ಇಲ್ಲಿ ಹುಡುಗಿಯರ ಮೊಬೈಲ್ ನಂಬರ್ ಮಾರಾಟಕ್ಕಿವೆ..!

By Suvarna Web DeskFirst Published Feb 3, 2017, 1:00 PM IST
Highlights

ಮಹಿಳೆಯರಿಗೆ ಇದು ಯಾವ ಪರಿ ಸಮಸ್ಯೆಯಾಗಿದೆ ಎಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಪೊಲೀಸ್ ಸಹಾಯವಾಣಿಗೆ ಸುಮಾರು 6 ಲಕ್ಷ ದೂರುಗಳು ಬಂದಿವೆ.

ಲಖನೌ(ಫೆ.03): ಸುಲಭವಾಗಿ ಹಣ ಸಂಪಾದಿಸುವ ದುರಾಸೆಗೆ ಬಿದ್ದಿರುವ ಉತ್ತರಪ್ರದೇಶದ ಮೊಬೈಲ್ ರೀಚಾರ್ಜ್ ಅಂಗಡಿಗಳು ಹೊಸ ದಂಧೆಯೊಂದನ್ನು ಆರಂಭಿಸಿವೆ. ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಲು ಬರುವ ಯುವತಿಯರು ಹಾಗೂ ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ಅವರಿಗೇ ಗೊತ್ತಿಲ್ಲದಂತೆ ಅಪರಿಚಿತ ಪುರುಷರಿಗೆ ಮಾರಾಟ ಮಾಡುತ್ತಿವೆ. ಸುಂದರವಾಗಿರುವ ಯುವತಿಯರು, ಮಹಿಳೆಯರ ಮೊಬೈಲ್ ನಂಬರ್'ನ್ನು ₹500 ಹಾಗೂ ಸಾಧಾರಣ ಹುಡುಗಿಯರ ಸಂಖ್ಯೆಯನ್ನು ಕೇವಲ ₹50 ರೂ.ಗೆ ಬಿಕರಿ ಮಾಡುತ್ತಿವೆ.

ಹಣ ಕೊಟ್ಟು ಮೊಬೈಲ್ ಅಂಗಡಿಗಳಿಂದ ಯುವತಿಯರ, ಮಹಿಳೆಯರ ಮೊಬೈಲ್ ಸಂಖ್ಯೆ ಪಡೆಯುವ ಪುರುಷರು, ‘ನಿಮ್ಮ ಜತೆ ಸ್ನೇಹ ಬೆಳೆಸುವ ಆಸೆ ಇದೆ’ ಎಂದು ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಅಂಗಲಾಚುತ್ತಾರೆ. ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡಿ ಅಶ್ಲೀಲ ಸಂಭಾಷಣೆಯಲ್ಲಿ ತೊಡಗುತ್ತಾರೆ. ಇನ್ನೂ ಕೆಲವರು ಅಶ್ಲೀಲ ಫೋಟೋ, ವಿಡಿಯೋ ಹಾಗೂ ಸಂದೇಶಗಳನ್ನು ಮಹಿಳೆಯರ ಮೊಬೈಲ್‌'ಗೆ ರವಾನಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

ಮಹಿಳೆಯರಿಗೆ ಇದು ಯಾವ ಪರಿ ಸಮಸ್ಯೆಯಾಗಿದೆ ಎಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಪೊಲೀಸ್ ಸಹಾಯವಾಣಿಗೆ ಸುಮಾರು 6 ಲಕ್ಷ ದೂರುಗಳು ಬಂದಿವೆ. ಅದರಲ್ಲಿ ಶೇ.90ರಷ್ಟು ದೂರುಗಳು ಮಹಿಳೆಯರ ಮೊಬೈಲ್‌'ಗೆ ಪುರುಷರು ಕರೆ ಮಾಡಿ ಕಿರುಕುಳ ನೀಡಿದ ಪ್ರಕರಣಗಳೇ ಆಗಿವೆ.

ಸಮಸ್ಯೆ ಇಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದರೂ, ಇಲ್ಲಿವರೆಗೂ ಒಬ್ಬನೇ ಒಬ್ಬ ‘ಮೊಬೈಲ್ ಕಾಮಿ’ಯ ಬಂಧನವಾಗಿಲ್ಲ. ಈ ರೀತಿ ಮಹಿಳೆಯರಿಗೆ ಮೊಬೈಲ್ ಕರೆ ಮಾಡುವವರನ್ನೆಲ್ಲಾ ಬಂಧಿಸುತ್ತಾ ಹೋದರೆ ಜೈಲುಗಳೇ ಸಾಕಾಗುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡುತ್ತಾರೆ. ಆದರೆ ಸಹಾಯವಾಣಿಯ ಸಿಬ್ಬಂದಿ ಮಹಿಳೆಯರಿಂದ ದೂರು ಬರುತ್ತಿದ್ದಂತೆ, ಸಂಬಂಧಿಸಿದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರಂತೆ.

ಇದರ ಜತೆಗೆ ನಕಲಿ ದಾಖಲೆ ಸೃಷ್ಟಿಸಿ ಮೊಬೈಲ್ ಸಿಮ್ ಮಾರಾಟ ಮಾಡುವ ದಂಧೆಯನ್ನೂ ರೀಚಾರ್ಜ್ ಅಂಗಡಿಗಳು ನಡೆಸುತ್ತಿವೆ. ಆದರೆ ಉತ್ತರಪ್ರದೇಶದ ಪೊಲೀಸರು ಈವರೆಗೆ ನಕಲಿ ಸಿಮ್ ಮಾರಾಟ ಸಂಬಂಧ ಕೇವಲ ಮೂವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ.

click me!