
ನವದೆಹಲಿ[ಜೂ.20] : ಲೋಕಸಭೆ ಮತ್ತು ವಿಧಾನಸಭೆಗೆ ಒಮ್ಮೆಗೆ ಚುನಾವಣೆ ನಡೆಸುವ ಕುರಿತು ವಿಪಕ್ಷಗಳನ್ನು ಚರ್ಚೆಯ ವೇದಿಕೆಗೆ ತರುವ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಯತ್ನ ಬುಧವಾರ ಬಹುತೇಕ ಯಶಸ್ವಿಯಾಗಿದೆ. ಪ್ರಸ್ತಾಪಿತ ವಿಷಯದ ಕುರಿತು ಚರ್ಚಿಸಲು ಇಲ್ಲಿ ಆಯೋಜಿಸಿದ್ದ ಸಭೆಯು, ಒಂದು ದೇಶ ಒಂದು ಚುನಾವಣೆ ನಡೆಸಲು ಸೂಕ್ತ ಸಲಹೆಗಳನ್ನು ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಿದೆ. ಅಷ್ಟರ ಮಟ್ಟಿಗೆ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಮುಂದಿಟ್ಟಿದೆ.
ಸಭೆಯಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು 40 ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಿದ್ದರು. ಈ ಪೈಕಿ 21 ಪಕ್ಷಗಳ ನಾಯಕರು ಬುಧವಾರ ಸಭೆಯಲ್ಲಿ ಭಾಗಿಯಾಗಿದ್ದರು. 3 ಪಕ್ಷಗಳ ನಾಯಕರು ಸರ್ಕಾರದ ಪ್ರಸ್ತಾಪಿತ ಯೋಜನೆ ಬಗ್ಗೆ ತಮ್ಮ ಲಿಖಿತ ಅಭಿಪ್ರಾಯಗಳನ್ನು ಕಳುಹಿಸಿಕೊಟ್ಟಿದ್ದರು.
ಆದರೆ ಕಾಂಗ್ರೆಸ್, ಬಿಎಸ್‌ಪಿ, ಟಿಡಿಪಿ, ಟಿಎಂಸಿ, ಆಮ್ ಆಧ್ಮಿ, ಡಿಎಂಕೆ, ಎಸ್‌ಪಿ ಸೇರಿದಂತೆ ಕೆಲ ಪ್ರಮುಖ ಪಕ್ಷಗಳ ಗಣ್ಯರು ಸಭೆಗೆ ಗೈರಾಗಿದ್ದರು. ಸಭೆಯ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್, ‘ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಪಕ್ಷಗಳು ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾಪವನ್ನು ಬೆಂಬಲಿಸಿದವು.
ಆದರೆ ಎಡಪಕ್ಷಗಳು ಈ ಯೋಜನೆಯನ್ನು ಬೆಂಬಲಿಸಿದವಾದರೂ, ಒಮ್ಮೆಗೆ ಚುನಾವಣೆ ನಡೆಸುವುದಾದರೂ ಹೇಗೆ ಎಂಬ ಬಗ್ಗೆ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದವು. ಅಂತಿಮವಾಗಿ ಯೋಜನೆ ಜಾರಿ ಕುರಿತು ಕಾಲಮಿತಿಯಲ್ಲಿ ಶಿಫಾರಸುಗಳನ್ನು ಮಾಡಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಯಿತು.
ಈ ಸಮಿತಿಯು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ತನ್ನ ವರದಿಯನ್ನು ಸಲ್ಲಿಸಲಿದೆ’ ಎಂದು ತಿಳಿಸಿದರು. ಇದೇ ವೇಳೆ ‘ಒಂದು ದೇಶ ಒಂದು ಚುನಾವಣೆ’ ಯೋಜನೆಯು ಸರ್ಕಾರದ ಕಾರ್ಯಸೂಚಿಯಲ್ಲ, ಇದು ದೇಶದ ಕಾರ್ಯಸೂಚಿ ಎಂಬುದನ್ನು ಸಭೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು ಎಂದು ರಾಜ್‌ನಾಥ್‌ಸಿಂಗ್ ತಿಳಿಸಿದರು.
ಸಮಿತಿಯಲ್ಲಿ ಯಾರ‌್ಯಾರು?: ಶಿಫಾರಸು ಮಾಡಲು ರಚಿಸುವ ಸಮಿತಿ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲವಾದರೂ, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರಿಗೆ ಪ್ರಾತಿನಿಧ್ಯ ನೀಡಲಾಗುವುದು ಎನ್ನಲಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕಾನೂನು ಆಯೋಗವು, ಸಾರ್ವಜನಿಕ ಹಣ ಉಳಿಸುವ ನಿಟ್ಟಿನಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ಬಾರಿಗೆ ಚುನಾವಣೆ ನಡೆಸುವ ಶಿಫಾರಸು ಮಾಡಿತ್ತು. ಆದರೆ ಹಾಲಿ ಇರುವ ಸಂವಿಧಾನದ ಚೌಕಟ್ಟಿನಲ್ಲಿ ಇದು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸಂವಿಧಾನದ ತಿದ್ದುಪಡಿಯನ್ನೇ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.