ಮತ್ತೊಂದು ವಿವಾದದಲ್ಲಿ ನಿರ್ಮಲಾ ಸೀತಾರಾಮನ್ ?

Published : Aug 29, 2018, 09:02 PM ISTUpdated : Sep 09, 2018, 09:39 PM IST
ಮತ್ತೊಂದು ವಿವಾದದಲ್ಲಿ ನಿರ್ಮಲಾ ಸೀತಾರಾಮನ್ ?

ಸಾರಾಂಶ

ಸಂಸದ ಮೈತ್ರಿಯನ್ ಜೊತೆಗೆ ಪನ್ನೀರ್, ನಿರ್ಮಲಾ ಕಚೇರಿಗೆ ಹೋದಾಗ ಪನ್ನೀರ್‌ರನ್ನು ಒಳಗೆ ಕರೆಯದೆ ಹೊರಗಡೆ ಕೂಡಿಸಿದ ನಿರ್ಮಲಾ, ಮೈತ್ರಿಯನ್‌ರನ್ನು ಒಳಗೆ ಕರೆಸಿ ಸಿಟ್ಟಿನಿಂದ ಕೂಗಾಡಿದ್ದಾರೆ.

ತಮಿಳುನಾಡಿನ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮೇಲೆ ಅತೀವ ಬೇಸರಗೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ತನ್ನ ಅಣ್ಣನನ್ನು ಉಳಿಸಲು ವಿಶೇಷ ವಿಮಾನ ಕಳಿಸಿದ್ದಕ್ಕಾಗಿ ನಿರ್ಮಲಾರನ್ನು ಭೇಟಿ ಆಗಲು ದಿಲ್ಲಿಗೆ ಬಂದ ಪನ್ನೀರ್ ಸೆಲ್ವಂ ಮೊದಲು ಮೀಡಿಯಾಗಳನ್ನು ಕರೆದು ಹೇಳಿಕೆ ಕೊಟ್ಟಿದ್ದಾರೆ. 

ಇದು ಗೊತ್ತಾದ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ನಿರ್ಮಲಾ ಖಾಸಗಿ ವ್ಯಕ್ತಿಗೆ ಮಿಲಿಟರಿ ವಿಮಾನ ಕಳಿಸಿದ್ದಕ್ಕೆ ಟ್ರೋಲ್ ಶುರು ಆಯಿತು. ನಂತರ ಸಂಸದ ಮೈತ್ರಿಯನ್ ಜೊತೆಗೆ ಪನ್ನೀರ್, ನಿರ್ಮಲಾ ಕಚೇರಿಗೆ ಹೋದಾಗ ಪನ್ನೀರ್‌ರನ್ನು ಒಳಗೆ ಕರೆಯದೆ ಹೊರಗಡೆ ಕೂಡಿಸಿದ ನಿರ್ಮಲಾ, ಮೈತ್ರಿಯನ್‌ರನ್ನು ಒಳಗೆ ಕರೆಸಿ ಸಿಟ್ಟಿನಿಂದ ಕೂಗಾಡಿದ್ದಾರೆ. ಅರ್ಧ ಗಂಟೆ ಕಾದ ಪನ್ನೀರ್ ಹೊರಗಡೆ ಬಂದು ನಿರ್ಮಲಾ ನನಗಿಂತ ಜ್ಯುನಿಯರ್ ಆದರೂ ಒಬ್ಬ ಡಿಸಿಎಂ ಜತೆ ಹೀಗೆಲ್ಲ ನಡೆದುಕೊಳ್ಳುವುದೇ ಎಂದು ಬೇಸರ ತೋಡಿಕೊಂಡಿದ್ದಾರೆ. ಅಂದ ಹಾಗೆ ಈಗೀಗ ಎಐಎಡಿಎಂಕೆ ನಿಧಾನವಾಗಿ ಕಾಂಗ್ರೆಸ್ ನತ್ತ ವಾಲುತ್ತಿದ್ದು, ಬಿಜೆಪಿ ಡಿಎಂಕೆ ಕಡೆ ಕಣ್ಣು ಹಾಕುತ್ತಿದೆ.

