ಬೆಂಗಳೂರು (ಏ.09): ಬಾರ್‌ ಮತ್ತು ಕ್ಲಬ್‌ಗಳಲ್ಲಿ ಹ್ಯಾಪಿ ಅವರ್‌ (ರಿಯಾಯ್ತಿ ದರದಲ್ಲಿ ಸೌಲಭ್ಯ) ಇರುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವೋಲ್ವೋ ಪ್ರಯಾಣಿಕರಿಗೆ ಹ್ಯಾಪಿ ಅವರ್‌ (ಟಿಕೆಟ್‌ದರ ಕಡಿತ) ಪರಿಚಯಿಸಲು ಸಜ್ಜಾಗಿದೆ. ಒಂದು ವ್ಯತ್ಯಾಸವೆಂದರೆ, ಬಾರ್‌ ಹಾಗೂ ಕ್ಲಬ್‌ಗಳಲ್ಲಿ ಹ್ಯಾಪಿ ಅವರ್‌ ರಾತ್ರಿ ಇದ್ದರೆ, ಬಿಎಂಟಿಸಿಯ ಹ್ಯಾಪಿ ಅವರ್‌ ಮಧ್ಯಾಹ್ನದ ವೇಳೆಯಲ್ಲಿರುತ್ತದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ ಸೇರಿದಂತೆ ಐಟಿ ಕಂಪನಿಗಳಿರುವ ಪ್ರದೇಶದ ಮಾರ್ಗಗಳಲ್ಲಿ ಹೆಚ್ಚು ವೋಲ್ವೋ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಟಿಕೆಟ್‌ ದರ ದುಬಾರಿಯಾದರೂ ಕಾರ್ಯ ನಿಮಿತ್ತ ಬೇರೆಡೆಗೆ ಹೋಗುವವರು ಹಾಗೂ ಐಟಿ ಉದ್ಯೋಗಿಗಳು ವಿಮಾನ ನಿಲ್ದಾಣ ಹಾಗೂ ಐಟಿ ಕಂಪನಿ ಪ್ರದೇಶ ಸಂಪರ್ಕಿಸಲು ಬೆಳಗ್ಗೆ ಮತ್ತು ಸಂಜೆ ವೋಲ್ವೋ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ. ಈ ನಡುವೆ ಮಧ್ಯಾಹ್ನದ ವೇಳೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುತ್ತದೆ. ಹೀಗಾಗಿ, ಈ ಅವಧಿಯಲ್ಲಿ ಪ್ರಯಾಣಿಕರನ್ನು ವೋಲ್ವೋದತ್ತ ಆಕರ್ಷಿಸಲು ಈ ಹ್ಯಾಪಿ ಅವರ್‌ ದರ ವಿಧಿಸಲು ಚಿಂತನೆ ನಡೆಸಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ನಿಯಮದ ಪ್ರಕಾರ ಪ್ರಯಾಣಿಕರು ಇದ್ದರೂ ಅಥವಾ ಇಲ್ಲದಿದ್ದರೂ ನಿಗದಿತ ವೇಳೆಗೆ ಆ ಮಾರ್ಗಗಳಲ್ಲಿ ಬಸ್‌ ಸಂಚರಿಸಬೇಕು. ಹಾಗಾಗಿ ಮಧ್ಯಾಹ್ನದ ವೇಳೆ ಪ್ರಯಾಣಿಕರ ಸಂಖ್ಯೆ ಕಡಿವೆÜುಯಿದ್ದರೂ ಬಸ್‌ಗಳು ಎಂದಿನಂತೆ ಸಂಚಾರ ಮುಂದುವರಿಸಿವೆ. ಇದರಿಂದ ಬಿಎಂಟಿಸಿಗೆ ಕೊಂಚ ನಷ್ಟವಾಗುತ್ತಿದೆ. ಇದನ್ನು ಸರಿದೂಗಿಸುವ ಹಾಗೂ ಆದಾಯ ಗಳಿಸುವ ಉದ್ದೇಶದಿಂದ ಬಿಎಂಟಿಸಿ ಮಧ್ಯಾಹ್ನದ ವೇಳೆ ವೋಲ್ವೊ ಬಸ್‌ಗಳ ಟಿಕೆಟ್‌ ದರ ಕಡಿತಗೊಳಿಸಿ ಹೆಚ್ಚು ಪ್ರಯಾಣಿಕರನ್ನು ಸೆಳೆಯಲು ಚಿಂತಿಸಿದೆ ಎಂದು ತಿಳಿದು ಬಂದಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ ಟಿಕೆಟ್‌ ದರದಲ್ಲಿ ಕೆಲವೊಂದು ಹೊಂದಾಣಿಕೆ ಮಾಡಲು ಚಿಂತಿಸಲಾಗಿದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಪ್ರಕಟಿಸುತ್ತೇವೆ.
ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

