ್ಬಲವಾಗಿ ತೋರುತ್ತಿದೆ. ತಂಡ ಆದಷ್ಟುಬೇಗ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ಲೇ-ಆಫ್ ರೇಸ್‌ನಲ್ಲಿ ನಿಶ್ಚಿತವಾಗಿ ಹಿಂದೆ ಬೀಳಲಿದೆ.
ತಮಿಳ್ ತಲೈವಾಸ್ ತಂಡ ಉತ್ತಮ ರಕ್ಷಣಾ ಪಡೆಯನ್ನು ಹೊಂದಿದ್ದರೂ ತೆಲುಗು ಟೈಟಾನ್ಸ್ ಕೊನೆ ಒಂದೂವರೆ ನಿಮಿಷದಲ್ಲಿ ಪಂದ್ಯದ ಗತಿಯನ್ನೇ ಬದಲಿಸಿತ್ತು. ಹೀಗಾಗಿ ಎದುರಾಳಿಯ ಬಲಾಬಲವನ್ನು ಅರಿತು ಬುಲ್ಸ್ ತನ್ನ ರಣತಂತ್ರ ರೂಪಿಸಬೇಕಿದೆ.
ಗುಜರಾತ್ ಜೈಂಟ್ಸ್ ಗರ್ಜನೆಗೆ ಬೆಚ್ಚಿದ ಜೈಪುರ ಪ್ಯಾಂಥರ್ಸ್
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು: ಬಲಿಷ್ಠ ರಕ್ಷಣಾ ಪಡೆಗೆ ಹೆಸರುವಾಸಿಯಾಗಿರುವ ಗುಜರಾತ್ ಫಾರ್ಚೂನ್‌ಜೈಂಟ್ಸ್ (Gujarat Giants) 8ನೇ ಆವೃತ್ತಿ ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲೇ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಜೈಪುರ ಪಿಂಕ್ ಪ್ಯಾಂಥರ್ಸ್(Jaipur Pink Panthers) ವಿರುದ್ಧ ಗುರುವಾರ 34-27 ಅಂಕಗಳಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಗಿರೀಶ್ ಎರ್ನಾಕ್(07 ಟ್ಯಾಕಲ್ ಅಂಕ), ಸುನಿಲ್ ಕುಮಾರ್, ಪರ್ವೇಶ್‌ರಂತಹ ಬಲಿಷ್ಠ ಡಿಫೆಂಡರ್‌ಗಳನ್ನು ಹೊಂದಿರುವ ಗುಜರಾತ್ ಒಟ್ಟು 13 ಟ್ಯಾಕಲ್ ಅಂಕಗಳನ್ನು ಕಲೆಹಾಕಿತು.
ಅರ್ಜುನ್ ದೇಶ್ವಾಲ್ (10 ರೈಡ್ ಅಂಕ) ಹೋರಾಟದ ಹೊರತಾಗಿಯೂ ಪಿಂಕ್ ಪ್ಯಾಂಥರ್ಸ್ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 20-20ರಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲೂ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆ 5 ನಿಮಿಷದಲ್ಲಿ 8 ಅಂಕ ಗಳಿಸಿ ಗುಜರಾತ್ ಗೆಲುವಿನತ್ತ ಮುನ್ನುಗ್ಗಿತು.
PKL 2021 : ಬೆಂಗಳೂರು ಬುಲ್ಸ್ ಗೆ ಸೋಲಿನ ಗುದ್ದು, ತೆಲುಗು-ತಮಿಳ್ ಸೂಪರ್ ಟೈ
ಟರ್ನಿಂಗ್ ಪಾಯಿಂಟ್: ಕೊನೆ 5 ನಿಮಿಷ ಬಾಕಿ ಇದ್ದಾಗ ಉಭಯ ತಂಡಗಳು 27-27ರಲ್ಲಿ ಸಮಬಲ ಸಾಧಿಸಿದ್ದವು. ಆದರೆ ಸತತ 3 ಅಂಕ ಗಳಿಸಿ 30-27ರ ಮುನ್ನಡೆ ಪಡೆದ ಗುಜರಾತ್, ಅಂತಿಮ ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.
ನವೀನ್ ಸತತ 22ನೇ ಸೂಪರ್ 10 ಸಾಧನೆ!
ಬೆಂಗಳೂರು: ಹಿಂದಿನ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಸತತ 21 ಸೂಪರ್ 10 (ಪಂದ್ಯದಲ್ಲಿ 10 ಇಲ್ಲವೇ ಅದಕ್ಕಿಂತ ಹೆಚ್ಚು ರೈಡ್ ಅಂಕ ಗಳಿಕೆ) ಸಾಧನೆ ಮಾಡಿದ್ದ ದಬಾಂಗ್ ಡೆಲ್ಲಿಯ ಯುವ ರೈಡರ್ ನವೀನ್ ಕುಮಾರ್, 8ನೇ ಆವೃತ್ತಿಯನ್ನೂ ಭರ್ಜರಿ ಪ್ರದರ್ಶನದೊಂದಿಗೆ ಆರಂಭಿಸಿದ್ದಾರೆ. ಪುಣೇರಿ ಪಲ್ಟನ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 15 ರೈಡ್ ಅಂಕ ಗಳಿಸಿದ ನವೀನ್, ತಮ್ಮ ತಂಡ 41-30ರ ಅಮೋಘ ಗೆಲುವು ಸಾಧಿಸಲು ನೆರವಾದರು. ನಿತಿನ್ ತೋಮರ್, ರಾಹುಲ್ ಚೌಧರಿಯಂತಹ ಶ್ರೇಷ್ಠ ರೈಡರ್‌ಗಳನ್ನು ಹೊಂದಿದ್ದರೂ ಪುಣೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು.
ಇಂದಿನ ಪಂದ್ಯಗಳು
ಯು ಮುಂಬಾ-ದಬಾಂಗ್ ಡೆಲ್ಲಿ, ಸಂಜೆ 7.30ಕ್ಕೆ
ಬೆಂಗಳೂರು ಬುಲ್ಸ್-ತಮಿಳ್ ತಲೈವಾಸ್, ರಾತ್ರಿ 8.30ಕ್ಕೆ
ಬೆಂಗಾಲ್ ವಾರಿಯರ್ಸ್-ಗುಜರಾತ್ ಜೈಂಟ್ಸ್, ರಾತ್ರಿ 9.30ಕ್ಕೆ