ಭವನದಲ್ಲಿ ಕುಡಿದ ಮತ್ತಿನಲ್ಲಿ
ಕರ್ನಾಟಕ ಭವನದಲ್ಲಿ ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಒಬ್ಬಳು ಬೆಳಿಗ್ಗೆ 11 ಗಂಟೆಗೆ ಕುಡಿದು ಬಂದಾಗ, ‘ಯಾಕೆ?’ ಎಂದು ಕೇಳಿದ ಉಪ ನಿವಾಸಿ ಆಯುಕ್ತೆಯನ್ನು ಎಲ್ಲರ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಭವನದ ವೈದ್ಯರನ್ನು ಮಹಿಳಾ ಸಿಬ್ಬಂದಿ ಕುಡಿದ ಪರೀಕ್ಷೆ ಮಾಡಲು ಕಳಿಸಿದಾಗ ಅಲ್ಲಿಂದ ಓಡಿ ಹೋದ ಮಹಿಳಾ ಸಿಬ್ಬಂದಿ ರಾತ್ರಿ 2 ಗಂಟೆಗೆ ಡಾಕ್ಟರ್ ಮನೆಗೆ ಹೋಗಿ ಗಲಾಟೆ ಎಬ್ಬಿಸಿದ್ದಾಳೆ. ಭವನದಲ್ಲಿ ಕುಡಿದು ಕೆಲಸಕ್ಕೆ ಬರುವ ಘಟನೆಗಳು ಸ್ವಲ್ಪ ಜಾಸ್ತಿಯಾಗುತ್ತಿವೆ.

ಒಂದು ಮೀಡಿಯಾ ಸೆಂಟರ್ ಕಥೆ
ಸದಾನಂದ ಗೌಡರು ಮುಖ್ಯಮಂತ್ರಿ ಇದ್ದಾಗಿನಿಂದ ನಂತರ ಬಂದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತು ಈಗ ಕುಮಾರಸ್ವಾಮಿ ಅವರಿಗೆ ದಿಲ್ಲಿ ಕನ್ನಡ ಪತ್ರಕರ್ತರು ನಮಗೊಂದು ಮೀಡಿಯಾ ಸೆಂಟರ್ ಮಾಡಿಕೊಡಿ ಎಂದದ್ದೇ ಬಂತು. ಇಲ್ಲಿಯವರೆಗೂ ಮುಖ್ಯ ಮಂತ್ರಿ ಹೇಳಿದರೂ ಇಲ್ಲಿನ ಅಧಿಕಾರಿಗಳು ಕನ್ನಡ ಮಾಧ್ಯಮ ಪ್ರತಿನಿಧಿಗಳು ಬಂದಾಗ ಕೂರಲು ಒಂದು ರೂಮ್ ಕೊಡಲು ಕೂಡ ಒಪ್ಪುತ್ತಿಲ್ಲ. 

ಆಶ್ಚರ್ಯ ಎಂದರೆ ಮಾಧ್ಯಮಗಳಿಗೆ ಬಿಡಿ, ವಾರ್ತಾ ಇಲಾಖೆ ಸಿಬ್ಬಂದಿ ಗಳಿಗೂ ಕೂರಲು ಒಂದು ರೂಮ್ ಕೊಡುತ್ತಿಲ್ಲ. ಮೂರು ಭವನಗಳಿದ್ದರು ನಮ್ಮ ಪ್ರವಾಸೋದ್ಯಮ ಸ್ಥಳಗಳ ಮಾಹಿತಿ ಕೊಡುವ ಒಂದು ಕಚೇರಿ ಕೂಡ ಇಲ್ಲ. ಭವನ ಎಂದರೆ ಊಟಕ್ಕೆ ಮತ್ತು ವಸತಿಗೆ ಎಂದು ತಿಳಿದುಕೊಂಡಂತಿದೆ ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳು. ಉಳಿದ ರಾಜ್ಯಗಳ ಭವನಗಳು ಮಾತ್ರ ಈ ರೀತಿಯಿಲ್ಲ ಬಿಡಿ.

[ಪ್ರಶಾಂತ್ ನಾತು ಅವರ ಇಂಡಿಯಾಗೇಟ್ ಅಂಕಣದ ಆಯ್ದ ಭಾಗ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: DCM ಡಿಕೆ ಶಿವಕುಮಾರ್
ಪಿಎಂ ಫಸಲ್ ಬಿಮಾ ಯೋಜನೆ ದೊಡ್ಡ ಗೋಲ್‌ಮಾಲ್‌: ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