
ಬೆಂಗಳೂರು(ಸೆ.15): ‘ನನ್ನ ವಿಧವೆ ಮಾಡು.... ನನ್ನ ಗಂಡನ ಅಹಂಕಾರ ಅಡಗಿಸು.... ನನ್ನ ಗಂಡನ ಅಟ್ಟಹಾಸವನ್ನು ಮಟ್ಟ ಹಾಕು ತಾಯಿ.....!’
‘ಮರು ಮೌಲ್ಯಮಾಪನದಲ್ಲಿ ನನ್ನ ಮಗ ತೇರ್ಗಡೆ ಅಂತ 12 ದಿನದೊಳಗೆ ಮೊಬೈಲ್'ಗೆ ಮೆಸೇಜ್ ಬರುವ ಹಾಗೆ ಮಾಡು. ನನ್ನ ಮಗನ ಕೈ ಬಿಡಬೇಡ. ನೀನೇ ಗತಿ! ನಿನಗೆ ಅಸಾಧ್ಯವಾದುದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ.’ ಅಚ್ಚರಿಯಾಯಿತೇ? ಇವು ನಗರದ ಪ್ರಸಿದ್ಧ ಬನಶಂಕರಿ ದೇವಿಗೆ ಹರಕೆ ಹೊತ್ತಿರುವ ಭಕ್ತರ ಪತ್ರಗಳು. ಬನಶಂಕರಿ ದೇವಾಲಯದ ಹುಂಡಿ ಹಣ ಎಣಿಕೆ ವೇಳೆ ವಿಲಕ್ಷಣ ಹರಕೆ, ಬೇಡಿಕೆಗಳು ಇರುವ ಇಂತಹ ನೂರಾರು ಪತ್ರಗಳು ಸಿಕ್ಕಿದ್ದು, ಮುಜರಾಯಿ ಇಲಾಖೆ ಅಧಿಕಾರಿಗ ಳನ್ನು ತಬ್ಬಿಬ್ಬು ಮಾಡಿದ್ದರೆ, ಜನಸಾಮಾನ್ಯರಲ್ಲೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಗೃಹಿಣಿಯೊಬ್ಬಳು ತನ್ನ ಗಂಡನನ್ನು ಸಾಯಿಸಿ ನನ್ನನ್ನು ವಿಧವೆ ಮಾಡು ಅಂತ ಮೊರೆ ಇಟ್ಟಿದ್ದಾಳೆ. ಇನ್ನೊಂದೆಡೆ ತನ್ನ ಮಗನ ಬಗ್ಗೆಯೂ ಬೇಡಿಕೊಂಡಿರುವ ತಾಯಿ, ಆತ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾನೆ. ಆತನನ್ನು ತೇರ್ಗಡೆಗೊಳಿಸು. ಮಗನನ್ನು, ನನ್ನನ್ನು ನೆಮ್ಮದಿಯಾಗಿಡು. ಆತನಿಗೆ ಆರೋಗ್ಯ, ಸಂಪತ್ತು, ಐಶ್ವರ್ಯ, ದೀರ್ಘಾಯುಷ್ಯ ಎಲ್ಲಾ ಕೊಡು ಎಂದು ಕೋರಿಕೊಂಡಿದ್ದಾಳೆ.
ಪತ್ರವೊಂದರಲ್ಲಿ ತನ್ನ ಗಂಡನನ್ನು ನಿಂದಿಸಿ ವಿವರವಾಗಿ ಬರೆದಿರುವ ಆಕೆ, ತನ್ನ ಗಂಡನ ಕ್ರೂರತನ, ಅಟ್ಟಹಾಸ ಮಿತಿಮೀರಿದೆ. ಆತನ ಅಹಂಕಾರವನ್ನು ತುಳಿದು ಹಾಕು. ಅಲ್ಲದೆ ಆತನಿಗೆ ಸಾವು ಕೊಟ್ಟು ನನ್ನನ್ನು ವಿಧವೆ ಮಾಡು ಎಂದು ಬೇಡಿಕೆ ಇಟ್ಟಿದ್ದಾಳೆ.
ಮತ್ತೊಂದು ಪತ್ರದಲ್ಲಿ, ‘ನನ್ನ ತಲೆ ಕೂದಲು ದೀಪ ಹಚ್ಚುವಾಗ ಸುಟ್ಟಿತು. ಅದು ದೋಷನಾ? ದೋಷ ಕಳೆದಿದೆಯಾ? ಅಮ್ಮ ಏನೂ ತೊಂದರೆ ಕೊಡಬೇಡಮ್ಮ’ ಎಂದಿರುವ ಆಕೆ, ತನ್ನ ಗಂಡನ ಅನಧಿಕೃತ ಸಂಬಂ‘ದ ಕುರಿತೂ ಪ್ರಸ್ತಾಪಿಸಿದ್ದಾರೆ. ‘ನನ್ನ ಗಂಡ ತನ್ನ ಪ್ರಿಯತಮೆಯನ್ನು ತೊರೆದು, ನನ್ನ ಬಳಿ ಕ್ಷಮೆ ಕೇಳಲಿ. ನನ್ನ ಗಂಡ, ಮಕ್ಕಳ ಸುಂದರ ಸಂಸಾರವನ್ನು ನನಗೆ ದಯಪಾಲಿಸು’ ಎಂದು ಕೋರಿಕೆ ಇಟ್ಟಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.