ವೋಲ್ವೊ ಬಸ್‌ ಸಂಖ್ಯೆ 750ಕ್ಕೆ ಏರಿಕೆ: ಬೆಂಗಳೂರು ನಗರದಲ್ಲಿ ಈ ಹಿಂದೆ 675 ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ವಾರದ ಹಿಂದೆ 75 ಹೊಸ ವೋಲ್ವೋ ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದ ವೋಲ್ವೋ ಬಸ್‌ಗಳ 750ಕ್ಕೆ ಏರಿಕೆಯಾಗಿದೆ. ಎಂದಿನಂತೆ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣದಿಂದ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಐಟಿ ಸಂಸ್ಥೆಗಳು ಹೆಚ್ಚಿರುವ ಮಾರ್ಗದಲ್ಲಿ ಕಾರ್ಯ ನಿರತವಾಗಿವೆ. ಈ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಎಂಟಿಸಿ ಮಧ್ಯಾಹ್ನದ ವೇಳೆ ಟಿಕೆಟ್‌ ದರ ಕಡಿತಗೊಳಿಸಿ ಹೆಚ್ಚು ಪ್ರಯಾಣಿಕರನ್ನು ಸೆಳೆಯುವ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದೆ. ಇದು ಪ್ರಯೋಗ ಯಶಸ್ವಿಯಾದಲ್ಲಿ ಸಂಸ್ಥೆಯ ಆದಾಯ ಗಳಿಕೆಯಲ್ಲಿ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯದಲ್ಲೇ ಈ ನೂತನ ಪ್ರಯೋಗ ಅನುಷ್ಠಾನಕ್ಕೆ ಬಿಎಂಟಿಸಿ ಮುಂದಾಗುವ ಸಂಭವವಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ನಿತ್ಯ 18 ಸಾವಿರ ಪ್ರಯಾಣಿಕರು: ನಗರದ ಬಿಎಂಟಿಸಿಯ ಎಲ್ಲಾ ಮಾದರಿಯ ಬಸ್‌ಗಳಲ್ಲಿ ನಗರದೆಲ್ಲೆಡೆ ನಿತ್ಯ 50ರಿಂದ 52 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ.

ಅದರಲ್ಲೂ ಕೆಂಪೇಗೌಡ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಪ್ರತಿ ನಿತ್ಯ 16ರಿಂದ 18 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಪೈಕಿ ಹೆಚ್ಚಿನವರು ವಿಮಾನ ಪ್ರಯಾಣ ಬೆಳೆಸಲು ಹೋಗುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಗದಿತ ವೇಳೆಗೆ ವಿಮಾನ ನಿಲ್ದಾಣ ತಲುಪ ಉದ್ದೇಶದಿಂದ ಅತ್ಯಾಧುನಿಕ ವ್ಯವಸ್ಥೆಯ ವೋಲ್ವೊ ಬಸ್‌ ಬಳಕೆಗೆ ಮುಂದಾಗುತ್ತಾರೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. (ಕನ್ನಡಪ್ರಭ)

click me!