Australian Open 2022: ವರ್ಷದ ಮೊದಲ ಗ್ರ್ಯಾನ್‌ ಸ್ಲಾಂ ಜಯಿಸಿ ಇತಿಹಾಸ ಬರೆದ ಆ್ಯಶ್ಲೆ ಬಾರ್ಟಿ

By Suvarna News  |  First Published Jan 29, 2022, 5:30 PM IST

*ಅಸ್ಟ್ರೇಲಿಯನ್‌ ಓಪನ್ ಸಿಂಗಲ್ಸ್‌ಗೆ ಹೊಸ ಚಾಂಪಿಯನ್ ಉದಯ

* ವಿಶ್ವದ ನಂ.1 ಟೆನಿಸ್ ಆಟಗಾರ್ತಿ ಆ್ಯಶ್ಲೆ ಬಾರ್ಟಿ ನೂತನ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್

* 44 ವರ್ಷಗಳ ಬಳಿಕ ತವರಿನ ಆಟಗಾರ್ತಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್


ಮೆಲ್ಬೊರ್ನ್‌(ಜ.29): ಆಸ್ಟ್ರೇಲಿಯನ್ ಓಪನ್‌ (Australian Open) ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲೆ ಬಾರ್ಟಿ (Ashleigh Barty) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತವರಿನ  ಪ್ರೇಕ್ಷಕರೆದುರು ಅಮೋಘ ಪ್ರದರ್ಶನ ತೋರಿದ ಆ್ಯಶ್ಲೆ ಬಾರ್ಟಿ, 44 ವರ್ಷಗಳ ಆಸ್ಟ್ರೇಲಿಯನ್ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯಾದ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಟೆನಿಸ್ ಆಟಗಾರ್ತಿ ಡೇನಿಯಲ್‌ ಕಾಲಿನ್ಸ್‌ (Danielle Collins) ಎದುರು ಸಂಪೂರ್ಣ ಪ್ರಾಬಲ್ಯ ಮೆರೆಯುವ ಮೂಲಕ ಆ್ಯಶ್ಲೆ ಬಾರ್ಟಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇಲ್ಲಿನ ರಾಡ್ ಲೇವರ್ ಅರೆನಾ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ್ತಿ ಆ್ಯಶ್ಲೆ ಬಾರ್ಟಿ, ಎರಡನೇ ಸೆಟ್‌ನಲ್ಲಿ 5-1 ಅಂಕಗಳ ಹಿನ್ನೆಡೆ ಅನುಭವಿಸಿದ್ದರು. ಇದಾದ ಬಳಿಕ ಮಿಂಚಿನ ರೀತಿಯಲ್ಲಿ ಕಮ್‌ಬ್ಯಾಕ್‌ ಮಾಡಿದ ಆ್ಯಶ್ಲೆ ಬಾರ್ಟಿ 6-3, 7-6(7/2) ನೇರ ಸೆಟ್‌ಗಳ್ಲಲಿ ಗೆಲುವು ದಾಖಲಿಸುವ ಮೂಲಕ ಹೊಸ ವರ್ಷದ ಮೊದಲ ಗ್ರ್ಯಾನ್‌ ಸ್ಲಾಂಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. 

Tap to resize

Latest Videos

ಅಂದಹಾಗೆ 25 ವರ್ಷದ ಆ್ಯಶ್ಲೆ ಬಾರ್ಟಿ ಜಯಿಸಿದ ಮೂರನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಯಿದು. ಈ ಮೊದಲು 2019ರಲ್ಲಿ ಫ್ರೆಂಚ್ ಓಪನ್ (French Open) ಗ್ರ್ಯಾನ್ ಸ್ಲಾಂ ಜಯಿಸಿದ್ದ ಆ್ಯಶ್ಲೆ ಬಾರ್ಟಿ, ಇದಾದ ಬಳಿಕ ಕಳೆದ ವರ್ಷ ವಿಂಬಲ್ಡನ್ ಗ್ರ್ಯಾನ್‌ ಸ್ಲಾಂ ಮುಡಿಗೇರಿಸಿಕೊಂಡಿದ್ದರು. ಇದೀಗ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸುವ ಮೂಲಕ, ಮೂರು ಮಹತ್ವದ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ ಎರಡನೇ ಸಕ್ರಿಯ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಹಿರಿಮೆಗೆ ಆ್ಯಶ್ಲೆ ಬಾರ್ಟಿ ಪಾತ್ರರಾಗಿದ್ದಾರೆ. ಈಗಾಗಲೇ ಸೆರೆನಾ ವಿಲಿಯಮ್ಸನ್ ಈ ಸಾಧನೆ ಮಾಡಿದ್ದಾರೆ. 

