
ಕಡಲ ಕಿನಾರೆಯ ನಾಡು ಗೋವಾದಲ್ಲಿ ದಶಕಗಳಿಂದ ನೆಲೆಯೂರಿದ್ದ 55 ಕನ್ನಡಿಗ ಕುಟುಂಬಗಳನ್ನು ರಾತ್ರೋರಾತ್ರಿ ಸುರಿವ ಮಳೆಯಲ್ಲಿ ಇತ್ತೀಚೆಗೆ ಒಕ್ಕಲೆಬ್ಬಿಸಲಾಯಿತು. ಗೋವಾ ಸರ್ಕಾರದ ಈ ನಿರ್ದಾಕ್ಷಿಣ್ಯ ಕ್ರಮ ಇದೇ ಮೊದಲೇನಲ್ಲ. ಹಿಂದೆಯೂ ಇಂತಹ ‘ವಾರ್ಷಿಕ ಒಕ್ಕಲೆಬ್ಬಿಸುವ ಕೈಂಕರ್ಯ’ ನಡೆದಿತ್ತು. ಈವರೆಗಿನ ಅಮಾನವೀಯತೆಗೆ ಬಲಿಯಾಗಿ ತಮ್ಮ ತವರಿನೆಡೆಗೆ ನಿರಾಶ್ರಿತರಾಗಿ ಮುಖಮಾಡಿದ್ದು 60 ಸಾವಿರ ಜನ. ಇನ್ನು ನೆಲೆತಪ್ಪಿದ ಹಕ್ಕಿಯಂತೆ ಬೀದಿ ಬೀದಿ ಅಲೆಯುತ್ತಿರುವವರು ಅದೆಷ್ಟೋ ಜನ! ವರ್ಷಗಟ್ಟಲೇ ಹೋರಾಡಿ ಪೋರ್ಚುಗೀಸರ ಹಿಡಿತದಿಂದ ಗೋವೆಯನ್ನು ವಿಮೋಚನೆಗೊಳಿಸಿದ ಕನ್ನಡಿಗರು ಇಂದು ಗೋವೆಗೆ ಬೇಡವಾಗಿದ್ದಾರೆ. ಕನ್ನಡಿಗರೇ ಉಸಿರು ಎನ್ನುತ್ತಿದ್ದ ಗೋವಾ ಇಂದು ಅದೇ ಕನ್ನಡಿಗರನ್ನು ರಾತ್ರೋರಾತ್ರಿ ಸುರಿವ ಮಳೆಯಲ್ಲಿ ಬೀದಿಗೆ ನೂಕುತ್ತಿದೆ. ಅಂದು ಪೋರ್ಚುಗೀಸರಿಂದ ಗೋವಾ ವಿಮೋಚನೆಗೊಂಡಾಗ ಅಲ್ಲಿನ ಧುರೀಣರು ‘ನೀವಿಲ್ಲದೇ ನಮಗೆ ಸ್ವಾತಂತ್ರ್ಯ ಕಷ್ಟವಿತ್ತು. ನಿಮ್ಮ ಋಣ ಮರೆಯುವುದಿಲ್ಲ’ ಎಂದಿದ್ದರು. ಅಲ್ಲಿಂದ ಗೋವೆಯ ಭಾಗವಾಗಿದ್ದ ಕನ್ನಡಿಗರು ಅಲ್ಲಿನ ಉದ್ಯೋಗ ಕೇಂದ್ರಗಳನ್ನು ಅಚ್ಚುಕಟ್ಟಾಗಿ ಮುನ್ನಡೆಸಿ ನಾಲ್ಕು ದಶಕಗಳಲ್ಲಿ ಗೋವಾಕ್ಕೆ ಹೊಸದೊಂದು ಸ್ವರೂಪ ನೀಡಿದರು. ಅಲ್ಲಿನ ಅಭಿವೃದ್ಧಿಯ ಪ್ರತಿ ಹೆಜ್ಜೆಯಲ್ಲೂ ಕನ್ನಡಿಗರ ಬೆವರಿನ ಸಹಿ ಇದೆ. ಅಲ್ಲಿನ ನರನಾಡಿಗಳಲ್ಲೂ ಕನ್ನಡಿಗರು ಹಾಸುಹೊಕ್ಕಾಗಿದ್ದಾರೆ. ಆದಾಗಿಯೂ ಕನ್ನಡಿಗರು ಗೋವೆಗೆ ಬೇಡವಾಗಿದ್ದಾರೆ.
