
ಅನೇಕಲ್ : ಜೆಡಿಎಸ್ ಕಿಂಗ್ ಮೇಕರ್ ಪಕ್ಷವೂ ಅಲ್ಲ. ಕುಮಾರಸ್ವಾಮಿ ಕಿಂಗ್ ಆಗಲೇಬೇಕೆಂಬ ಹಠವೂ ಇಲ್ಲ. ಜನತೆ ಆಶೀರ್ವದಿಸಿದಲ್ಲಿ 6.5 ಕೋಟಿ ಕನ್ನಡಿಗರ ಸೇವಕನಾಗಿ ನೊಂದವರ ದನಿಯಾಗಿ ಕೆಲಸ ಮಾಡುವ ಆಸೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು.
ಅವರು ಆನೇಕಲ್ಲಿನ ಫುಟ್‌ಬಾಲ್ ಮೈದಾನದಲ್ಲಿ ನಡೆದ ಮನೆ ಮನೆಗೆ ಕುಮಾರಣ್ಣ, ಕುಮಾರ ಪರ್ವದ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ 5 ವರ್ಷಗಳ ಪೂರ್ಣಾವಧಿ ಸರ್ಕಾರ ನಡೆಸಿದೆ. ನಾನು ಕೇವಲ 20 ತಿಂಗಳಷ್ಟೇ ನಿಮ್ಮೆಲ್ಲರ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಲ್ಪ ಅವಧಿಯ ನನ್ನ ಸರ್ಕಾರದ ಸಾಧನೆಗಳು ಹಾಗೂ ಜಾರಿಗೆ ತಂದ ಯೋಜನೆಗಳನ್ನೇ ಕಾಂಗ್ರೆಸ್ ಮತ್ತು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿವೆ ಎಂದು ರಾಷ್ಟ್ರೀಯ ಪಕ್ಷಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
24 ಗಂಟೆಗಳಲ್ಲಿ ಸಾಲ ಮನ್ನಾ: ನಾನು ಮುಖ್ಯ ಮಂತ್ರಿಯಾದ 24 ಗಂಟೆಗಳ ಒಳಗೆ ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ಸಾಲವನ್ನು ಪೂರ್ಣ ಮನ್ನಾ ಮಾಡುತ್ತೇನೆ. ಅಷ್ಟೆ ಅಲ್ಲ ರಾಜ್ಯದಲ್ಲಿ 2500 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನು ಮುಂದೆ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೃಷಿ ಬೆಂಬಲ ಬೆಲೆ ನಿಧಿ ಸ್ಥಾಪಿಸುವುದಾಗಿ ವಾಗ್ದಾನ ಮಾಡಿದರು.
ಮೋದಿಯವರು ಟೀ ಮಾರಾಟ ನಂತರ ದೇಶದ ಯುವ ಜನತೆಗೆ ಪಕೋಡ ಮಾರಾಟ ಮಾಡಿ ಜೀವನ ನಡೆಸಿ ಎಂದು ಹೇಳುವ ಮೂಲಕ ಯಾವ ಸಂದೇಶ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಅಮಿತ್ ಶಾ ರಾಜ್ಯ ಸರ್ಕಾರದ ಲೆಕ್ಕ ಕೇಳುವುದು ಎಷ್ಟು ಸರಿ ಎಂದರು.
ಜೆಡಿಎಸ್ ರಣಕಹಳೆ: ಈ ಬಾರಿ ಜನತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಬೇಕಾದ ಶಾಸಕರನ್ನು ಕಳಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ. ಈ ಬಾರಿ ಶಿಕ್ಷಣ, ಕಾರ್ಮಿಕರ, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುವೆ. ವಿಧವಾ ಪಿಂಚಣಿ, ಸಾಮಾಜಿಕ ಸುರಕ್ಷಾ ಯೋಜನೆಗಳ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವೆ. ಈ ಬಾರಿ ಚುನಾವಣೆಯಲ್ಲಿ ಕೇಸರಿ ಬಟ್ಟೆ, ಜಾತಿ ಪಂಗಡ, ಒಳ ಪಂಗಡ ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ದೂರವಿಡಿ. ನಾವೆಲ್ಲಾ ಹಿಂದೂಗಳಲ್ಲವೇ. ಕೋಮು ಕಾರಣಿಗಳನ್ನು ನಂಬಬೇಡಿ. ಈ ಬಾರಿ ಜನರನ್ನು ವಿಧಾನಸೌಧಕ್ಕೆ ಕರೆಸಿ ಅವರ ಸಲಹೆ ಪಡೆದು ಸರ್ಕಾರವನ್ನು ನಡೆಸುವೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಮಾಹಿ ಸಚಿವರಾದ ಪಿಜೆಆರ್ ಸಿಂದ್ಯಾ, ಆರ್. ಎಲ್. ಶಿವರಾಮೇಗೌಡ, ಶಾಸಕ ಡಾ. ಸಿ.ಆರ್. ಮನೋಹರ್, ಮಹಾ ಪ್ರಧಾನ ಕಾರ್ಯದರ್ಶಿ ಬಿಎಂ ಫಾರುಖ್, ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆಮಂಜಣ್ಣ, ಜೆಡಿಎಸ್ ಅಭ್ಯರ್ಥಿ ಕೆ.ಪಿ. ರಾಜು, ಮುಖಖಂಡರಾದ ಶ್ರೀನಾಥರೆಡ್ಡಿ, ರಾಮೇಗೌಡ, ದೇವೇಗೌಡ, ಶುಭಾನಂದ್, ದೇವರಾಜ್, ರಘು, ಪದ್ಮನಾಭ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.