
ಗೋರಖ್'ಪುರ್, ಉ.ಪ್ರ.(ಮಾ. 25): ಆಡಳಿತ ನಡೆಸುವುದು ಹೇಗೆಂದು ಉತ್ತರಪ್ರದೇಶದಲ್ಲಿ ತೋರಿಸುತ್ತೇವೆ ಎಂದು ಆ ರಾಜ್ಯದ ನೂತನ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ಕೊಟ್ಟಿರುವ ಯೋಗಿ, ಮಹಾರಾಣ ಪ್ರತಾಪ್ ಇಂಟರ್'ಕಾಲೇಜು ಮೈದಾನದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪ್ರಧಾನಿ ಮೋದಿಯವರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಮಾರ್ಗದಲ್ಲಿ ಮುಂದುವರಿಯುವ ತಾನು ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. "ರಾಜ್ಯದಲ್ಲಿ ಧರ್ಮ, ಜಾತಿ ಅಥವಾ ಲಿಂಗದ ಆಧಾರದಲ್ಲಿ ಯಾವುದೇ ಭೇದಭಾವವಿಲ್ಲದೆ, ಯಾರ ಓಲೈಕೆಯೂ ಇಲ್ಲದೇ, ಎಲ್ಲರ ಸಮಾನ ಅಭಿವೃದ್ಧಿ ನಡೆಸುವುದು ನಮ್ಮ ಗುರಿ" ಎಂದು ನೂತನ ಸಿಎಂ ತಿಳಿಸಿದ್ದಾರೆ.
"ಚುನಾವಣಾ ಪ್ರಣಾಳಿಕೆಯಲ್ಲಿರುವ ಎಲ್ಲಾ ಆಶ್ವಾಸನೆಗಳನ್ನು ನಾವು ಈಡೇರಿಸುತ್ತೇವೆ... ಉತ್ತರಪ್ರದೇಶ ಇಲ್ಲಿಯವರೆಗೂ ಬಳಲಿಕೊಂಡೇ ಇದೆ. ಇನ್ಮುಂದೆ ಇದು ನಿರ್ಲಕ್ಷ್ಯಕ್ಕೊಳಗಾಗುವುದಿಲ್ಲ. ಸರಕಾರ ಹೇಗೆ ನಡೆಸಬೇಕು ಹಾಗೂ ಜನಸಾಮಾನ್ಯರನ್ನು ಹೇಗೆ ಕಾಣಬೇಕು ಎಂಬುದನ್ನು ಉತ್ತರಪ್ರದೇಶದಲ್ಲಿ ತೋರಿಸುತ್ತೇವೆ," ಎಂದು ಭರವಸೆ ನೀಡಿದ್ದಾರೆ.
ಆ್ಯಂಟಿ-ರೋಮಿಯೋ ಕಾರ್ಯಾಚರಣೆ:
ಅಧಿಕಾರಕ್ಕೆ ಬಂದ ಬಳಿಕ ಯೋಗಿ ಆದಿತ್ಯನಾಥ್ ಅವರು ಹೊರಡಿಸಿದ ತ್ರಿವಳಿ ಕ್ರಮಗಳಲ್ಲಿ ಆ್ಯಂಟಿ-ರೋಮಿಯೋ ಕಾರ್ಯಾಚರಣೆ ಕೂಡ ಒಂದು. ಆದರೆ, ಕಾರ್ಯಾಚರಣೆ ಹೆಸರಿನಲ್ಲಿ ಅಮಾಯಕ ಜೋಡಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅರೋಪಗಳು ಕೇಳಿಬರುತ್ತಿವೆ. ಯೋಗಿ ಆದಿತ್ಯನಾಥ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಹಿಳೆಯರನ್ನು ಚುಡಾಯಿಸುವ, ಗೋಳು ಹುಯ್ದುಕೊಳ್ಳುವ ಪೋಲಿ ಹುಡುಗರನ್ನಷ್ಟೇ ಟಾರ್ಗೆಟ್ ಮಾಡಲಾಗುವುದು ಎಂದು ಸಿಎಂ ಅಭಯಹಸ್ತ ನೀಡಿದ್ದಾರೆ.
ಇದೇ ವೇಳೆ, ಕೈಲಾಸ ಮಾನಸರೋವರ ಯಾತ್ರೆ ಮಾಡುವ ಆರೋಗ್ಯವಂತ ಯಾತ್ರಿಗಳಿಗೆ ತಲಾ 1 ಲಕ್ಷ ಅನುದಾನ ನೀಡುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಮಾರ್ಚ್ 19, ಭಾನುವಾರದಂದು ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.