Australian Open: ಫ್ಯಾನ್ಸ್‌ ಒತ್ತಡದಿಂದ ಫೈನಲ್ ಪಂದ್ಯ ಸೋತ ಡ್ಯಾನಿಲ್‌ ಮೆಡ್ವೆಡೆವ್‌

By Kannadaprabha News  |  First Published Feb 1, 2022, 10:53 AM IST

* ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸಿದ ರಾಫೆಲ್‌ ನಡಾಲ್

* ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌

* ಸ್ಥಳೀಯ ಪ್ರೇಕ್ಷಕರಿಂದ ವಿರೋಧ ಎದುರಿಸಿ ಕಿರಿಕ್ ಮಾಡಿಕೊಂಡ ರಷ್ಯಾದ ಆಟಗಾರ


ಮೆಲ್ಬರ್ನ್(ಫೆ.01)‌: ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ (Daniil Medvedev) ತಮ್ಮ ಆಕರ್ಷಕ ಆಟದಿಂದ ಟೆನಿಸ್‌ ಲೋಕದ ಮನಸು ಗೆದ್ದರೂ, ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ (Australian Open) ಟೂರ್ನಿಯುದ್ದಕ್ಕೂ ಸ್ಥಳೀಯ ಪ್ರೇಕ್ಷಕರಿಂದ ವಿರೋಧ ಎದುರಿಸಿ, ಆ ಹತಾಶೆಯಿಂದ ಹಲವು ಬಾರಿ ಕಿರಿಕ್‌ ಮಾಡಿ ಅನೇಕರ ಕೆಂಗಣ್ಣಿಗೂ ಗುರಿಯಾದರು. ಗಲಾಟೆ, ಗದ್ದಲಗಳು ಅವರ ಟ್ರೋಫಿ ಗೆಲುವಿನ ಆಸೆಗೂ ಅಡ್ಡಿಯಾಯಿತು. ನೊವಾಕ್‌ ಜೋಕೋವಿಚ್‌ ಹೊರಬಿದ್ದ ಬಳಿಕ ಟೂರ್ನಿ ಗೆಲ್ಲುವ ನೆಚ್ಚಿನ ಆಟಗಾರರ ಪೈಕಿ ಮೆಡ್ವೆಡೆವ್‌ ಸಹ ಒಬ್ಬರೆನಿಸಿದ್ದರು. ಆದರೆ ಆಸ್ಪ್ರೇಲಿಯಾದ ಬಹುತೇಕ ಟೆನಿಸ್‌ ಅಭಿಮಾನಿಗಳು ರಾಫೆಲ್‌ ನಡಾಲ್‌ರನ್ನು (Rafael Nadal) ಬೆಂಬಲಿಸುತ್ತಿದ್ದರು. 2ನೇ ಸುತ್ತಿನಲ್ಲಿ ಮೆಡ್ವೆಡೆವ್‌ಗೆ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ ಎದುರಾಗಿದ್ದರು. ಆ ಪಂದ್ಯದಲ್ಲಿ ಸ್ಥಳೀಯ ಪ್ರೇಕ್ಷಕರು ಮೆಡ್ವೆಡೆವ್‌ ಕೆರಳುವಂತೆ ಮಾಡಿದರು. ಪ್ರೇಕ್ಷಕರು ಹಾಗೂ ಮೆಡ್ವೆಡೆವ್‌ ನಡುವಿನ ಹಗ್ಗಜಗ್ಗಾಟ ಆ ಪಂದ್ಯದಿಂದಲೇ ಶುರುವಾಯಿತು.

ಪ್ರೇಕ್ಷಕರನ್ನು ಮೂರ್ಖರೆಂದ ಡ್ಯಾನಿಲ್‌: ನಡಾಲ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಪ್ರೇಕ್ಷಕರು ಗೇಮ್‌ ನಡುವೆ ಗಲಾಟೆ ಮಾಡುತ್ತಿದ್ದರು. ಇದು ಮೆಡ್ವೆಡೆವ್‌ರಲ್ಲಿ ಸಿಟ್ಟು ತರಿಸಿತು. ‘ದಯವಿಟ್ಟು ಗಲಾಟೆ ಮಾಡಬೇಡಿ’ ಎಂದು ಅಂಪೈರ್‌ ಒಂದೆರಡು ಬಾರಿ ಹೇಳಿದಾಗ ಮೆಡ್ವೆಡೆವ್‌ ಪ್ರೇಕ್ಷಕರತ್ತ ಕೈ ತೋರಿಸುತ್ತಾ ‘ಪ್ಲೀಸ್‌ ಎಂದು ಹೇಳಿದರೆ ಏನೂ ಪ್ರಯೋಜನವಿಲ್ಲ. ಇವರೆಲ್ಲಾ ಮೂರ್ಖರು. ಎಷ್ಟೇ ಸರಿ ಪ್ಲೀಸ್‌ ಎಂದರೂ ಕೇಳೋದಿಲ್ಲ. ಕಠಿಣ ಶಬ್ಧಗಳಲ್ಲಿ ಹೇಳಿ’ ಎಂದು ಅಂಪೈರ್‌ ಮೇಲೆ ಹರಿಹಾಯ್ದರು.

