ಕಾಂಗ್ರೆಸ್ ಅವಧಿಯಲ್ಲಿ ದಾಖಲಾದ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್‌ ವಾಪಸ್‌?

By Web DeskFirst Published Aug 1, 2019, 8:04 AM IST
Highlights

ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ರದ್ದು  ಮಾಡಲು ಯಡಿಯೂರಪ್ಪ ಅವರಿಂದ ಸಿದ್ಧತೆ ಆರಂಭವಾಗಿದೆ. 

ಬೆಂಗಳೂರು [ಆ.1]:  ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ಸಿದ್ಧತೆ ಆರಂಭವಾಗಿದೆ.

"

ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹಲವು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ರೂಪಾಲಿ ನಾಯ್ಕ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಈ ಮನವಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಕಚೇರಿ ಕಾರ್ಯಪ್ರವೃತ್ತವಾಗಿದೆ. ಇವುಗಳ ಜೊತೆಗೆ ಇನ್ನಷ್ಟುಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಸಲ್ಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೊಡಗು ಜಿಲ್ಲೆಯಾದ್ಯಂತ ಟಿಪ್ಪು ಜಯಂತಿ ಆಚರಣೆ ಸಂದರ್ಭ ಮತ್ತು ಇತರ ಸಂದರ್ಭಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಡೆದ ಪ್ರತಿಭಟನೆ ವೇಳೆ ಯುವಕರೂ ಸೇರಿದಂತೆ ನೂರಾರು ಜನರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅಮಾಯಕರನ್ನೇ ಗುರಿಯಾಗಿಸಿಕೊಂಡು ಈ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಈ ಎಲ್ಲ ಪ್ರಕರಣಗಳ ಸಂಪೂರ್ಣ ಮಾಹಿತಿ ತರಿಸಿಕೊಂಡು ಅವುಗಳನ್ನು ಹಿಂಪಡೆಯಲು ಅನುಕೂಲವಾಗುವಂತೆ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಬೋಪಯ್ಯ ಅವರು ಬರೆದಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಅದೇ ರೀತಿ, 2017ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನಲ್ಲಿ ಪರೇಶ್‌ ಮೇಸ್ತಾ ಎಂಬ ಯುವಕನ ಸಾವಿನ ಹಿನ್ನೆಲೆಯಲ್ಲಿ ಪ್ರತಿಭಟಿಸಿದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ವಿರುದ್ಧ ಹೇರಿರುವ 150ಕ್ಕೂ ಹೆಚ್ಚು ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಕಾರವಾರದ ಶಾಸಕಿ ರೂಪಾಲಿ ನಾಯ್ಕ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ವರದಿ ತರಿಸಿಕೊಂಡ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಮೊಕದ್ದಮೆಗಳನ್ನು ವಾಪಸ್‌ ಪಡೆಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

click me!