ಇದು ಮತರಾಜಕಾರಣ:
ಗೋವೆಯಲ್ಲಿ ಇಂಥದ್ದೊಂದು ಶೀತಲ ಸಮರಕ್ಕೆ ಕಾರಣ ಮತರಾಜಕಾರಣ. ನಾಲ್ಕು ದಶಕಗಳ ಕಾಲ ಗೋವಾದ ಆಡಳಿತ ಸೂತ್ರ ಕಾಂಗ್ರೆಸ್ ಕೈಯಲ್ಲಿತ್ತು. ಮರ್ಮಗೋವಾ ಬಂದರಿನ ಆಸುಪಾಸಿನಲ್ಲಿ ನೆಲೆಸಿದ್ದ ಸುಮಾರು 3 ಲಕ್ಷ ಕನ್ನಡಿಗರು ಕಾಂಗ್ರೆಸ್ ಪರ ಒಲವು ಹೊಂದಿದ್ದರು. ಅಲ್ಲದೆ ಅಲ್ಲಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತಿತ್ತು. ಇದು ಪರ್ರಿಕರ್ ಅವರನ್ನು ಕೆರಳಿಸಿದ್ದರಿಂದ ಯೋಜನೆಯ ನೆಪದಲ್ಲಿ ಕನ್ನಡಿಗರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. 2011ರ ಜನಗಣತಿ ವೇಳೆ ನಡೆದ ಒಂದು ಸಮೀಕ್ಷೆಯಲ್ಲಿ ಸುಮಾರು 3 ಲಕ್ಷ ಕನ್ನಡಿಗರು ಗೋವಾದಲ್ಲಿದ್ದರು. ಅವರಲ್ಲಿ 1.8 ಲಕ್ಷ ಕನ್ನಡಿಗರು ಮಾತ್ರ ಮತದಾನದ ಹಕ್ಕು ಹೊಂದಿದ್ದರು. ಸುಮಾರು 60 ಸಾವಿರದಷ್ಟು ಕನ್ನಡಿಗರು ಸೀಜನಲ್ ಕಾರ್ಮಿಕರಾಗಿದ್ದರಿಂದ ಅವರ್ಯಾರೂ ಮತದಾನದ ಹಕ್ಕು ಪಡೆದಿರಲಿಲ್ಲ. ಉಳಿದ 40 ಸಾವಿರ ಕನ್ನಡಿಗರು ಹೊಟ್ಟೆ ತುಂಬಿದರೆ ಸಾಕೆಂದು ಈಗಲೂ ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ತಾವು ಉದ್ಯೋಗ ಅರಸಿ ಗುಳೆ ಬಂದವರು ಎನ್ನುವ ಕೀಳರಿಮೆ ಅವರನ್ನು ಅತ್ತ ಗೋವಾ, ಇತ್ತ ಕರ್ನಾಟಕ ಎರಡೂ ಸರ್ಕಾರಗಳ ನೆರವಿನಿಂದ ದೂರ ಮಾಡಿದೆ. ಮರ್ಮಗೋವಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ಮಯ. 2004ರಲ್ಲಿ ಪರ್ರಿಕರ್ ಎಷ್ಟೇ ಪ್ರಯತ್ನ ಮಾಡಿದ್ದರೂ ಅಲ್ಲಿ ಬಿಜೆಪಿ ಗೆಲ್ಲಲಿಲ್ಲ, ಕಾರ್ಲವಾಸ್ ಅವರು ಪ್ರಚಾರಕ್ಕೆ ಹೋಗದಿದ್ದರೂ ಗೆದ್ದಿದ್ದರು. ಆಗ ಕಾಂಗ್ರೆಸ್ ಮತಗಳನ್ನು ಛಿದ್ರಗೊಳಿಸುವ ಕಾರ್ಯಸೂಚಿ ಪ್ರಾರಂಭವಾಯಿತು. ಅದುವೇ ಸಿಆರ್'ಝಡ್ (ಕೋಸ್ಟಲ್ ರೆಗ್ಯುಲೇಟರಿ ಝೋನ್). ಬಂದರಿನಿಂದ ವಿಮಾನ ನಿಲ್ದಾಣಕ್ಕೆ ನೇರ ಹೆದ್ದಾರಿ, ವೇಶ್ಯಾವಾಟಿಕೆ ನಿರ್ಮೂಲನೆ ಮತ್ತು ಬೀಚ್ ಅಭಿವೃದ್ಧಿ... ಹೀಗೆ ಸಾಲು ಸಾಲು ಯೋಜನೆಗಳನ್ನು ಕೈಗೆತ್ತಿಕೊಂಡ ಗೋವಾ ಸರ್ಕಾರ, ಈ ಯೋಜನೆಗಳ ಹೆಸರಲ್ಲಿ ದಶಕದಿಂದ ನೆಲೆಸಿರುವ ಕನ್ನಡಿಗರನ್ನು ಒಕ್ಕಲೆಬ್ಬಿಸಲು ಮುಂದಾಯಿತು. ಸಂತ್ರಸ್ತರ ಪರವಾಗಿ ಸರ್ಕಾರದ ವಿರುದ್ಧ ಎನ್'ಜಿಒ ಒಂದು ಮುಂಬೈ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಅಲ್ಲಿನ ನಿವಾಸಿಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿದ ಬಳಿಕವೇ ತೆರವುಗೊಳಿಸಿ ಎಂದು ಆದೇಶಿಸಿದ್ದರೂ ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಸರ್ಕಾರ ‘ಆಪರೇಷನ್ ಬೈನಾ’ ಶುರುಮಾಡಿತು. ಬೈನಾದಲ್ಲಿ 2004ರಲ್ಲಿ ನಡೆಸಿದ ಕಾರ್ಯಾಚರಣೆಗೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಅಷ್ಟೇ ಅಲ್ಲ, ವಿಶ್ವಸಂಸ್ಥೆ ಕೂಡ ಗೋವಾ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.
ಕನ್ನಡಿಗರ ಪ್ರಾಬಲ್ಯವಿರುವ ಕ್ಷೇತ್ರ:
ದಕ್ಷಿಣ ಗೋವಾ ಸಂಸತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡಿಗರೇ ನಿರ್ಣಾಯಕ. ಪ್ರತಿ ಕ್ಷೇತ್ರದಲ್ಲಿ 10ರಿಂದ 15 ಸಾವಿರ ಕನ್ನಡಿಗ ಮತದಾರರಿದ್ದಾರೆ. 2004ರಲ್ಲಿ ನಡೆದ ‘ಬೈನಾ ಡೆಮಾಲಿಶನ್’ ಬಳಿಕ ಇಲ್ಲೆಲ್ಲ ಬಿಜೆಪಿ ಗೆಲುವು ಸಾಧಿಸಿದೆ! ಹಾಗಾಗಿ ಆಪರೇಷನ್ ಬೈನಾ ಯಶಸ್ವಿಯಾಗಿದೆ! ಆ ಕ್ಷೇತ್ರವೀಗ ಬಿಜೆಪಿ ವಶವಾಗಿದೆ. ಹಾಗಾಗಿ ಪರ್ರಿಕರ್ ಮುಂದಿನ ದಾಳಿ ಅತಿ ಹೆಚ್ಚು ಕನ್ನಡಿಗರು ಇರುವ ವಾಸ್ಕೋ, ಮಾಪುಸಾ, ಮಡಗಾಂ, ಕುಟ್ಟಳ್ಳಿ, ಡಾಬೋಲಿಂ ಕ್ಷೇತ್ರಗಳ ಮೇಲಿರಬಹುದು. ಇಲ್ಲೂ ಈಗ ಬಿಜೆಪಿಯೇ ಗೆದ್ದಿದೆ. ಒಕ್ಕಲೇಳುವ ಭಯದಿಂದ ಕನ್ನಡಿಗರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ! ಆದರೂ ಈ ವಲಸಿಗ ಕನ್ನಡಿಗರು ಯಾವ ಹೊತ್ತಿನಲ್ಲಿ ಯಾವ ಪಕ್ಷಕ್ಕೆ ಜೈ ಎನ್ನುತ್ತಾರೋ ಎನ್ನುವ ಸಂಶಯದಿಂದ ಅಲ್ಲೂ ಡೆಮಾಲಿಶನ್ ಆರಂಭಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕನ್ನಡಿಗ ಮುಖಂಡರಾದ ಸಿದ್ದಣ್ಣ ಮೇಟಿ, ರಮೇಶ್ ಬಿಂಗಿ.