Made Down Under ™️🇦🇺 • • pic.twitter.com/9zAY1GKD3w

— #AusOpen (@AustralianOpen)

ಈ ಮೊದಲು 1978ರಲ್ಲಿ ಆಸ್ಟ್ರೇಲಿಯಾದ ಕ್ರಿಸ್ಟಿಯಾನೆ ಓ ನೈಲ್‌, ತವರಿನಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಮೊದಲ ಸಾಧಕಿ ಎನಿಸಿದ್ದರು. ಇದಾದ ಬಳಿಕ ಯಾವೊಬ್ಬ ಆಸ್ಟ್ರೇಲಿಯಾದ ಪುರುಷ/ಮಹಿಳಾ ಟೆನಿಸ್ ಆಟಗಾರ್ತಿಯೂ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಲು ಯಶಸ್ವಿಯಾಗಿರಲಿಲ್ಲ. ಆದರೆ ಇದೀಗ ಆ್ಯಶ್ಲೆ ಬಾರ್ಟಿ ತವರಿನ ಅಭಿಮಾನಿಗಳ ಎದುರು ಮಹಿಳಾ ಸಿಂಗಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

Australian Open : ಫೈನಲ್‌ಗೆ ರಾಫೆಲ್‌ ನಡಾಲ್‌, ಡ್ಯಾನಿಲ್‌ ಮೆಡ್ವೆಡೆವ್‌

ಆ್ಯಶ್ಲೆ ಬಾರ್ಟಿ ಮೊದಲ ಸುತ್ತಿನಿಂದಲೇ ಆಕ್ರಮಣಕಾರಿ ಆಟದ ಮೂಲಕ ಆಸ್ಟ್ರೇಲಿಯಾದ ಆಟಗಾರ್ತಿಯ ಮೇಲೆ ಒತ್ತಡ ಹೇರುತ್ತಲೇ ಸಾಗಿದರು. ಕೇವಲ 32 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ 6-3 ಸೆಟ್‌ಗಳ ಮುನ್ನಡೆ ಸಾಧಿಸುವ ಮೂಲಕ ಮೊದಲ ಸೆಟ್‌ ಅನಾಯಾಸವಾಗಿ ಕೈವಶ ಮಾಡಿಕೊಂಡರು. ಇನ್ನು ಎರಡನೇ ಸೆಟ್‌ನಲ್ಲಿ 27ನೇ ಶ್ರೇಯಾಂಕಿತೆ ಡೇನಿಯಲ್‌ ಕಾಲಿನ್ಸ್‌ ಪ್ರಬಲ ಪೈಪೋಟಿ ನೀಡಿದರು. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಡೇನಿಯಲ್‌ ಕಾಲಿನ್ಸ್‌ ಒಂದು ಹಂತದಲ್ಲಿ 5-1 ಅಂಕಗಳ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಎರಡನೇ ಸೆಟ್ ಕೈವಶ ಮಾಡಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದರು. ಆದರೆ ಆರಂಭಿಕ ಹಿನ್ನೆಡೆಯನ್ನು ಮೆಟ್ಟಿನಿಂತ ಆ್ಯಶ್ಲೆ ಬಾರ್ಟಿ ಭರ್ಜರಿ ಗೆಲುವು ಸಾಧಿಸಿ ಬೀಗಿದರು. ಭಾನುವಾರ

ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ರಾಫೆಲ್ ನಡಾಲ್-ಡ್ಯಾನಿಲ್‌ ಮೆಡ್ವೆಡೆವ್‌ ಪೈಪೋಟಿ

ಭಾನುವಾರ ನಡೆಯಲಿರುವ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಪಟ್ಟಕ್ಕಾಗಿ ಸ್ಪೇನ್‌ನ ರಾಫೆಲ್ ನಡಾಲ್ (Rafael Nadal) ಹಾಗೂ ಡ್ಯಾನಿಲ್ ಮೆಡ್ವೆಡೆವ್‌ ಪೈಪೋಟಿ ನಡೆಸಲಿದ್ದಾರೆ. ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ನಡಾಲ್ ಆಸೆಗೆ ತಣ್ಣೀರೆರಚಲು ಡ್ಯಾನಿಲ್ ಮೆಡ್ವೆಡೆವ್‌ ಸಜ್ಜಾಗಿದ್ದಾರೆ. ಕಳೆದ ವರ್ಷ ಯುಎಸ್‌ ಓಪನ್‌ ಫೈನಲ್‌ನಲ್ಲಿ ಜೋಕೋವಿಚ್‌ಗೆ ಸೋಲುಣಿಸಿ, ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ಅವರ ಕನಸಿಗೆ ಅಡ್ಡಿಯಾಗಿದ್ದ ಮೆಡ್ವೆಡೆವ್‌, ನಡಾಲ್‌ಗೂ ನಿರಾಸೆ ಉಂಟು ಮಾಡಲು ಕಾಯುತ್ತಿದ್ದಾರೆ.

click me!