
ಪ್ಯಾರಿಸ್: ಭಾರತದ ರಾಕೇಶ್ ಕುಮಾರ್ ಹಾಗೂ ಶೀತಲ್ ದೇವಿ ಮಿಶ್ರ ತಂಡ ವಿಭಾಗದ ಕಾಂಪೌಂಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೋಮವಾರ ಕಂಚಿನ ಪದಕ ಪಂದ್ಯದಲ್ಲಿ ಭಾರತೀಯ ಜೋಡಿಗೆ ಇಟಲಿ ವಿರುದ್ಧ 156-155 ಅಂಕಗಳಲ್ಲಿ ಗೆಲುವು ಲಭಿಸಿತು.
ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ 154-143 ಅಂಕಗಳಿಂದ ಗೆದ್ದಿದ್ದ ಭಾರತ, ಸೆಮಿಫೈನಲ್‌ನಲ್ಲಿ ಇರಾನ್ ವಿರುದ್ಧ ಶೂಟ್‌ಆಫ್‌ನಲ್ಲಿ ವೀರೋಚಿತ ಸೋಲನುಭವಿಸಿತು. ರಾಕೇಶ್ ಹಾಗೂ ಶೀತಲ್ ಇಬ್ಬರೂ ವೈಯಕ್ತಿಕ ವಿಭಾಗಗಳಲ್ಲಿ ಸೋತು ಪದಕ ತಪ್ಪಿಸಿಕೊಂಡಿದ್ದರು.
ಇನ್ನು ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ ಅವರು ಕಂಚಿನ ಪದಕ ಜಯಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ಅಭಿನಂದನೆ ಸಲ್ಲಿಸಿದ್ದಾರೆ. "ಮಿಶ್ರ ತಂಡ ವಿಭಾಗದ ಕಾಂಪೌಂಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್‌ಗೆ ಅಭಿನಂದನೆಗಳು. ನಿಮ್ಮ ಈ ಸಾಧನೆಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಎಕ್ಸ್' ಖಾತೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಅವನಿ, ಮೋನಾ, ಮರಿಯಪ್ಪನ್ ಸ್ಪರ್ಧೆ
ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈ ಬಾರಿ ಈಗಾಗಲೇ ಪದಕ ತಂದುಕೊಟ್ಟಿರುವ ಶೂಟರ್‌ಗಳಾದ ಅವನಿ ಲೇಖರಾ, ಮೋನಾ ಅಗರ್‌ವಾಲ್ ಮಂಗಳವಾರ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನ ಮಹಿಳಾ ಶಾಟ್‌ಪುಟ್‌ನಲ್ಲಿ ಭಾಗ್ಯಶ್ರೀ, ಹೈಜಂಪ್‌ನಲ್ಲಿ ಶರದ್, ಮರಿಯಪ್ಪನ್, ಶೈಲೇಶ್ ಕುಮಾರ್ ಕಣದಲ್ಲಿದ್ದಾರೆ.
ಪುರುಷರ ಜಾವೆಲಿನ್ ಎಸೆತದಲ್ಲಿ ಅಜೀತ್, ರಿಂಕು, ಸುಂದರ್ ಸಿಂಗ್ ಸ್ಪರ್ಧಿಸಲಿದ್ದಾರೆ. ಆರ್ಚರಿಯ ರೀಕರ್ವ್ ವಿಭಾಗದಲ್ಲಿ ಪೂಜಾ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ಶೂಟಿಂಗ್: ಫೈನಲ್‌ಗೇರಲು ನಿಹಾಲ್, ಅಮೀರ್ ವಿಫಲ
ಭಾರತದ ಶೂಟರ್‌ಗಳಾದ ನಿಹಾಲ್ ಸಿಂಗ್ ಹಾಗೂ ಅಮೀರ್ ಅಹ್ಮದ್ ಭಟ್ ಮಿಶ್ರ 25 ಮೀ. ಪಿಸ್ತೂಲ್(ಎಸ್‌ಎಚ್1) ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಸೋಮವಾರ ನಡೆದ ಅರ್ಹತಾ ಸುತ್ತಿನಲ್ಲಿ ನಿಹಾಲ್ 569 ಅಂಕಗಳೊಂದಿಗೆ 10ನೇ ಸ್ಥಾನ ಪಡೆದರೆ, ಅಮೀರ್ 568 ಅಂಕ ಸಂಪಾದಿಸಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಗ್ರ-8 ಶೂಟರ್‌ಗಳು ಫೈನಲ್ ಪ್ರವೇಶಿಸಿದರು. ಈ ಬಾರಿ ಶೂಟಿಂಗ್‌ನಲ್ಲಿ ಭಾರತ ಈಗಾಗಲೇ 1 ಚಿನ್ನ ಸೇರಿ ಒಟ್ಟು 4 ಪದಕ ಗೆದ್ದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.