ಅಲ್ಲಿರುವಂತಿಲ್ಲ-ಇತ್ತ ಬರುವಂತಿಲ್ಲ:
ಯಾವ್ಯಾವುದೋ ನೆಪವೊಡ್ಡಿ ಗೋವಾ ಸರ್ಕಾರ ಈವರೆಗೆ ನಾಲ್ಕು ಬಾರಿ ಕನ್ನಡಿಗರನ್ನು ಒಕ್ಕಲೆಬ್ಬಿಸಿದೆ. ನಿರಾಶ್ರಿತ ಯುವ ಪೀಳಿಗೆ ಬದುಕು ಸಾಗಿಸಲು ಉದ್ಯೋಗ ಅರಸುತ್ತಿದೆ. ಆದರೆ ಗೋವಾ ಸರ್ಕಾರ ಇವರಿಗೆ ಯಾವುದೇ ನೌಕರಿ ಕೊಡುವುದಿಲ್ಲ. ಅಂಥದ್ದೊಂದು ಮೌಖಿಕ ಆದೇಶ ಅಲ್ಲಿ ಜಾರಿಯಲ್ಲಿದೆ. ಅಲ್ಲಿನ ಖಾಸಗಿ ಕಂಪನಿಗಳಲ್ಲೂ ಅವಕಾಶ ನಿರಾಕರಿಸಲಾಗುತ್ತಿದೆ ಮತ್ತು ಬೇರೆ ರಾಜ್ಯದ ಪ್ರತಿಭಾವಂತರ ಜತೆ ಅಲ್ಲಿ ಪೈಪೋಟಿ ಒಡ್ಡುವ ಸಾಮರ್ಥ್ಯ ಕೂಡಾ ಇವರಿಗಿಲ್ಲ. ಇತ್ತ ಕರ್ನಾಟಕ ಸರ್ಕಾರ ಕೂಡ ಇವರಿಗೆ ನೌಕರಿ ಕೊಡುವುದಿಲ್ಲ. ಕಾರಣ ಇವರಿಗೆ ಜಾತಿಯೇ (ರೋಸ್ಟರ್) ಇಲ್ಲ. ಅಲ್ಲದೇ ಕನ್ನಡ ಮಾಧ್ಯಮ, ಗ್ರಾಮೀಣ, 371 ಯಾವುದೇ ಮೀಸಲಾತಿಯಲ್ಲೂ ಇವರು ಬರುವುದಿಲ್ಲ. ಗೋವಾದ ಶಾಲೆಯ ದಾಖಲೆಗಳಲ್ಲಿ ವಿದ್ಯಾರ್ಥಿಯ ಧರ್ಮವನ್ನು ಮಾತ್ರ ನಮೂದು ಮಾಡಲಾಗುತ್ತದೆ. ಹಾಗಾಗಿ ಕರ್ನಾಟಕದಲ್ಲೂ ಉದ್ಯೋಗ ಇಲ್ಲವಾಗಿದೆ! ಈ ರಾಜಕೀಯದಾಟದಲ್ಲಿ ಅತ್ತ ಗೋವೆಯಲ್ಲೂ ನೆಲೆ ಇಲ್ಲದೆ ಇತ್ತ ತವರಲ್ಲೂ ನೆಲೆ ಸಿಗದೆ ಕನ್ನಡಿಗರ ಬದುಕು ಅತಂತ್ರವಾಗಿದೆ.
ವರದಿ: ಮಲ್ಲಿಕಾರ್ಜುನ ಸಿದ್ದಣ್ಣನವರ, ಕನ್ನಡಪ್ರಭ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.