ತಾಯಿಗೇ ತಾಯಿಯಾದ ಬಾಲಕಿಗೆ ಜೀವನಪೂರ್ತಿ ಶಿಕ್ಷಣ: ಆರ್.ಅಶೋಕ | ‘ಕನ್ನಡಪ್ರಭ’ ಮಾನವೀಯ ವರದಿಗೆ ಮಿಡಿದ ಮನಗಳು | ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸುರ್ಪದಿಯಲ್ಲಿ ಬಾಲಕಿ
ಕೊಪ್ಪಳ (ಮೇ. 28): ‘ಭಿಕ್ಷೆ ಬೇಡಿ ನಿಶ್ಶಕ್ತ ತಾಯಿಯನ್ನು ಸಲಹುತ್ತಿರುವ ಬಾಲಕಿ’ಯ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಮಾನವೀಯ ವರದಿಗೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ, ಸಂಸದ ಕರಡಿ ಸಂಗಣ್ಣ ಸೇರಿದಂತೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.
ಇದೀಗ ತಾಯಿ - ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಮ್ಮ ಸುರ್ಪದಿಗೆ ಪಡೆದುಕೊಂಡಿದ್ದು, ಮಗು ಮತ್ತು ತಾಯಿಯನ್ನು ಸಂರಕ್ಷಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲಿ ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಸಿದ್ದಾಪುರದ ಮಹಿಳೆ ದುರ್ಗಮ್ಮ ಭೋವಿಯನ್ನು ಅವರ 6 ವರ್ಷದ ಮಗಳು ಭಾಗ್ಯಶ್ರೀ ಆರೈಕೆ ಮಾಡುತ್ತಿರುವ ಕುರಿತು ಕನ್ನಡಪ್ರಭ ವರದಿ ಮಾಡಿತ್ತು.
ಇದನ್ನು ಗಮನಿಸಿದ ಆರ್.ಅಶೋಕ ತಕ್ಷಣ ಕೊಪ್ಪಳದ ಬಿಜೆಪಿ ಮುಖಂಡ ಅಮರೇಶ ಕರಡಿ ಅವರಿಗೆ ದೂರವಾಣಿ ಕರೆ ಮಾಡಿ, ಆ ಬಾಲಕಿಯ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಇದೇ ವೇಳೆ ಭಾಗ್ಯಶ್ರೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ತಿಳಿಸಿದ್ದಾರೆ.
ಸಂಸದರಿಂದ . 10 ಸಾವಿರ ನೆರವು:
ಸಂಸದ ಸಂಗಣ್ಣ ಕರಡಿ ಸಹ ಸುದ್ದಿ ತಿಳಿದ ಕೂಡಲೇ ತಮ್ಮ ಪುತ್ರ ಜಿಲ್ಲಾ ಪಂಚಾಯ್ತಿ ಸದಸ್ಯ ಗವಿಸಿದ್ದಪ್ಪ ಕರಡಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಗವಿಸಿದ್ದಪ್ಪ ಕರಡಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, .10 ಸಾವಿರ ನಗದು, ದುರ್ಗಮ್ಮ ಅವರಿಗೆ 2 ಸೀರೆ, ಕುಪ್ಪಸ, ಬಾಲಕಿಗೆ 2 ಫ್ರಾಕ್, ಹಣ್ಣು, ಬ್ರೆಡ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಸಹ ಆಸ್ಪತ್ರೆಯಲ್ಲಿ ಬಾಲಕಿ ಮತ್ತು ತಾಯಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ತಮ್ಮ ಕೈಯಿಂದ ಆದ ಧನ ಸಹಾಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅನೇಕ ಸಹೃದಯಿಗಳು ಸಹಾಯ ಹಸ್ತ ಚಾಚಿದ್ದಾರೆ.