
ಬೆಂಗಳೂರು [ಆ. 01]: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಎಸ್‌ಐಟಿ ಪೊಲೀಸರು ಬುಧವಾರ ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಿಐಡಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಮಾಜಿ ಸಚಿವರನ್ನು ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಹಾಗೂ ಡಿಸಿಪಿ ಎಸ್.ಗಿರೀಶ್ ಪ್ರಶ್ನಿಸಿದರು. ಕೊನೆಗೆ ರಾತ್ರಿ 8.30ರ ವೇಳೆ ವಿಚಾರಣೆ ಅಂತ್ಯವಾಯಿತು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜಮೀರ್, ನನಗೆ ಐಎಂಎ ಮಾಲಿಕ ಮನ್ಸೂರ್ ಪರಿಚಯವಿರಲಿಲ್ಲ. ಎಲ್ಲೋ ಇಫ್ತಾರ್ ಕೂಟಗಳಲ್ಲಿ ಆತ ಮುಖಾಮುಖಿಯಾಗುತ್ತಿದ್ದ. ಆದರೆ ಯಾವತ್ತಿಗೂ ನಾನು ಆತನೊಂದಿಗೆ ಆತ್ಮೀಯ ಒಡನಾಟ ಹೊಂದಿರಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಮುಜಾಹಿದ್ (ಬಿಬಿಎಂಪಿಯ ನಾಮನಿದೇರ್ಶಿತ ಸದಸ್ಯ) ಮೂಲಕ ಮನ್ಸೂರ್ ಪರಿಚಯವಾಗಿತ್ತು. ನಂತರ ಮುಜಾಹಿದ್ ಮುಖಾಂತರವೇ ರಿಚ್ಮಂಡ್ ಟೌನ್ ಸಮೀಪದ ಕಟ್ಟಡವನ್ನು ಮನ್ಸೂರ್‌ಗೆ .9 ಕೋಟಿಗೆ ಮಾರಾಟ ಮಾಡಿದ್ದೆ. ಈ ಭೂ ಖರೀದಿ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಸಹ ಪ್ರಸ್ತಾಪಿಸಿದ್ದೇನೆ ಎಂದು ಪ್ರತಿಪಾದಿಸಿದರು. ನಾನು ತನಿಖೆಗೆ ಮುಕ್ತವಾಗಿ ಸಹಕರಿಸಿದ್ದೇನೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಭೂಮಿ ಮಾರಾಟದ ಸಂಬಂಧ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಮನ್ಸೂರ್‌ನನ್ನು ನಾನು ಯಾವತ್ತೂ ಭೇಟಿಯಾಗಿಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದರು. ಐಎಂಎ ಮಾಲಿಕ ಮಹಮ್ಮದ್ ಮನ್ಸೂರ್ ಖಾನ್‌ಗೆ ತಮ್ಮ ಆಸ್ತಿಯನ್ನು ಜಮೀರ್ ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ಮಾರುಕಟ್ಟೆಮೌಲ್ಯಕ್ಕಿಂತ ಹೆಚ್ಚಿನ ಹಣ ಕೈಬದಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಜರಾಗುವಂತೆ ಜಮೀರ್ ಅವರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು.
ವಿಚಾರಣೆಗೆ ಬೇಗ್ ಗೈರು
ಮಾಜಿ ಸಚಿವ ರೋಶನ್ ಬೇಗ್ ಅವರು ಬುಧವಾರ ವಿಚಾರಣೆಗೆ ಗೈರುಹಾಜರಾಗಿದ್ದರು. ಜಮೀರ್ ಮತ್ತು ರೋಶನ್ ಬೇಗ್ ಅವರಿಬ್ಬರಿಗೂ ಎಸ್‌ಐಟಿ ಅಧಿಕಾರಿಗಳು ಒಂದೇ ದಿನ ವಿಚಾರಣೆಗೆ ದಿನ ನಿಗದಿಪಡಿಸಿದ್ದರು. ಆದರೆ, ಕಾರಣಾಂತರಗಳಿಂದ ವಿಚಾರಣೆಗೆ ಆಗಮಿಸದ ಬೇಗ್ ಅವರು ಸಮಯಾವಾಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.