
ಬೆಂಗಳೂರು(ಏ. 09): ರಾಜಧಾನಿಯಲ್ಲಿ ನಾಗರಿಕರಿಗೆ ‘ಸಂಚಾರ ಶಿಸ್ತು' ಕಲಿಸಲು ವಿದೇಶದ ಮಾದರಿ ‘ಝೀರೋ ಟಾಲರೆನ್ಸ್' ವ್ಯವಸ್ಥೆ ಜಾರಿಗೆ ತಂದ ಪೊಲೀಸ್ ಆಯುಕ್ತರ ನಿರ್ಧಾರವು ಈಗ ನಾಗರಿಕ ಹಾಗೂ ಪೊಲೀಸ್ ಸಮುದಾಯದ ‘ಟಾಲರೆನ್ಸ್' ಪರೀಕ್ಷೆಗೊಡ್ಡಿದೆ.
ಇದಕ್ಕೆ ಕಾರಣ ಪೂರ್ವ ಸಿದ್ಧತೆ ಇಲ್ಲದೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಗಮನ ಹರಿಸದೆ ವ್ಯವಸ್ಥೆಗೆ ಜಾರಿಗೆ ತಂದಿದ್ದು...!
ವಿದೇಶಿ ರಸ್ತೆಯಲ್ಲಿ ಮುಕ್ತವಾಗಿ ವಾಹನಗಳ ಸಂಚಾರ ಓಡಾಟ ಕಂಡ ಆಯುಕ್ತರು, ಈಗ ಬೆಂಗಳೂರಿನಲ್ಲಿ ಯಥಾವತ್ ಆಗಿ ವಿದೇಶಗಳ ಸಂಚಾರ ನಿಯಮಗಳನ್ನು ಅಳವಡಿಸಲು ಮುಂದಾಗಿದ್ದಾರೆ. ಆದರೆ ಗುಂಡಿ ಬಿದ್ದು, ಕಿಷ್ಕಿಂದ ರಸ್ತೆಗಳಲ್ಲಿ ವಾಹನಗಳ ಓಡಿಸುವುದಕ್ಕೆ ಜನರು ಹರಸಾಹಸ ಪಡುವಾಗ ಒಮ್ಮೆಗೆ ಸಂಚಾರ ಶಿಸ್ತು ಪಾಲನೆಗೆ ಮುಂದಾಗಿರುವುದು ಕ್ರಮೇಣ ಜನರಲ್ಲಿ ಅಸಮಾಧಾನ ಸೃಷ್ಟಿಸುತ್ತಿದೆ. ಇತ್ತ ಆಯುಕ್ತರ ಆದೇಶಕ್ಕೆ ಅತ್ಯುತ್ಸಾಹದಿಂದ ಪೊಲೀಸರು ಕಾರ್ಯಾಚರಣೆಗಿಳಿದಿರುವುದು ಮತ್ತಷ್ಟುಸಮಸ್ಯೆ ತಂದಿದ್ದು, ಜನರ ಮತ್ತು ಪೊಲೀಸರ ನಡುವೆ ‘ಕದನ ಅಂಕಣ'ವಾಗಿ ಪ್ರಮುಖ ಜಂಕ್ಷನ್‌ಗಳು ರೂಪಾಂತ ರಗೊಳ್ಳುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಸಂಚಾರ ದಟ್ಟಣೆ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ನಗರದ ಜಂಕ್ಷನ್‌ಗಳಲ್ಲಿ ಪೊಲೀಸರು ಝೀರೋ ಟಾಲರೆನ್ಸ್ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಸದುದ್ದೇಶ ದಿಂದ ಜಾರಿಗೆ ತಂದಿರುವ ಈ ಯೋಜನೆಯ ಅನುಷ್ಠಾನಗೊಳಿಸಬೇಕಾದ ಸಿಬ್ಬಂದಿಗೆ ಸೂಕ್ತ ತರಬೇತಿ ಹಾಗೂ ಸಿದ್ಧತೆ ಇಲ್ಲದಿರುವ ಕಾರಣ ಸಾರ್ವಜನಿಕರು ಹಾಗೂ ಸಿಬ್ಬಂದಿ ನಡುವೆ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಿದೆ.
