25000ಕ್ಕೂ ಅಧಿಕ ಓಟಗಾರರ ಪಾಲ್ಗೊಳ್ಳುವಿಕೆ ಮೂಲಕ ಸಿಟಿ ರನ್ ವಿಪ್ರೋ ಬೆಂಗಳೂರು ಮ್ಯಾರಥಾನ್ ಯಶಸ್ವಿಯಾಗಿದೆ. ನವದೆಹಲಿ ಮ್ಯಾರಥಾನ್ ಗೆದ್ದಿದ್ದ ಅನೀಶ್ ಥಾಪಾ ಒಂದೇ ವರ್ಷದಲ್ಲಿ ಎರಡೆರಡು ಮ್ಯಾರಥಾನ್ ಕಿರಿಟೀ ಗೆದ್ದುಕೊಂಡಿದ್ದಾರೆ.
ಬೆಂಗಳೂರು(ಅ.08): ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಅನೀಶ್ ಥಾಪ (ಎಸ್‌ಎಸ್‌ಸಿಬಿ) ಹಾಗೂ ಮಹಾರಾಷ್ಟ್ರದ ಜ್ಯೋತಿ ಗಾವಟೆ ವಿಪ್ರೋ ಬೆಂಗಳೂರು ಮ್ಯಾರಥಾನ್‌ನ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ.ಭಾನುವಾರ ನಗರದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ 25000ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿದ್ದು ವಿಶೇಷವೆನಿಸಿತು. ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಬೆಳಗ್ಗಿನ ಜಾವ ಓಟಕ್ಕೆ ಚಾಲನೆ ನೀಡಿದರು. ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಿತು. 42.195 ಕಿಲೋ ಮೀಟರ್‌ಗಳ ಪೂರ್ಣ ಮ್ಯಾರಥಾನ್, 21.1 ಕಿಲೋ ಮೀಟರ್‌ಗಳ ಹಾಫ್ ಮ್ಯಾರಥಾನ್ ಹಾಗೂ 5 ಕಿಲೋ ಮೀಟರ್‌ಗಳ ಹೋಪ್ ರನ್.
ಅನೀಶ್ ಥಾಪಗಿದು ಈ ವರ್ಷದಲ್ಲಿ 2ನೇ ಗೆಲುವು. ಅವರು ಎನ್‌ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ ನವದೆಹಲಿ ಮ್ಯಾರಥಾನ್‌ನಲ್ಲೂ ಗೆಲುವು ಸಾಧಿಸಿದ್ದರು. ಭಾನುವಾರ ಅನೀಶ್ 2 ಗಂಟೆ 18.06 ನಿಮಿಷಗಳಲ್ಲಿ ಮ್ಯಾರಥಾನ್ ಓಟ ಪೂರ್ತಿಗೊಳಿಸಿ ತಮ್ಮ ಪ್ರತಿಸ್ಪರ್ಧಿಗಳಾದ ಅಕ್ಷಯ್ ಸೈನಿ (ಎಸ್‌ಎಸ್‌ಸಿಬಿ) ಹಾಗೂ ಕುಲ್ದೀಪ್ ಸಿಂಗ್ (ಉತ್ತರ ಪ್ರದೇಶ) ರನ್ನು ಸೋಲಿಸಿದರು.
undefined
ಭಲೇ ನಾರಿ..ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಒಡಿದ ಒಡಿಯಾ ಮಹಿಳೆ!
3 ಗಂಟೆ 8.53 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದ ಜ್ಯೋತಿ ಗಾವಟೆ, ಮಹಾರಾಷ್ಟ್ರದವರೇ ಆದ ತಮ್ಮ ಪ್ರತಿಸ್ಪರ್ಧಿ ಅಶ್ವಿನಿ ಜಾಧವ್(3 ಗಂಟೆ 9.00 ನಿಮಿಷ)ರನ್ನು ಮಣಿಸಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.
ರೇಸ್ ನಿರ್ದೇಶಕ ನಾಗರಾಜ ಅಡಿಗ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ಹಲವು ಯುವ ಹಾಗೂ ಉತ್ಸಾಹಿ ಓಟಗಾರರು ಪಾಲ್ಗೊಳ್ಳುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ. ಮುಂದಿನ ಆವೃತ್ತಿಗಳಲ್ಲಿ ಈ ಓಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಯತ್ನಿಸುತ್ತೇವೆ. ಈ ಕಾರ್ಯಕ್ರಮವು ಪ್ರಾಯೋಜಕರಾದ ವಿಪ್ರೋ ಸಂಸ್ಥೆ, ಬೆಂಗಳೂರು ಪೊಲೀಸರು ಹಾಗೂ ಓಟಗಾರರ ಸಮೂಹದ ಸಹಕಾರವಿಲ್ಲದಿದ್ದರೆ ಯಶಸ್ವಿಯಾಗುತ್ತಿರಲಿಲ್ಲ’ ಎಂದರು.
ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ‘ಇಷ್ಟೊಂದು ಪ್ರಮಾಣದಲ್ಲಿ ಬೆಂಗಳೂರಿನ ನಾಗರಿಕರು ಇಷ್ಟು ಬೆಳಗ್ಗೆ ಎದ್ದು ಓಟದ ಸ್ಪರ್ಧೆಗೆ ಬಂದಿರುವುದನ್ನು ನೋಡಿ ಬಹಳ ಖುಷಿಯಾಗುತ್ತದೆ’ ಎಂದರು. ಇದೇ ವೇಳೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರ ಅಭೂತಪೂರ್ವ ಪ್ರದರ್ಶನವನ್ನು ರಾಜ್ಯಪಾಲರು ಕೊಂಡಾಡಿದರು.
