Novak Djokovic: ಸೋಂಕಿತನಾದ ಬಳಿಕ ಐಸೋಲೇಟ್‌ ಆಗದೆ ತಪ್ಪು ಮಾಡಿದೆ ಎಂದ ಟೆನಿಸ್ ದಿಗ್ಗಜ

By Kannadaprabha News  |  First Published Jan 13, 2022, 9:29 AM IST

* ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕೊನೆಗೂ ಅನುಮತಿ ಪಡೆದ ನೊವಾಕ್ ಜೋಕೋವಿಚ್

* ಕೋವಿಡ್ ದೃಢಪಟ್ಟಿದ್ದರೂ ಐಸೋಲೇಷನ್‌ಗೊಳಗಾಗದೇ ತಪ್ಪು ಮಾಡಿದೆ ಎಂದ ಜೋಕೋ

* ಫ್ರಾನ್ಸ್‌ನಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ ನಂ.1 ಟೆನಿಸಿಗ


ಮೆಲ್ಬರ್ನ್(ಜ.13)‌: ವಿಶ್ವ ನಂ.1 ಟೆನಿಸಿಗ ನೊವಾಕ್‌ ಜೋಕೋವಿಚ್‌ (Novak Djokovic) ತಮಗೆ ಸೋಂಕು ತಗುಲಿರುವ ವಿಷಯ ತಿಳಿದ ಮೇಲೂ ಐಸೋಲೇಷನ್‌ಗೆ ಒಳಗಾಗದೆ ಇದ್ದಿದ್ದು ಸರಿಯಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಅವರು ಫ್ರಾನ್ಸ್‌ನಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ್ದಾರೆ. 

ಜೋಕೋವಿಚ್‌ಗೆ ಕೋವಿಡ್‌ (COVID Positive) ದೃಢಪಟ್ಟಿದ್ದು ಡಿಸೆಂಬರ್ 16ರಂದು. ಡಿಸೆಂಬರ್ 17ರಂದು ಅವರು ಕೆಲ ಸಾರ್ವಜನಿಕ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದವು. ಆದರೆ ಆ ಕಾರ‍್ಯಕ್ರಮಗಳಲ್ಲಿ ಭಾಗಿಯಾದ ಬಗ್ಗೆ ಜೋಕೋವಿಚ್‌ ತುಟಿ ಬಿಚ್ಚಿಲ್ಲ. ಇದೇ ವೇಳೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ (Australian Open) ಪಾಲ್ಗೊಳ್ಳಲು ಲಸಿಕೆ ವಿನಾಯಿತಿ ಅರ್ಜಿ ಸಲ್ಲಿಸುವಾಗ ಕಳೆದ 2 ವಾರ ಎಲ್ಲಿಯೂ ಪ್ರಯಾಣಿಸಿಲ್ಲವೇ? ಎನ್ನುವ ಪ್ರಶ್ನೆಗೆ ಜೋಕೋವಿಚ್‌ ‘ಇಲ್ಲ’ ಎಂದು ಉತ್ತರಿಸಿದ್ದರು. ಇದು ತಮ್ಮ ಸಿಬ್ಬಂದಿಯಿಂದ ಆಗಿರುವ ಎಡವಟ್ಟು ಎಂದು ಕ್ಷಮೆಯಾಚಿಸಿದ್ದಾರೆ.

Tap to resize

Latest Videos

undefined

ಜೋಕೋವಿಚ್ ಆಸ್ಪ್ರೇಲಿಯನ್‌ ಓಪನ್‌ ಆಡಲು ಓಕೆ

ಮೆಲ್ಬರ್ನ್‌: ವೀಸಾ ರದ್ದು ಪ್ರಕರಣದಲ್ಲಿ ಆಸ್ಪ್ರೇಲಿಯಾ ಸರ್ಕಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಲಸಿಕೆ ಪಡೆಯದ ಹೊರತಾಗಿಯೂ ಜೋಕೋವಿಚ್‌ ಜ.17ರಿಂದ ಆರಂಭವಾಗುವ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಸೋಮವಾರ ಜೋಕೋವಿಚ್‌ರ ವೀಸಾ ರದ್ದುಪಡಿಸುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್‌, ಈ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಜೋಕೋವಿಚ್‌ಗೆ ತಮಗೆ ಎದುರಾದ ಸಮಸ್ಯೆ, ಗೊಂದಲದ ಬಗ್ಗೆ ವಿವರಣೆ ನೀಡಲು ಸೂಕ್ತ ಸಮಯಾವಕಾಶ ನೀಡಲು ಸರ್ಕಾರ ವಿಫಲವಾಗಿದೆ ಎಂದು ತೀರ್ಪಿನಲ್ಲಿ ನ್ಯಾ. ಅಂಥೋನಿ ಕೆಲ್ಲಿ ತಿಳಿಸಿದರು. ಅಲ್ಲದೇ, ಅವರನ್ನು 30 ನಿಮಿಷಗಳೊಳಗೆ ಕ್ವಾರಂಟೈನ್‌ ಹೋಟೆಲ್‌ನಿಂದ ಬಿಡುಗಡೆ ಮಾಡಬೇಕೆಂದು ಆದೇಶಿಸಿದರು. ಹೋಟೆಲ್‌ನಿಂದ ಹೊರಬಂದ ಬಳಿಕ ಜೋಕೋವಿಚ್‌ ಅಭ್ಯಾಸ ಸಹ ಆರಂಭಿಸಿದರು. ಈ ಬೆಳವಣಿಗೆಯಿಂದ ಆಸ್ಪ್ರೇಲಿಯಾ ಸರ್ಕಾರಕ್ಕೆ ಮುಖಭಂಗವಾಗಿದೆ.