ಇತ್ತ ಪ್ರಮುಖ ಜಂಕ್ಷನ್'ಗಳಲ್ಲಿ ಈ ವ್ಯವಸ್ಥೆಗೆ ಜಾರಿಗೆ ಬಂದ ಬಳಿಕ ದಟ್ಟಣೆ ಹೆಚ್ಚಾಗಿದೆ. ಸಾರ್ವಜನಿಕರು ತಾಸುಗಟ್ಟಲೆ ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಿ ನಲುಗುವಂತಾಗಿದೆ. ಅಷ್ಟೇ ಅಲ್ಲ. ಸಂಚಾರ ನಿಯಮ ಉಲ್ಲಂಘನೆ ಹೌದು, ಇಲ್ಲ ಎನ್ನುವ ವಾದ, ವಿವಾದಕ್ಕೂ ಝೀರೋ ಟಾಲರೆನ್ಸ್ ಕಾರಣವಾಗಿದ್ದು, ಇದು ಪೋಲೀಸರು ಮತ್ತು ವಾಹನ ಸವಾರರ ನಡುವೆ ಸಂಘರ್ಷವನ್ನೂ ಉಂಟು ಮಾಡುತ್ತಿದೆ. ಹೀಗಾಗಿ ಈ ವಿದೇಶಿ ಸಂಚಾರ ನಿಯಮ ಈಗ ಪೊಲೀಸರಿಗೆ ಹೆಚ್ಚುವರಿ ಹೊರೆಯನ್ನು, ವಾಹನ ಸವಾರರಿಗೆ ವಿಪರೀತ ತೊಂದರೆಯನ್ನು ಉಂಟು ಮಾಡುತ್ತಿದೆ.
ಏನಿದರ ಹಿನ್ನೆಲೆ?: 2016ರ ನವೆಂಬರ್‌ನಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಜರ್ಮನ್ ಪ್ರವಾಸ ಕೈಗೊಂಡಿದ್ದ ಉನ್ನತ ಮಟ್ಟದಲ್ಲಿ ತಂಡದಲ್ಲಿದ್ದ ಎಡಿಜಿಪಿ ಪ್ರವೀಣ್ ಸೂದ್ ಅವರು, ವಿದೇಶದ ಪ್ರವಾಸ ವೇಳೆ ಅಲ್ಲಿನ ಸಂಚಾರ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಿದ್ದರು. ಜನವರಿ 1 ರಂದು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ವಿದೇಶ ಮಾದರಿ ಸಂಚಾರ ವ್ಯವಸ್ಥೆಗೆ ಜಾರಿಗೆ ಪ್ರವೀಣ್ ಸೂದ್ ಮುಂದಾಗಿದ್ದಾರೆ. ಅದರ ಮೊದಲ ಹಂತವಾಗಿ ಝೀರೋ ಟಾಲರೆನ್ಸ್ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದ್ದು, ನಗರ ವ್ಯಾಪ್ತಿ ಪೂರ್ಣ ವಿದೇಶಿ ಮಯವಾಗಲಿದೆ.
ಝೀರೋ ಟಾಲರೆನ್ಸ್'ಗೆ ಗುರುತಿಸಲಾಗಿರುವ ಶಿವಾನಂದ ಸರ್ಕಲ್, ಕಾವೇರಿ ಎಂಪೋರಿಯಂ, ಊರ್ವಶಿ ಜಂಕ್ಷನ್ ಹಾಗೂ ಬಸವೇಶ್ವರ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಸಂಚಾರವಿರುತ್ತದೆ. ಹೀಗಿರುವಾಗ ಜಂಕ್ಷನ್‌ಗಳಲ್ಲಿ ಹಸಿರು ದೀಪ ಬಿದ್ದ ತಕ್ಷಣವೇ ಝಿಬ್ರಾ ಕ್ರಾಸ್ ಸ್ವಲ್ಪ ದಾಟಿದರೂ ದಂಡ ವಿಧಿಸಲಾಗುತ್ತದೆ. ಅಲ್ಲದೆ ಸಂಚಾರ ನಿಯಮ ಮೀರಿದರು ಎಂದು ರಸ್ತೆಯಲ್ಲೇ ವಾಹನಗಳನ್ನು ಪೊಲೀಸರು ಅಡ್ಡ ಹಾಕುವುದರಿಂದ ಆ ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ಬಂದಿವೆ.
