ಗುಡ್ ಬೈ ಹೇಳ್ತಾರಾ ಜಾರಕಿಹೊಳಿ ಸಹೋದರರು?

By Web DeskFirst Published 12, Sep 2018, 7:27 AM IST
Highlights

ಬೆಳಗಾವಿ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್‌ ತಲೆ ಹಾಕಬಾರದೆಂಬುದು ಸೇರಿ ಅನೇಕ ಬೇಡಿಕೆಗಳನ್ನು ಇರಿಸಿದ್ದು, ಅವುಗಳು ಈಡೇರದೇ ಇದ್ದಲ್ಲಿ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ.

ಬೆಂಗಳೂರು :  ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲವೂ ಬಗೆಹರಿದಿದೆ, ನಾವು ಪಕ್ಷ ತೊರೆಯುವುದಿಲ್ಲ ಎನ್ನುತ್ತಿದ್ದ ಜಾರಕಿಹೊಳಿ ಸಹೋದರರು ಆಂತರಿಕವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನ ಹಾಗೂ ಬೆಳಗಾವಿ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್‌ ತಲೆ ಹಾಕಬಾರದೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ.

ಈ ಮೂಲಕ ಪಕ್ಷ ಮತ್ತು ಹೈಕಮಾಂಡನ್ನು ಮಣಿಸುವ ಪ್ರಯತ್ನ ನಡೆಸಿದ್ದು, ಮಣಿಯದಿದ್ದರೆ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ನಗರದಲ್ಲಿ ಜಾರಕಿಹೊಳಿ ಸಹೋದರರು ನಡೆಸಿದ ಸಭೆ, ಪಕ್ಷದ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಒಂದೆಡೆ ಬೆಳಗ್ಗೆಯೇ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರ ಸದಾಶಿವನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಪರಮೇಶ್ವರ್‌ ಅವರನ್ನು ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ ಕೆಲಕಾಲ ಮಾತುಕತೆ ನಡೆಸಿದರು. ಅಲ್ಲದೆ, ತಮ್ಮ ಬೆಂಬಲಿಗ ಶಾಸಕರಾದ ನಾಗೇಂದ್ರ, ವೈ.ಎನ್‌.ಪಾಟೀಲ್‌ ಮತ್ತಿತರ ಕೆಲ ಶಾಸಕರೊಂದಿಗೆ ನಗರದ ತಮ್ಮ ನಿವಾಸದಲ್ಲಿ ಸಭೆ ನಡೆಸಿದರು.

ಪರಮೇಶ್ವರ್‌ ಅವರ ಭೇಟಿ ವೇಳೆ ಪ್ರಮುಖವಾಗಿ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಲೆ ಹಾಕದಂತೆ ಪಕ್ಷ ಕ್ರಮ ವಹಿಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ನಾವು ನಮ್ಮ ದಾಳ ಉರುಳಿಸಬೇಕಾಗುತ್ತದೆ ಎಂದು ರಮೇಶ್‌ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೂ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಸತೀಶ್‌ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು. ನಾವು ಸೂಚಿಸಿದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

Last Updated 19, Sep 2018, 9:23 AM IST