Novak Djokovic: ಜೋಕೋ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ

ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಪಾಲ್ಗೊಳ್ಳಲು ಲಸಿಕೆ ಪ್ರಮಾಣ ಪತ್ರ ಕಡ್ಡಾಯಗೊಳಿಸಿದ್ದರೂ ಹಾಲಿ ಚಾಂಪಿಯನ್‌, 20 ಗ್ರ್ಯಾನ್‌ಸ್ಲಾಂ ವಿಜೇತ ಜೋಕೋವಿಚ್‌ ಲಸಿಕೆ ಪಡೆದುಕೊಳ್ಳಲು ನಿರಾಕರಿಸಿದ್ದರು. ಬಳಿಕ ಕೋವಿಡ್‌ ದೃಢಪಟ್ಟ ಕಾರಣ ನೀಡಿ ಲಸಿಕೆ ಸ್ವೀಕರಿಸದೆ ವೈದ್ಯಕೀಯ ಅನುಮತಿ ಪಡೆದ ಅವರು, ಕಳೆದ ವಾರ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮೆಲ್ಬರ್ನ್‌ಗೆ ಆಗಮಿಸಿದ್ದರು. ಆದರೆ ಮೆಲ್ಬರ್ನ್‌ ವಿಮಾನ ನಿಲ್ದಾಣದಲ್ಲಿ ಜೋಕೋವಿಚ್‌ರನ್ನು ತಡೆದ ಅಧಿಕಾರಿಗಳು, ಅವರು ಸಲ್ಲಿಸಿರುವ ದಾಖಲೆಗಳು ಸರಿಯಿಲ್ಲ ಎನ್ನುವ ಕಾರಣ ನೀಡಿ, ವೀಸಾ ರದ್ದುಗೊಳಿಸಿ ವಿದೇಶಿ ಪ್ರಜೆಗಳ ಆಶ್ರಯ ತಾಣಕ್ಕೆ ಕಳುಹಿಸಿದ್ದರು. ಇದರ ವಿರುದ್ಧ ಜೋಕೋವಿಚ್‌ ಕೋರ್ಟ್‌ ಮೊರೆ ಹೋಗಿದ್ದರು.

ಆಸ್ಪ್ರೇಲಿಯನ್‌ ಓಪನ್‌: ಪ್ರಜ್ನೇಶ್‌ಗೆ ಸೋಲು

ಮೆಲ್ಬರ್ನ್‌: ಭಾರತದ ಪ್ರಜ್ನೇಶ್‌ ಗುಣೇಶ್ವರನ್‌ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೇರುವಲ್ಲಿ ವಿಫಲರಾಗಿದ್ದಾರೆ. ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಪ್ರಜ್ನೇಶ್‌, ಜರ್ಮನಿಯ ಮ್ಯಾಕ್ಸಿಮಿಲಿಯನ್‌ ವಿರುದ್ಧ 2-6, 6-7 ಸೆಟ್‌ಗಳಲ್ಲಿ ಸೋಲುಂಡರು. ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಗುರುವಾರ ಭಾರತದ ಯೂಕಿ ಭಾಂಬ್ರಿ ಆಡಲಿದ್ದು, ಪ್ರಧಾನ ಸುತ್ತಿಗೇರುವ ವಿಶ್ವಾಸದಲ್ಲಿದ್ದಾರೆ.

ಇಂಡಿಯಾ ಓಪನ್‌: 2ನೇ ಸುತ್ತಿಗೆ ಸೈನಾ ನೆಹ್ವಾಲ್‌

ನವದೆಹಲಿ: ಮಾಜಿ ಚಾಂಪಿಯನ್‌ ಸೈನಾ ನೆಹ್ವಾಲ್‌(Saina Nehwal), ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಲಕ್ಷ್ಯ ಸೆನ್‌ (Lakshya Sen) ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ (Indian Open Badminton Tournament) ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಚೆಕ್‌ ಗಣರಾಜ್ಯದ ತೆರೆಜಾ 20-22, 0-1ರಿಂದ ಹಿಂದಿದ್ದಾಗ ಗಾಯಗೊಂಡು ನಿವೃತ್ತಿಯಾದ ಕಾರಣ ಸೈನಾ 2ನೇ ಮುನ್ನಡೆದರು. ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಈಜಿಪ್ಟ್‌ನ ಎಲ್ಗಮಾಲ್‌ ವಿರುದ್ಧ 21-15, 21-7ರಲ್ಲಿ ಗೆದ್ದರು. ಎಚ್‌.ಎಸ್‌.ಪ್ರಣಯ್‌ ಸಹ ಮೊದಲ ಸುತ್ತಲ್ಲಿ ಜಯಿಸಿ 2ನೇ ಸುತ್ತಿಗೇರಿದರು.

click me!