ವಿಜೇತರಿಗೆ ಪ್ರಶಸ್ತಿ ವಿತರಿಸಿದ ಕ್ರೀಡಾ ಸಚಿವ ಬಿ. ನಾಗೇಂದ್ರ, ಬೆಂಗಳೂರಿಗರ ಉತ್ಸಾಹ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಆಸಕ್ತಿ ತೋರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ, ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಕ್ರೀಡೆಯು ಎಲ್ಲಾ ವರ್ಗದವರನ್ನು ಒಟ್ಟುಗೂಡಿಸುವ ಸಾಮರ್ಥ್ಯ ಹೊಂದಿದೆ ಎಂದರು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಅವರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದರು.
ನಮಸ್ಕಾರ ಬೆಂಗಳೂರು, ಎಂಜಾಯ್ ಮಾಡಿ, ಓಡು ಗುರು: ವಿರಾಟ್ ಕೊಹ್ಲಿ ಕನ್ನಡ ಪ್ರೀತಿಗೆ ಫ್ಯಾನ್ಸ್ ಫಿದಾ..!
ವಿಪ್ರೋ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೊವಿಲ್ ಮಾತನಾಡಿ, ‘ವಿಪ್ರೋ ಬೆಂಗಳೂರು ಮ್ಯಾರಥಾನ್, ಸ್ಪಿರಿಟ್ ಆಫ್ ವಿಪ್ರೋ ರನ್‌ನಂತಹ ಕ್ರೀಡಾಕೂಟಗಳು ಜನರ ನಡುವೆ ಒಡನಾಟ, ಆಪ್ತತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸುತ್ತದೆ. ಓಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ, ಪ್ರಶಸ್ತಿ ಗೆದ್ದ ವಿಜೇತರಿಗೂ ಅಭಿನಂದನೆ ತಿಳಿಸಲು ಇಚ್ಛಿಸುತ್ತೇನೆ’ ಎಂದರು.
ಅರ್ಜುನ ಪ್ರಶಸ್ತಿ ವಿಜೇತೆ, ಓಟದ ರಾಯಭಾರಿ ಡಾ.ರೀತ್ ಅಬ್ರಾಹಂ ಮಾತನಾಡಿ, ‘ಓಟವು ನಗರ ಭಾಗಗಳಲ್ಲಿ ವಾಸಿಸುವ ಜನರ ಜೀವನದ ಭಾಗವಾಗಿದೆ. ಇಂತಹ ಕಾರ್ಯಕ್ರಮಗಳು ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಮುಂದಿನ ಆವೃತ್ತಿಗಳಲ್ಲಿ ಇನ್ನಷ್ಟು ಜನರು ಪಾಲ್ಗೊಳ್ಳಲಿ ಎಂದು ಆಶಿಸುತ್ತೇನೆ’ ಎಂದರು.
ಶ್ರೀರಾಮ್ ಪ್ರಾಪರ್ಟೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುರಳಿ ಮಲಯಪ್ಪನ್ ಮಾತನಾಡಿ, ‘ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿನ ಜನ ಓಟದಲ್ಲಿ ಪಾಲ್ಗೊಂಡಿದ್ದನ್ನು ನೋಡಿ ಬಹಳ ಸಂತೋಷವಾಯಿತು. ಬೆಂಗಳೂರು ಮ್ಯಾರಥಾನ್ ಒಂದು ವಿಶ್ವ ಶ್ರೇಷ್ಠ ಸ್ಪರ್ಧೆ ಎನ್ನುವುದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಜನ ಪಾಲ್ಗೊಂಡಿರುವುದೇ ಸಾಕ್ಷಿ. ಈ ಕೂಟವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು.
ವಿಜೇತರು
ಪೂರ್ಣ ಮ್ಯಾರಥಾನ್
ಪುರುಷರ ಎಲೈಟ್ ವಿಭಾಗ: 1.ಅನೀಶ್ ಥಾಪ (ಎಸ್‌ಎಸ್‌ಸಿಬಿ; 2:18.06), 2. ಅಕ್ಷಯ್ ಸೈನಿ (ಎಸ್‌ಎಸ್‌ಸಿಬಿ: 2:25:04), 3. ಕುಲ್ದೀಪ್ ಸಿಂಗ್ (ಉತ್ತರ ಪ್ರದೇಶ; 2:26:38)
ಮಹಿಳೆಯರ ಎಲೈಟ್ ವಿಭಾಗ: 1. ಜ್ಯೋತಿ ಗಾವಟೆ (ಮಹಾರಾಷ್ಟ್ರ; 3:08:53), 2. ಅಶ್ವಿನಿ ಜಾಧವ್ (ಮಹಾರಾಷ್ಟ್ರ; 3: 09:00), 3. ಪ್ರಾಚಿ ಗೋಡ್ಬೊಲೆ (ಮಹಾರಾಷ್ಟ್ರ 4:13:17)
ಹಾಫ್ ಮ್ಯಾರಥಾನ್
ಪುರುಷರು: 1. ವೈಭ್ ಪಾಟೀಲ್, 2.ನಂಜುಡಪ್ಪ ಮುನಿಯಲ್ಲಪ್ಪ, 3. ಗುರುಪ್ರಸಾದ್.
ಮಹಿಳೆಯರು: 1. ಬಿಜೋಯ ಬರ್ಮನ್, 2.ದೀಪಾ ನಾಯಕ್, 3. ಕೋಮಲ್ ಸ್ವಾಹ್ನೆ