ಕ್ರಿಸ್'ಕ್ರಾಸ್ ಕಿರಿಕಿರಿ: ವೃತ್ತದ ಮಧ್ಯ ಭಾಗದಿಂದ ಝಿಬ್ರಾ ಕ್ರಾಸ್ ಗುರುತಿನವರೆಗೆ ಬಾಕ್ಸ್ ಮಾದರಿಯಲ್ಲಿ ಹಳದಿ ಬಣ್ಣದ ಗೆರೆಗಳನ್ನು ಎಳೆಯಲಾಗಿದೆ. ಇದಕ್ಕೆ ‘ಕ್ರಿಸ್ ಕ್ರಾಸ್' ಎಂದು ಹೆಸಡಿಡಲಾಗಿದೆ. ವೃತ್ತಕ್ಕೆ ಬರುವ ವಾಹನಗಳು ಹಸಿರು ಸಿಗ್ನಲ್ ಇದ್ದಾಗ ಮಾತ್ರ ಈ ಗುರುತು ದಾಟಬಹುದು. ಹಸಿರು ದೀಪ ಬಂದ್ ಆಗುವ ಕೊನೆಯ ಕ್ಷಣ ಅಥವಾ ಕೆಂಪು ದೀಪ ಹೊತ್ತಿಕೊಳ್ಳುವ ಕೆಲ ಕ್ಷಣಕ್ಕೂ ಮುನ್ನ ಈ ಗುರುತನ್ನು ಸಂಪೂರ್ಣವಾಗಿ ದಾಟುವ ಸಾಧ್ಯತೆ ಇದ್ದರೆ ಮಾತ್ರ ಮುಂದೆ ಹೋಗಬೇಕು. ಆಕಸ್ಮಾತ್ ಕೆಂಪು ದೀಪ ಹೊತ್ತಿಕೊಂಡ ವೇಳೆ ವಾಹನಗಳು, ಹಳದಿ ಬಾಕ್ಸ್'ನಲ್ಲೇ ನಿಂತಿದ್ದರೆ ಅಂಥ ಸವಾರರಿಗೆ ಸಂಚಾರ ಪೊಲೀಸರು ದಂಡ ಹಾಕುತ್ತಿದ್ದಾರೆ.
ಪಾದಚಾರಿ ಮಾರ್ಗ ಗುರುತಿಗೆ ಝಿಗ್'ಝಾಗ್: ಎಂ.ಜಿ. ರಸ್ತೆ, ಕಾರ್ಲಟನ್ ಭವನ, ಹೈಗ್ರೌಂಡ್ಸ್ ರಸ್ತೆ, ಶಿವಾನಂದ ಸರ್ಕಲ್, ಎಫ್‌ಎಂ ಸರ್ಕಲ್ ಹಾಗೂ ಚಾಲುಕ್ಯ ವೃತ್ತದಲ್ಲಿ ಕೆಲ ವಾಹನಗಳ ಸವಾರರಿಗೆ ಪಾದಚಾರಿ ಮಾರ್ಗವಿದೆ ಎಂಬುದು ಗೊತ್ತಿರಲಿಲ್ಲ. ಆ ರಸ್ತೆಯಲ್ಲಿ ಪಾದಚಾರಿಗಳು ವಾಹನಗಳ ಸಂಚಾರ ನಡುವೆಯೇ ಝಿಬ್ರಾ ಕ್ರಾಸ್ ದಾಟುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಈ ಕಾರಣಕ್ಕೆ ಈಗ ಪ್ರಮುಖ ಜಂಕ್ಷನ್‌ಗಳಲ್ಲಿ ಝಿಗ್-ಝಾಗ್ ಗುರುತು ಪರಿಚಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾದಚಾರಿ ಮಾರ್ಗಗಳಿರುವ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕ-ಪಕ್ಕದಲ್ಲಿ 50 ಮೀ ವರೆಗೆ ಝಿಗ್-ಝಾಗ್ ಗುರುತು ಹಾಕಲಾಗಿದೆ. ಹಾವಿನಂತೆ ಬಿಳಿ ಬಣ್ಣದಿಂದ ಎಳೆದಿರುವ ಈ ಗುರುತು ಇದ್ದರೆ ಅಲ್ಲಿ ಪಾದಚಾರಿ ಮಾರ್ಗವಿದೆ ಎಂಬುದು ವೃತ್ತಕ್ಕೆ ಬರುವ ಮುಂಚೆಯೇ ವಾಹನ ಸವಾರರಿಗೆ ಗೊತ್ತಾಗಲಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂಥ ಗುರುತುಗಳನ್ನು ಹಾಕಿದ್ದೇವೆ. ಈ ಗುರುತುಗಳನ್ನು ಪಾಲಿಸದ ಚಾಲಕರಿಗೆ ತಲಾ 100 ರು ದಂಡವನ್ನು ವಿಧಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
2 ಲಕ್ಷ ಕೇಸ್'ಗಳು, 50 ಲಕ್ಷ ರು. ದಂಡ
