ಒಡೆಯರ್ ಪುತ್ರಿ ಆಸ್ತಿಯಲ್ಲಿ ಡಿಕೆಶಿ ಬೇನಾಮಿ ಹೂಡಿಕೆ?

By Web DeskFirst Published Sep 6, 2019, 8:07 AM IST
Highlights

ಒಡೆಯರ್‌ ಪುತ್ರಿ ವಿಶಾಲಾಕ್ಷಿ ಆಸ್ತಿಯಲ್ಲಿ ಡಿಕೆಶಿ 4 ಕೋಟಿ ಬೇನಾಮಿ ಹೂಡಿಕೆ?| ಕಳೆದ ವರ್ಷವೇ ಕೋರ್ಟ್‌ಗೆ ಐಟಿ ಇಲಾಖೆಯಿಂದ ದೂರು ಸಲ್ಲಿಕೆ| ಆಪ್ತ ಸಚಿನ್‌ ಮೂಲಕ ಹೂಡಿಕೆ| ದಾಖಲೆ ಇಲ್ಲದ ಹಣದ ಕೇಸಿಂದ ಪಾರಾಗಲು ಯತ್ನ

ಬೆಂಗಳೂರು[ಸೆ.06]: ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ಬಂಧನಕ್ಕೊಳಗಾಗಿರುವ ರಾಜ್ಯದ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್‌ ಅವರು ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಪುತ್ರಿ ವಿಶಾಲಾಕ್ಷಿ ದೇವಿಯವರ ಆಸ್ತಿಯಲ್ಲಿ ಬೇನಾಮಿ ಹಣ ಹೂಡಿಕೆ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಕಳೆದ ವರ್ಷ ಆದಾಯ ತೆರಿಗೆ ಇಲಾಖೆಯು ವಿಶೇಷ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಶಿವಕುಮಾರ್‌ ಆಪ್ತ ಹಾಗೂ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಸಚಿನ್‌ ನಾರಾಯಣ್‌ ಅವರು ಬೇನಾಮಿದಾರರಾಗಿ ಹೂಡಿಕೆ ಮಾಡಿದ್ದಾರೆ. ಶಿವಕುಮಾರ್‌ ತಮ್ಮ ದಾಖಲೆರಹಿತ ನಾಲ್ಕು ಕೋಟಿ ರು.ಗಳನ್ನು ವಿಶಾಲಾಕ್ಷಿ ದೇವಿ ಅವರ ಆಸ್ತಿಯಲ್ಲಿ ಸಚಿನ್‌ ನಾರಾಯಣ ಮೂಲಕ ಹೂಡಿಕೆ ಮಾಡಿಸಿದ್ದಾರೆ. ದಾಖಲೆ ಇಲ್ಲದ ಹಣದಿಂದ ಪಾರಾಗಲು ವಂಚನೆಯ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ED ಕುಣಿಕೆಯಲ್ಲಿ ಡಿಕೆಶಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಕ್ರಮವಾಗಿ ಹಣ ತೊಡಗಿಸಲು ಜಿಯುಸ್‌ ಕನ್‌ಸ್ಟ್ರಕ್ಷನ್‌ ಪ್ರೈ.ಲಿ. ಹೆಸರಿನ ಕಂಪನಿ ಸ್ಥಾಪಿಸಿ, ಅದಕ್ಕೆ ಡಿ.ಕೆ.ಶಿವಕುಮಾರ್‌, ಸಚಿನ್‌ ನಾರಾಯಣ್‌ ಮತ್ತು ಆತನ ಪತ್ನಿ ಪ್ರಿಯಾಂಕಾ ಸಚಿನ್‌ ನಿರ್ದೇಶಕರಾಗಿದ್ದರು. 2016-17ನೇ ಸಾಲಿನಲ್ಲಿ ಜಿಯುಸ್‌ ಕಂಪನಿ ಹೆಸರಲ್ಲಿ ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ನಲ್ಲಿ ನಂ.17, ಬಿ-4 ಫ್ಲಾಟ್‌ ಖರೀದಿಸಲಾಯಿತು. ಆದರೆ, ಅಷ್ಟರೊಳಗೆ ಶಿವಕುಮಾರ್‌ ಕಂಪನಿಗೆ ರಾಜೀನಾಮೆ ಕೊಟ್ಟಿದ್ದರು. ತಮ್ಮ ಹೆಸರಲ್ಲಿರುವ ಆಸ್ತಿಗಳ ಬಗ್ಗೆ ದಾಖಲೆಗಳಿದ್ದರೆ ಅಕ್ರಮವಾಗುತ್ತದೆ ಎಂಬುದನ್ನು ಅರಿತು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ವಿಶಾಲಾಕ್ಷಿ ದೇವಿ ಅವರ ಆಸ್ತಿಯಲ್ಲಿ ಬೇನಾಮಿದಾರರಾಗಿ ಹಣ ತೊಡಗಿಸಿದ್ದಾರೆ. ಶಿವಕುಮಾರ್‌ ಮತ್ತವರ ಆಪ್ತರ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಲಭ್ಯವಾದ ದಾಖಲೆಗಳನ್ನು ಆಧರಿಸಿ ವಿಶಾಲಾಕ್ಷಿ ದೇವಿ ಅವರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಬೇನಾಮಿದಾರರ ಹೆಸರಲ್ಲಿ ಹಣ ಹೂಡಿಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂಬುದು ತಿಳಿದುಬಂದಿದೆ ಎಂದು ಐಟಿ ಇಲಾಖೆ ಅಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