Tap to resize

Latest Videos

ಸೆಮಿಫೈನಲ್‌ ವೇಳೆ ಸಿಟ್ಸಿಪಾಸ್‌ರ ತಂದೆ ಪ್ರೇಕ್ಷಕರ ಸ್ಟ್ಯಾಂಡ್ಸ್‌ನಿಂದ ಕೋಚಿಂಗ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅವರ ಮೇಲೆ ಕ್ರಮ ಕೈಗೊಳ್ಳದ್ದಕ್ಕೆ ಅಂಪೈರ್‌ರನ್ನು ನಿಂದಿಸಿದ್ದರು. ಪಂದ್ಯ ಮುಗಿದರೂ ಮೆಡ್ವೆಡೆವ್‌ ಸಿಟ್ಟು ಕಡಿಮೆಯಾಗಿರಲಿಲ್ಲ. ಈ ಘಟನೆಗೆ ಟೂರ್ನಿ ಆಯೋಜಕರು ಮೆಡ್ವೆಡೆವ್‌ಗೆ 12,000 ಅಮೆರಿಕನ್‌ ಡಾಲರ್‌(ಅಂದಾಜು 9 ಲಕ್ಷ ರು.) ದಂಡ ವಿಧಿಸಿದ್ದರು.

Rafael Nadal: ದಾಖಲೆಯ 21 ಗ್ರ್ಯಾನ್‌ ಸ್ಲಾಂಗೆ ಅಧಿಪತಿ ರಾಫೆಲ್ ನಡಾಲ್‌

ಬಾಲ್‌ ಬಾಯ್ಸ್‌ಗೆ ಪಾಠ: ಫೈನಲ್‌ ವೇಳೆ ಮೆಡ್ವೆಡೆವ್‌ ಬಾಲ್‌ ಬಾಯ್ಸ್‌ ಜೊತೆಗೂ ವಾಗ್ವಾದ ನಡೆಸಿದರು. ಪ್ರತಿ ಬಾಲ್‌ ಬಾಯ್‌ ಕೇವಲ ಎರಡು ಚೆಂಡು ಮಾತ್ರ ಇಟ್ಟುಕೊಳ್ಳಬೇಕು. ತಮ್ಮ ಹಿಂದೆ ಯಾರೂ ನಿಲ್ಲಬಾರದು ಎಂದು ಪಾಠ ಮಾಡಿದರು. ಈ ಬಗ್ಗೆ ಅಂಪೈರ್‌ ಜೊತೆಗೂ ಚರ್ಚೆ ನಡೆಸಿದರು.

"Show some respect." 😡😡

Daniil Medvedev was NOT happy with the crowd behaviour tonight and he let them know in the on-court interview! 😳
- Live on Channel 9 and 9Now pic.twitter.com/5UKAFOuV9v

— Wide World of Sports (@wwos)

ಪ್ರಶಸ್ತಿ ವಿತರಣೆ ವೇಳೆ ಅಸಡ್ಡೆ: ಫೈನಲ್‌ ಮುಗಿದ ಬಳಿಕ ಪ್ರಶಸ್ತಿ ವಿತರಣೆ ವೇಳೆ ಆಯೋಜಕರು ಮೆಡ್ವೆಡೆವ್‌ರ ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾಗ ಪ್ರೇಕ್ಷಕರು ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಮೆಡ್ವೆಡೆವ್‌ ‘ಬೋರಿಂಗ್‌, ಬೋರಿಂಗ್‌’ ಎಂದು ಹಲವು ಬಾರಿ ಹೇಳುತ್ತಿದ್ದಿದ್ದು ಕಂಡು ಬಂತು. ಅವರ ಈ ವರ್ತನೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ರ‍್ಯಾಂಕಿಂಗ್‌‌: ನಂ.1 ಸ್ಥಾನದಲ್ಲೇ ಬಾರ್ಟಿ, ಜೋಕೋವಿಚ್‌

ಮೆಲ್ಬರ್ನ್‌: ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಆ್ಯಶ್ಲೆ ಬಾರ್ಟಿ ಹಾಗೂ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ನೋವಾಕ್‌ ಜೋಕೋವಿಚ್‌ (Novak Djokovic) ಟೆನಿಸ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಆಸ್ಪ್ರೇಲಿಯನ್‌ ಓಪನ್‌ ರನ್ನರ್‌-ಅಪ್‌ ಡ್ಯಾನಿಲ್‌ ಮೆಡ್ವೆಡೆವ್‌ 2ನೇ ಸ್ಥಾನದಲ್ಲಿ ಮುಂದುವರಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರುಸ್‌ನ ಆರ್ನಯ ಸಬಲೆಂಕಾ 2ನೇ ಸ್ಥಾನದಲ್ಲಿದ್ದಾರೆ. 

ಫ್ರೆಂಚ್‌ ಓಪನ್‌ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾ 3ನೇ ಸ್ಥಾನಕ್ಕೇರಿದರೆ, ಆಸ್ಪ್ರೇಲಿಯನ್‌ ಓಪನ್‌ ಸೆಮೀಸ್‌ನಲ್ಲಿ ಸೋತ ಇಗಾ ಸ್ವಿಯಾಟೆಕ್‌ 4ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಆಸ್ಪ್ರೇಲಿಯನ್‌ ಓಪನ್‌ ರನ್ನರ್‌-ಅಪ್‌ ಡೇನಿಯಲ್‌ ಕಾಲಿನ್ಸ್‌ ಮೊದಲ ಬಾರಿಗೆ ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದಾರೆ.
 

click me!