ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ಪಡೆಯುವುದಾಗಿ ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿ : ಜಿಲ್ಲೆಯ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ್ ಖರ್ಗೆ ಅವರ ಸಲಹೆ ಪಡೆಯುವುದಾಗಿ ನೂತನ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಜಾಧವ್, ಖರ್ಗೆ ಹಿರಿಯ ರಾಜಕಾರಣಿ, ಅವರ ಸಲಹೆ ಪಡೆದುಕೊಂಡು ನೆನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಅವಧಿಯಲ್ಲಿ ಅನೇಕ ಯೋಜನೆಗಳು ಅಪೂರ್ಣವಾಗಿವೆ. ಈ ಅವಧಿಯಲ್ಲಿ ತಾವು ಸಂಸದರಾಗಿದ್ದೇವೆ ಎಂದು ಸೊಕ್ಕಿನಿಂದ ತಿರುಗಾಡುವುದಿಲ್ಲ. ಜಿಲ್ಲೆಯ ಎಲ್ಲರನ್ನೂ ಜೊತೆಗೂಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದರು.
ಸದ್ಯ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಮೀಶ್ರ ಸರ್ಕಾರ ಏನಾಗುತ್ತದೆ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನನಗೆ ಜನರು ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ ಎಂದರು.
ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ಉಮೇಶ್ ಜಾಧವ್ ಶಾಸಕ ಸ್ಥಾನವನ್ನು ತ್ಯಜಿಸಿ ಬಿಜೆಪಿ ಕೈ ಹಿಡಿದಿದ್ದರು. ಬಳಿಕ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದುಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದರು.