ತ್ರಿವಳಿ ತಲಾಖನ್ನು ಕೋರ್ಟ್ ನಿಷೇಧಿಸಿದರೆ ಹೊಸ ಕಾನೂನು ತರಲು ಕೇಂದ್ರ ಚಿಂತನೆ

By Suvarna Web DeskFirst Published May 15, 2017, 11:39 AM IST
Highlights

ತ್ರಿವಳಿ ತಲಾಖನ್ನು ಸಂವಿಧಾನಬಾಹಿರ ಹಾಗೂ ಅಸಿಂಧು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ ಮುಸಲ್ಮಾನರ ವಿವಾಹ-ವಿಚ್ಛೇದನಗಳನ್ನು ನಿಯಂತ್ರಿಸಲು ಹೊಸ ಕಾನೂನು ತರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್'ಗೆ ಹೇಳಿದೆ.

ನವದೆಹಲಿ (ಮೇ.15): ತ್ರಿವಳಿ ತಲಾಖನ್ನು ಸಂವಿಧಾನಬಾಹಿರ ಹಾಗೂ ಅಸಿಂಧು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ ಮುಸಲ್ಮಾನರ ವಿವಾಹ-ವಿಚ್ಛೇದನಗಳನ್ನು ನಿಯಂತ್ರಿಸಲು ಹೊಸ ಕಾನೂನು ತರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ ಗೆ ಹೇಳಿದೆ.

ತ್ರಿವಳಿ ತಲಾಖ್, ಮರುಮದುವೆ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯ ಪೀಠಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಈ ವಿಚಾರ ತಿಳಿಸಿದ್ದಾರೆ. ಒಂದು ವೇಳೆ ತ್ರಿವಳಿ ತಲಾಖನ್ನು ನಿಷೇಧಿಸಿದರೆ ಅದಕ್ಕೆ ಪರ್ಯಾಯ ಮಾರ್ಗಗಳೇನು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ ಕೇಂದ್ರ ಸರ್ಕಾರವು ಈ ಸಂಬಂಧ ನೂತನ ಕಾನೂನು ತರುವುದಾಗಿ ಮುಕುಲ್ ರೋಹಟ್ಗಿ ಹೇಳಿದ್ದಾರೆ.

ಇದೇ ವೇಳೆ, ಮುಸಲ್ಮಾನ ಸಮುದಾಯದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಹಾಗೂ ನಿಖಾ ಹಲಾಲಾದಂತಹ ವಿಷಯಗಳ ಬಗ್ಗೆಯೂ ವಿಚಾರಣೆ ನಡೆಯಬೇಕು ಎಂದು ರೋಹಟ್ಗಿ ಅವರು ಕೋರಿಕೊಂಡರು. ಆದರೆ, ಸೀಮಿತ ಕಾಲಾವಕಾಶವಿರುವ ಕಾರಣಕ್ಕೆ ಮೂರು ವಿಚಾರಗಳನ್ನೂ ವಿಚಾರಣೆ ನಡೆಸಲು ಆಗದು. ತ್ರಿವಳಿ ತಲಾಖ್ ಹೊರತಾದ ಎರಡು ವಿಷಯಗಳನ್ನು ಭವಿಷ್ಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ತ್ರಿವಳಿ ತಲಾಖ್ ಕುರಿತು ಕಳೆದ ವಾರದಿಂದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಯು.ಯು. ಲಲಿತ್, ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪಂಚಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಸೋಮವಾರ ನಡೆದದ್ದು ಮೂರನೇ ದಿನದ ವಿಚಾರಣೆ. ಶುಕ್ರವಾರದ ವಿಚಾರಣೆ ಸಂದರ್ಭದಲ್ಲಿ ತ್ರಿವಳಿ ತಲಾಖ್ ಅನ್ನು ಅತ್ಯಂತ ಕೆಟ್ಟ ಹಾಗೂ ಅನಪೇಕ್ಷಿತ ಪದ್ಧತಿ ಎಂದು ಎಂದು ನ್ಯಾಯಾಲಯ ಹೇಳಿತ್ತು.

 

 

 

click me!