
ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರ ಅಸಮಾಧಾನ ಮುಂದುವರಿದಿದ್ದು, ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆಗೆ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ, ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ವಸತಿಗಾಗಿ ಹಣ’ ಆರೋಪ ಕುರಿತು ಪ್ರತಿಕ್ರಿಯಿಸಿ, ವಸತಿ ಸಚಿವರ ವಿರುದ್ಧ ಮನೆ ಹಂಚಿಕೆ ವಿಚಾರದಲ್ಲಿ ಹಣ ಕೇಳಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ. ಅವರು ಭ್ರಷ್ಟಾಚಾರ ಮಾಡಿಲ್ಲ ಎಂದು ಸಾಬೀತಾದರೆ ಮತ್ತೆ ತಮ್ಮ ಮಂತ್ರಿ ಸ್ಥಾನಕ್ಕೆ ಬರಲಿ ಎಂದು ಅವರು ಆಗ್ರಹಿಸಿದರು.
ರಾಜೀವ್ ಗಾಂಧಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪದ ಸತ್ಯ ಹೊರ ಬರಬೇಕಾದರೆ ಸಚಿವರು ರಾಜೀನಾಮೆ ನೀಡುವುದು ಸೂಕ್ತ. ಪಕ್ಷದ ಶಾಸಕರೇ ಸಚಿವರ ಮೇಲೆ ಈ ರೀತಿ ಆರೋಪ ಮಾಡುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಆರೋಪ ಸತ್ಯವೋ, ಸುಳ್ಳೋ ಎಂಬುದು ಸಾಬೀತಾಗಬೇಕು. ಸತ್ಯಾಂಶ ಹೊರ ಬರಬೇಕು. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸುವುದು ಸೂಕ್ತ ಎಂದರು.
ಸಚಿವರ ಮೇಲೆ ಇಂತಹ ಆರೋಪಗಳು ಹೊಸದಲ್ಲ. ಈ ಹಿಂದೆ ನಾಗೇಂದ್ರ ಅವರ ಮೇಲೆ ಇಂತಹ ಆರೋಪ ಬಂದಾಗ ಮುಖ್ಯಮಂತ್ರಿಯವರ ಸಲಹೆಯಂತೆ ಅವರು ರಾಜೀನಾಮೆ ಕೊಟ್ಟರು. ಇಂತಹ ಹಲವು ಉದಾಹರಣೆಗಳಿವೆ. ಅದೇ ರೀತಿ ಈಗ ವಸತಿ ಸಚಿವರು ರಾಜೀನಾಮೆ ಕೊಡುವುದು ಸೂಕ್ತ ಎಂದರು.
ಬಿ.ಆರ್.ಪಾಟೀಲ್ ಅವರಿಗೆ ಮಾತುಕತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಲಾವ್
ಬೆಂಗಳೂರು : ಸ್ವಪಕ್ಷದ ಸರ್ಕಾರದ ವಿರುದ್ಧವೇ ಲಂಚದ ಆರೋಪ ಮಾಡಿ ಸಂಚಲನ ಮೂಡಿಸಿರುವ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಮಾತುಕತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಲಾವ್ ನೀಡಿದ್ದಾರೆ.
ಈ ಸಂಬಂಧ ಭಾನುವಾರ ಪಾಟೀಲ್ ಅವರಿಗೆ ಖುದ್ದು ಕರೆ ಮಾಡಿದ ಸಿದ್ದರಾಮಯ್ಯ ಅವರು, ಬುಧವಾರ (ಜೂ.25)ರಂದು ತಮ್ಮನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾರೆ.
'ಹೇಗಿದ್ದಿಯಪ್ಪ ಪಾಟೀಲ್...' ಎಂದು ವಿಚಾರಿಸಿ ಬಳಿಕ, ಏನೇ ಸಮಸ್ಯೆ ಇದ್ದರೂ ಮಾತನಾಡೋಣ ಬಾರಯ್ಯ... ಬಂದು ನನ್ನನ್ನು ಭೇಟಿಯಾಗು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಆಗ ಶಾಸಕರು, ಯಾವಾಗ ಬರಬೇಕು, ಎಲ್ಲಿಗೆ ಬರಬೇಕೆಂದು ಕೇಳಿದಾಗ ಸೋಮವಾರ ರಾಯಚೂರು ತಾಲೂಕಿನ ಯರಗೇರಾದಲ್ಲಿ ನಡೆಯಲಿರುವ ಬುಡಕಟ್ಟು ಉತ್ಸವ ಮತ್ತು 996 ಕೋಟಿ ರು. ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಅಲ್ಲಿಗೆ ಬಂದು ಭೇಟಿಯಾಗುವಂತೆ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.