ನಗರದಲ್ಲಿ ಜನವರಿ 1 ರಿಂದ ಜಿರೋ ಟಾಲರೆನ್ಸ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಈವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿ 50 ಲಕ್ಷ ರು ದಂಡ ವಸೂಲಿಯಾಗಿದೆ. ಈ ವ್ಯವಸ್ಥೆಯು ನಗರದ ವ್ಯಾಪ್ತಿ ಎರಡು ಹಂತದಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಪಶ್ಚಿಮ ವಿಭಾಗದಲ್ಲಿ 1.21 ಲಕ್ಷ ಪ್ರಕರಣ ದಾಖಲಾಗಿದ್ದು, ಉತ್ತರ ವಿಭಾಗದಲ್ಲಿ ಅತಿ ಕಡಿಮೆ 12,500 ಕೇಸ್'ಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಳಿ ತೆಗೆದು ದುರ್ವರ್ತನೆ:
ಸಂಚಾರ ನಿಮಯ ಉಲ್ಲಂಘಿಸಿದರೆ ದಂಡ ವಿಧಿಸಬೇಕಾದ ಸಂಚಾರ ಠಾಣೆ ಪೊಲೀಸರು, ಕೆಲವು ಕಡೆ ವಾಹನಗಳ ಗಾಳಿ ತೆಗೆದು ದುಂಡಾವರ್ತನೆ ತೋರುತ್ತಿದ್ದಾರೆ. ಕಾನೂನು ಪ್ರಕಾರ ಹೆಲ್ಮಟ್ ಧರಿಸದ ಹಾಗೂ ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನಗಳ ನಿಲುಗಡೆ ಮಾಡಿದ ತಪ್ಪಿಗೆ ದಂಡ 100 ರು ದಂಡ ವಿಧಿಸಬೇಕಿದೆ. ಆದರೆ ಕೆಲವು ಪೊಲೀಸರು, ವಾಹನಗಳ ಗಾಳಿ ಬಿಟ್ಟು ಅನುಚಿತ ನಡೆದುಕೊಳ್ಳುತ್ತಿದ್ದಾರೆ ಎಂದು ದೂರು ಬಂದಿವೆ.
ವಿಶೇಷ ತಂಡ ರಚನೆ:
‘ಝೀರೋ ಟಾಲರೆನ್ಸ್' ಗುರುತಿಸಲಾಗಿರುವ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿ ಸಿದವರ ಮೇಲೆ ದಂಡ ಪ್ರಯೋಗಕ್ಕೆ ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ನಿಯೋ ಜಿಸಲಾಗಿದೆ. ಈ ತಂಡದಲ್ಲಿ ಎಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿದಂತೆ ಒಟ್ಟು ಐದು ಮಂದಿ ಇದ್ದಾರೆ. ನಿಗದಿತ ಜಂಕ್ಷನ್‌ಗಳಲ್ಲಿ ಸಂಚಾರ ಶಿಸ್ತು ಮೀರಿದರೆ ಅಂತಹವರಿಗೆ ದಂಡ ವಿಧಿಸಲಿದ್ದು, ಪ್ರತಿ ದಿನ 12 ಗಂಟೆಗಳು ನಿರಂತರವಾಗಿ ಈ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಜನರಿಗೇನು ತೊಂದರೆ?
* ತಾಸುಗಟ್ಟಲೇ ಸಂಚಾರ ದಟ್ಟಣೆ
* ಪೊಲೀಸ್ ಸಿಬ್ಬಂದಿ ಒರಟು ನಡವಳಿಕೆ ಸಹಿಸಬೇಕು
* ಕಾನೂನು ಬಾಹಿರವಾಗಿ ಟೈರಿನ ಗಾಳಿಯನ್ನು ಬಿಟ್ಟರೂ ಸಹಿಸಬೇಕು
ಒಂದೇ ಮಾರ್ಗದಲ್ಲಿ ತುಸುವೇ ಅಂತರದಲ್ಲಿ ಹಲವು ಪೊಲೀಸ್ ತಂಡಗಳಿಂದ ತಪಾಸಣೆಯೆಂಬ ಕಿರುಕುಳ
ಪೊಲೀಸರಿಗೇನು ಸಮಸ್ಯೆ?
