
ಹುಬ್ಬಳ್ಳಿ[ಆ.12]: ಪ್ರವಾಹ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಈ ವಿಚಾರದಲ್ಲಿ ನಾವು ಪಕ್ಷಭೇದ ಮರೆತು ಜನರ ನೋವಿಗೆ ಸ್ಪಂದಿಸಬೇಕಿದೆ. ಈ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಉತ್ತರ ಕರ್ನಾಟಕ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಡಿಕೆ ಶಿವಕುಮಾರ್, ಸೋಮವಾರ ಹುಬ್ಬಳ್ಳಿಗೆ ಆಗಮಿಸಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪರಿಸ್ಥಿತಿಯಲ್ಲಿ ನಾವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂಬ ಭರವಸೆ ನೀಡಿದರು.
‘ಪಕ್ಷಬೇಧ ಮರೆತು ಜನರಿಗೆ ಸ್ಪಂಧಿಸುವ ಉದ್ದೇಶದೊಂದಿಗೆ ನಾನು ಆಗಮಿಸಿದ್ದೇನೆ. ಮೊದಲು ಕುಂದಗೋಳಕ್ಕೆ ಭೇಟಿ ನೀಡುತ್ತೇನೆ. ನಂತರ ಜಿಲ್ಲಾ ನಾಯಕರು ಎಲ್ಲಿ ಹೇಳುತ್ತಾರೋ ಅಲ್ಲಿ ಪ್ರವಾಸ ಮಾಡುತ್ತೇನೆ. ನಂತರ ಸಂಜೆ ಬೆಳಗಾವಿಗೆ ತೆರಳಿ ಅಲ್ಲಿನ ನಾಯಕರು ಯಾವ ಪ್ರದೇಶ ಸೂಚಿಸುತ್ತಾರೋ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದರು.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಕೆಲವು ಕಡೆ ಪ್ರವಾಹದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಎಂದರೆ ಮತ್ತೆ ಕೆಲವು ಕಡೆ 40 ಸಾವಿರ ಕೋಟಿ ನಷ್ಟ ಆಗಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ರಾಜ್ಯ ಮತ್ತು ಕೇಂದ್ರಗಳಲ್ಲಿ ಅವರದೇ ಸರ್ಕಾರ ಇದೆ. ಕೇಂದ್ರಗಳಲ್ಲಿ ಮಂತ್ರಿಗಳಿದ್ದಾರೆ. ಅವರೆಲ್ಲರೂ ಜನರಿಗೆ ಸೂಕ್ತ ಪರಿಹಾರ ನೀಡಬೇಕು. ಇದಕ್ಕೆ ಬೇಕಾದ ಸಹಕಾರವನ್ನು ನಾವು ನೀಡುತ್ತೇವೆ. ಸರ್ವಪಕ್ಷ ನಿಯೋಗ ಕರೆದರೆ ನಾವು ಕೂಡ ಬಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ. ಅವರದು ಸಂಪೂರ್ಣ ಬಹುಮತ ಇರುವ ಶಕ್ತಿಶಾಲಿ ಸರ್ಕಾರ. ಹೀಗಾಗಿ ಅವರು ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿ ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದರು.
ಸರ್ಕಾರ ಅದು ಮಾಡಿಲ್ಲ ಇದು ಮಾಡಿಲ್ಲ, ಯಾರೂ ಇಲ್ಲ ಅಂತಾ ಮಾತನಾಡುವ ಸಂದರ್ಭ ಇದಲ್ಲ. ಸಮಯ ಬಂದಾಗ ನೀವು ಮಾತಾಡಿ, ನಾವು ಮಾತನಾಡುತ್ತೇವೆ. ಈಗಿನ ಪರಿಸ್ಥಿತಿಯಲ್ಲಿ ಪಕ್ಷಭೇದ ಮರೆತು ಸಂತ್ರಸ್ತರನ್ನು ಕಾಪಾಡಲು ಕೈಜೋಡಿಸಬೇಕು ಎಂದು ನಮ್ಮ ಕಾರ್ಯಕರ್ತರಿಗೂ ಸೂಚನೆ ನೀಡಿದ್ದೇವೆ. ರಾಜ್ಯ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಾರ್ವಜನಿಕರು ಬಹಳ ಪ್ರಮಾಣದಲ್ಲಿ ಸಹಾಯ ಮಾಡುತ್ತಿದ್ದಾರೆ. ಮಾನವೀಯತೆಯಿಂದ ಸ್ಪಂದಿಸುತ್ತಿರುವ ಅವರೆಲ್ಲರಿಗೂ ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಅವರಿಗೆ ನಾವು ಅಭಿನಂದಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ ನಾನು ಒಂದು ಕಿವಿ ಮಾತು ಹೇಳಲು ಬಯಸುತ್ತೇನೆ. ಸಂತ್ರಸ್ತರ ನೆರವಿನ ಹೆಸರು ಹೇಳಿಕೊಂಡು ಕೆಲವರು ಹಣ ದೇಣಿಗೆ ಪಡೆಯಲು ಡಬ್ಬ ಹಿಡಿದು ರಸ್ತೆಗೆ ಇಳಿದಿದ್ದಾರೆ. ನಿಜವಾಗಿಯೂ ಸಂತ್ರಸ್ತರಿಗೆ ಸಹಾಯ ಮಾಡಲು ಇಚ್ಛಿಸುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನೋಂದಣಿ ಮಾಡಿ, ತಾಲೂಕು ಕಚೇರಿಯಲ್ಲಿ ಮಾಹಿತಿ ನೀಡಿ ಹಣ ಸಂಗ್ರಹಿಸುವಂತಾಗಬೇಕು. ಅನಗತ್ಯವಾಗಿ ಹಣ ವಸೂಲಿ ಮಾಡುವ ಕಾರ್ಯಕ್ಕೆ ಬ್ರೇಕ್ ಹಾಕಿ ಜನರು ಮಾಡುವ ಸಹಾಯ ನೇರವಾಗಿ ಅಗತ್ಯವಿರುವವರಿಗೆ ತಲುಪಬೇಕು. ಹೀಗಾಗಿ ಮುಖ್ಯಮಂತ್ರಿಗಳು ಈ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
ಇನ್ನು ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ದಿನ ಅಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಮ್ಮ ಹಿರಿಯರು ಹೋರಾಟ ಮಾಡಿ ನಮಗೆ ಸ್ವಾತಂತ್ರ ತಂದುಕೊಟ್ಟಿದ್ದಾರೆ. ಅದರ ಪ್ರತೀಕವಾಗಿ ನಾವು ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಕಳೆದ 70 ವರ್ಷಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಬಂದಿದೆ. 16ನೇ ತಾರಿಕಿನ ನಂತರ ಸಂಪುಟ ರಚನೆ ಮಾಡುತ್ತೇವೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ನಾವು ಸರ್ಕಾರದ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ಆದರೆ ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕಾಗಿ ನಾನು ಉತ್ತರಿಸುತ್ತಿದ್ದೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.