ಫನಿ ಚಂಡಮಾರುತ : ಯೆಲ್ಲೋ ಅಲರ್ಟ್ - ಶಾಲಾ ಕಾಲೇಜುಗಳಿಗೆ ರಜೆ

By Web DeskFirst Published May 1, 2019, 2:01 PM IST
Highlights

ದೇಶದಲ್ಲಿ ಬಿಸಿಲಿನ ಜಳ ಅಪ್ಪಳಿಸುತ್ತಿರುವ ಬೆನ್ನಲ್ಲೇ ಭಾರೀ ಚಂಡಮಾರುತ ಫನಿ ಆರ್ಭಟವೂ ಜೋರಾಗಿದೆ. ಚಂಡಮಾರುತ ಅತಿ ವೇಗವಾಗಿ ಬೀಸುತ್ತಿದ್ದು, ಹವಾಮಾನ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. 

ನವದೆಹಲಿ : ಕಳೆದ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿರುವ ‘ಫನಿ’ ಚಂಡಮಾರುತ  ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶುಕ್ರವಾರದ ವೇಳೆಗೆ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

ಒಡಿಶಾದ ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಶಾಲೆ ಕಾಲೇಜುಗಳಿಗೂ ಗುರುವಾರ ರಜೆ ಘೋಷಣೆ ಮಾಡಲಾಗಿದೆ. 

ಚುನಾವಣೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನೀತಿ ಸಂಹಿತೆಯನ್ನು ಚಂಡಮಾರುತದಿಂದಾಗಿ 11 ಜಿಲ್ಲೆಗಳಲ್ಲಿ ಹಿಂಪಡೆಯಲಾಗಿದೆ. ಪುರಿ, ಜಗತ್ ಸಿಂಗ್ ಪುರ್, ಕೇಂದ್ರ ಪರಾ, ಭದ್ರಕ್, ಬಲಸೊರೆ, ಮಯೂರ್ಬಂಜ್, ಗಜಪತಿ, ಗಂಜಮ್, ಕೋರ್ದಾ, ಕುಟ್ಟಕ್, ಜೈಪರ್  ಜಿಲ್ಲೆಗಳಲ್ಲಿ ಚಂಡಮಾರುತದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.  

 ಫನಿ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ವಿಶಾಖಪಟ್ಟಣಂದಂದ 670 ಕಿ.ಮೀ. ದಕ್ಷಿಣ ಹಾಗೂ ಪುರಿಯಿಂದ ದಕ್ಷಿಣಕ್ಕೆ 830 ಕಿ.ಮೀ.ದೂರದಲ್ಲಿ ನೆಲೆಸಿದೆ. ಮೇ 3ರಂದು ಗಂಟೆಗೆ 175​ರಿಂದ 185 ಕಿ.ಮೀ. ವೇಗದಲ್ಲಿ ಪುರಿ ಕರಾವಳಿಗೆ ಅಪ್ಪಳಿಸಬಹುದು. ಗಾಳಿಯ ವೇಗ 205 ಕಿ.ಮೀ.ಯವರೆಗೂ ತಲುಪಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಒಂದು ವೇಳೆ ಚಂಡಮಾರುತ ಇದೇ ವೇಗದಲ್ಲಿ ಮುಂದುವರಿದರೆ ಕಳೆದ ವರ್ಷ ಒಡಿಶಾ ಕರಾವಳಿಗೆ ಅಪ್ಪಳಿಸಿದ ‘ತಿತಿಲಿ’ ಚಂಡಮಾರುತಕ್ಕಿಂತಲೂ ಭೀಕರ ಚಂಡಮಾರುತವಾಗಿ ಬದಲಾಗಲಿದೆ.

ಇನ್ನು ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಯೆಲ್ಲೋ ಅಲರ್ಟ್ ಎಂದರೇನು : ಸ್ಥಳದಲ್ಲಿ ಕೆಲ ದಿನಗಳ ಕಾಲ ಮೋಡ ಕವಿದ ಹಾಗೂ ಮಳೆಯ ವಾತಾವರಣವಿರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ರದ್ದುಗೊಳಿಸಿ ಎಂದು ನೀಡುವ ಸೂಚನೆ

click me!