8.59 ಕೋಟಿ ರು. ನಗದು ಪತ್ತೆಯಾದ ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲಾಟ್‌ನಿಂದ ಒಂದು ಬಾರಿಗೆ 50 ಲಕ್ಷ ರು.ಗಳಿಂದ ಒಂದೂವರೆ ಕೋಟಿ ರು.ಗಳವರೆಗೆ ಸಾಗಣೆಯಾಗುತ್ತಿತ್ತು. ಪ್ರಕರಣದ ಆರೋಪಿಗಳಾದ ಆಂಜನೇಯ ಮತ್ತು ರಾಜೇಂದ್ರ ಇಬ್ಬರೂ ಹಣ ಸಾಗಿಸುತ್ತಿದ್ದರು. ಶಿವಕುಮಾರ್‌ ಕೃಷಿ ಮೂಲದಿಂದ ಆದಾಯ ಬರುತ್ತದೆ ಎಂಬುದಾಗಿ ವಿಚಾರಣೆ ವೇಳೆ ತಿಳಿಸಿದ್ದರು. ಆದರೆ, ಇತರೆ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಕೃಷಿ ಮೂಲದಿಂದ ಅವರಿಗೆ ಆದಾಯ ಬರುತ್ತಿರಲಿಲ್ಲ. ಬದಲಿಗೆ ಅದು ಅಕ್ರಮ ಹಣ ಎಂಬ ಮಾಹಿತಿ ಲಭ್ಯವಾಗಿದೆ.

ಡಿಕೆಶಿಯನ್ನು ಬೆಚ್ಚಿಬೀಳಿಸಿದ ED ಅಧಿಕಾರಿಗಳ 2 ಪ್ರಶ್ನೆಗಳು!

ದೆಹಲಿಯ ಫ್ಲಾಟ್‌ಗಳು ಶಿವಕುಮಾರ್‌ ಮತ್ತು ಮತ್ತೋರ್ವ ಆರೋಪಿ ಸುನೀಲ್‌ ಕುಮಾರ್‌ ಶರ್ಮಾ ನಿಯಂತ್ರಣದಲ್ಲಿತ್ತು. ಆದರೆ, ಅವುಗಳ ಕೀಗಳು ಆಂಜನೇಯ ಬಳಿ ಇರುತ್ತಿದ್ದವು. ಕುತೂಹಲಕರ ವಿಚಾರವೆಂದರೆ ಸುನೀಲ್‌ ಕುಮಾರ್‌ ಶರ್ಮಾಗೆ ದೆಹಲಿಯಲ್ಲಿ ಯಾವುದೇ ವ್ಯವಹಾರ ಇರಲಿಲ್ಲ. ಆದರೆ, ಶಿವಕುಮಾರ್‌ ಜತೆ ಸಂಪರ್ಕದಲ್ಲಿದ್ದುಕೊಂಡು ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.

ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ ನಂ.107, ಬಿ-2 ಅನ್ನು ಶಿವಕುಮಾರ್‌ ಖರೀದಿ ಮಾಡಿದ್ದು, ನಂ.17, ಬಿ-4 ಅನ್ನು ಸಚಿನ್‌ ನಾರಾಯಣ್‌ ಮತ್ತು 201, ಬಿ-5 ಫ್ಲಾಟ್‌ ಅನ್ನು ದಿವಂಗತ ಸುರೇಶ್‌ ಶರ್ಮಾ (ಸುನೀಲ್‌ ಕುಮಾರ್‌ ಶರ್ಮಾ ಸಹೋದರ) ಖರೀದಿ ಮಾಡಿದ್ದರು. ಶಿವಕುಮಾರ್‌ ಖರೀದಿ ಮಾಡಿದ ಫ್ಲಾಟ್‌ ಅತಿಥಿಗಳ ಉಪಯೋಗಕ್ಕಾಗಿ ಮೀಸಲಾಗಿದ್ದರೆ ಇನ್ನುಳಿದ ಫ್ಲಾಟ್‌ಗಳನ್ನು ಅಕ್ರಮ ಹಣ ಸಂಗ್ರಹಣೆಗಾಗಿ ಬಳಕೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಏನಿದು ಪ್ರಕರಣ?

- ಅಕ್ರಮವಾಗಿ ಹಣ ಹೂಡಲು ಜಿಯುಸ್‌ ಕನ್‌ಸ್ಟ್ರಕ್ಷನ್‌ ಹೆಸರಿನ ಕಂಪನಿ ಸ್ಥಾಪನೆ

- ಇದಕ್ಕೆ ಡಿಕೆಶಿ, ಸಚಿನ್‌ ನಾರಾಯಣ್‌, ಅವರ ಪತ್ನಿ ಪ್ರಿಯಾಂಕಾ ನಿರ್ದೇಶಕರು

- ಬಳಿಕ ಕಂಪನಿಗೆ ಡಿಕೆಶಿ ರಾಜೀನಾಮೆ. ಜಿಯುಸ್‌ನಿಂದ ದಿಲ್ಲಿಯಲ್ಲಿ ಫ್ಲ್ಯಾಟ್‌ ಖರೀದಿ

- ಅಲ್ಲದೆ, ಒಡೆಯರ್‌ ಪುತ್ರಿ ವಿಶಾಲಾಕ್ಷಿದೇವಿ ಆಸ್ತಿಯಲ್ಲಿ ಬೇನಾಮಿಯಾಗಿ ಹಣ ಹೂಡಿಕೆ

- ಡಿಕೆಶಿ, ಆಪ್ತರ ಮೇಲಿನ ದಾಳಿ ವೇಳೆ ದಾಖಲೆ ಲಭ್ಯ, ವಿಚಾರಣೆ ವೇಳೆ ಸಂಗತಿ ಬಯಲು

click me!