* ವಿಶ್ರಾಂತಿ ಇಲ್ಲದೆ 12 ರಿಂದ 15 ತಾಸುಗಳ ನಿರಂತರ ದುಡಿಮೆ
* ಜಂಕ್ಷನ್'ಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿರ್ವಹಣೆ ಕಷ್ಟ
* ಸಂಚಾರ ಉಲ್ಲಂಘಿಸಿದರೂ ದಂಡ ಪಾವತಿಸದೆ ಕಿರಿಕ್ ಎದುರಿಸಬೇಕು
* ನಿರಂತರ ಕಲುಷಿತ ಗಾಳಿ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ
ಝೀರೋ ಟಾಲರೆನ್ಸ್ ಜಂಕ್ಷನ್'ಗಳು
* ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್
* ಹೆಬ್ಬಾಳ ವೃತ್ತ
* ಯಲಹಂಕ ಪೊಲೀಸ್ ಠಾಣೆ ಜಂಕ್ಷನ್
* ನಾರಾಯಣಪುರ ಕ್ರಾಸ್ ಜಂಕ್ಷನ್
* ವಿಜಿಪುರ ಕ್ರಾಸ್ ಜಂಕ್ಷನ್
* ಬಸವೇಶ್ವರ ವೃತ್ತ
* ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್
* ಶಿವಾನಂದ ವೃತ್ತ
* ಎನ್.ಆರ್.ಜಂಕ್ಷನ್
* ಕಾವೇರಿ ಎಂಪೋರಿಯಂ
* ಊರ್ವಶಿ ಚಿತ್ರಮಂದಿರ
* ಚಾಮರಾಜಪೇಟೆ ಶಿವಶಂಕರ
* ಲಾಲ್‌ಬಾಗ್ ವೆಸ್ಟ್ ಗೇಟ್
* ಸೌತ್ ಎಂಡ್ ಸರ್ಕಲ್
* ಬನಶಂಕರಿಯ ಚನ್ನಮ್ಮ ಸರ್ಕಲ್
* ಎಲೈಟ್ ಜಂಕ್ಷನ್
* ಖೋಡೆಸ್ ಸರ್ಕಲ್
* ವಿನರ್ವ ಸರ್ಕಲ್
* ಎಂ.ಸಿ.ಜಂಕ್ಷನ್
* ಅತ್ತಿಗುಪ್ಪೆ
* ಸುಮನಹಳ್ಳಿ ಜಂಕ್ಷನ್
* ಹೊಯ್ಸಳ ಜಂಕ್ಷನ್
* ಕೆ.ಸಿ.ಜನರಲ್ ಆಸ್ಪತ್ರೆ
* ವಾಟಾಳ್ ನಾಗರಾಜ್ ವೃತ್ತ
* ಯಶವಂತಪುರ ರಿಂಗ್ ರೋಡ್
* ಎಫ್‌ಎಂ ಜಂಕ್ಷನ್
* ಬಿಇಎಲ್ ಜಂಕ್ಷನ್
ರೈಲ್ವೆ ನಿಲ್ದಾಣದಿಂದ ಬರುವ ಪ್ರಯಾಣಿಕರು ಕ್ಯಾಬ್, ಒಲಾಗಳನ್ನು ಬುಕ್ ಮಾಡಿರುತ್ತಾರೆ. ಪ್ರಯಾಣಿ ಕರಿಗಾಗಿ ರಸ್ತೆ ಬದಿ ವಾಹನ ನಿಲ್ಲಿಸಿ ಕಾಯಬೇಕಾಗುತ್ತದೆ. ಆಗ ಪೊಲೀಸರು ಚಾಲಕರಿಗೆ ಎಚ್ಚರಿಕೆ ನೀಡುವ ಬದಲಿಗೆ ವಾಹನಗಳ ಗಾಳಿ ತೆಗೆಯುತ್ತಾರೆ. ಇದರಿಂದ ನಷ್ಟವೂ ಆಗುತ್ತದೆ. ಸಂಚಾರ ಕಷ್ಟವೂ ಆಗುತ್ತಿದೆ.
- ಮಧುಗೌಡ, ಎನ್. ರಾಜು, ಊಬರ್ ಚಾಲಕರು
ಝೀರೋ ಟಾಲರೆನ್ಸ್‌ಕಟ್ಟು ನಿಟ್ಟಾಗಿ ಜಾರಿಗೊಳಿಸಲಾ ಗುತ್ತಿದ್ದು, ಪಶ್ಚಿಮ ವಿಭಾಗದಲ್ಲಿ ಮೂರು ತಿಂಗಳ ಅವಧಿಯಲ್ಲಿ 1 ಲಕ್ಷ ಕೇಸ್‌ಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕರಿಂದ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವ್ಯವಸ್ಥೆಯಿಂದ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ.
- ಡಾ. ಶೋಭಾ ರಾಣಿ, ಡಿಸಿಪಿ, ಪಶ್ಚಿಮ ವಿಭಾಗ (ಸಂಚಾರ)
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.