ಎಚ್‌ಡಿಕೆ ಪರ ಮತ ಹಾಕಲು ಕಾಂಗ್ರೆಸಿಗರಿಗೆ ವಿಪ್‌

First Published May 25, 2018, 8:12 AM IST
Highlights

ಎಚ್‌.ಡಿ. ಕುಮಾರಸ್ವಾಮಿ ಅವರ ವಿಶ್ವಾಸಮತ ಸಾಬೀತು ಹಾಗೂ ವಿಧಾನಸಭಾಧ್ಯಕ್ಷರ ಹುದ್ದೆಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರದ ಅಧಿವೇಶನದಲ್ಲಿ ಕಾಂಗ್ರೆಸ್‌ನ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿದ್ದು ಕುಮಾರಸ್ವಾಮಿ ಪರ ಮತ ಚಲಾಯಿಸುವಂತೆ ಕಾಂಗ್ರೆಸ್‌ ಪಕ್ಷವು ತನ್ನೆಲ್ಲಾ ಶಾಸಕರಿಗೆ ವಿಪ್‌ ಜಾರಿ ಮಾಡಿದೆ.

ಬೆಂಗಳೂರು :  ಎಚ್‌.ಡಿ. ಕುಮಾರಸ್ವಾಮಿ ಅವರ ವಿಶ್ವಾಸಮತ ಸಾಬೀತು ಹಾಗೂ ವಿಧಾನಸಭಾಧ್ಯಕ್ಷರ ಹುದ್ದೆಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರದ ಅಧಿವೇಶನದಲ್ಲಿ ಕಾಂಗ್ರೆಸ್‌ನ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿದ್ದು ಕುಮಾರಸ್ವಾಮಿ ಪರ ಮತ ಚಲಾಯಿಸುವಂತೆ ಕಾಂಗ್ರೆಸ್‌ ಪಕ್ಷವು ತನ್ನೆಲ್ಲಾ ಶಾಸಕರಿಗೆ ವಿಪ್‌ ಜಾರಿ ಮಾಡಿದೆ. ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆ ವೇಳೆ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು  ಕಲಾಪದ ವೇಳೆ ಕಾಂಗ್ರೆಸ್‌ ಶಾಸಕರು ಯಾವ ರೀತಿ ನಡೆದುಕೊಳ್ಳಬೇಕು ಎಂಬ ಕುರಿತು ವಿವರಣೆ ನೀಡಿದರು.

ಅಧಿವೇಶನದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪರವಾಗಿ ಸ್ಪೀಕರ್‌ ಹುದ್ದೆಗೆ ನಾಮಪತ್ರ ಸಲ್ಲಿಸುತ್ತಿರುವ ರಮೇಶ್‌ ಕುಮಾರ್‌ ಪರವಾಗಿ ಮತ ಚಲಾಯಿಸಬೇಕು. ಸಮ್ಮಿಶ್ರ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪರವಾಗಿ ಮತ ಚಲಾಯಿಸಬೇಕು ಎಂದು ಸೂಚನೆ ನೀಡಿ ಪ್ರತಿಯೊಬ್ಬರಿಗೂ ವಿಪ್‌ ಜಾರಿ ಮಾಡಿದರು.

ಕುಮಾರಸ್ವಾಮಿ ಅವರು ಶುಕ್ರವಾರ ಮಧ್ಯಾಹ್ನ ವಿಶ್ವಾಸಮತ ಯಾಚನೆ ಮಾಡುವ ಹಿನ್ನೆಲೆಯಲ್ಲಿ ಪಕ್ಷದ ನಿರ್ಧಾರದಂತೆ ಎಲ್ಲರೂ ಕುಮಾರಸ್ವಾಮಿ ಪರ ಮತ ಚಲಾಯಿಸಬೇಕು. ಕಾರ್ಯಕಲಾಪ ಪಟ್ಟಿಯಲ್ಲಿನ ಪ್ರಸ್ತಾವನೆಯಾದ ‘ಈ ಸದನವು ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಸ್ವಾಸವನ್ನು ವ್ಯಕ್ತಪಡಿಸುತ್ತದೆ’ ಎಂಬ ಪ್ರಸ್ತಾವನೆಯ ಪರವಾಗಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಸದನದ ಅಧಿವೇಶನದಲ್ಲಿ ಗೈರು ಹಾಜರಬಾಗಬಾರದು. ಸದನದಲ್ಲಿ ಹಾಜರಿದ್ದು ತಮ್ಮ ಮತವನ್ನು ಪ್ರಸ್ತಾವನೆಯ ಪರವಾಗಿ ಚಲಾಯಿಸಬೇಕು. ಅದನ್ನು ಹೊರತುಪಡಿಸಿ ವಿರುದ್ಧ ಚಲಾಯಿಸುವುದು ಅಥವಾ ತಟಸ್ಥರಾಗಿ ಇರುವುದು ಮಾಡಿದರೆ ಸಂವಿಧಾನದ 10ನೇ ಪರಿಚ್ಛೇದ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಶಾಸಕರಿಗೆ ಸೂಚಿಸಲಾಗಿದೆ.

click me!